Site icon Vistara News

NAMSCON-2023: ವೈದ್ಯರು ಮಾನವೀಯ ಸೇವೆಯಲ್ಲಿ ತೊಡಗಬೇಕು: ಥಾವರ್ ಚಂದ್ ಗೆಹ್ಲೋಟ್‌

Thaawar Chand Gehlot

ಬೆಂಗಳೂರು: ಆರೋಗ್ಯ ಸೇವೆ ಎಂಬುದು ಮನುಷ್ಯರು ಮತ್ತು ದೇವರ ಸೇವೆ. ಆದ್ದರಿಂದ ದೇಶದ ಪ್ರಗತಿಗಾಗಿ ವೈದ್ಯರೆಲ್ಲ ಒಂದಾಗಬೇಕಾದ ಅಗತ್ಯ ಇದೆ. ಪ್ರತಿ ರೋಗಿಯ ಯೋಗಕ್ಷೇಮವು ವೈದ್ಯರ ಕೈಯಲ್ಲಿದೆ. ಹೀಗಾಗಿ ವೈದ್ಯರು ಮಾನವೀಯ ಸೇವೆಯಲ್ಲಿ ತನ್ಮಯರಾಗಿ ತೊಡಗಿಸಿಕೊಳ್ಳುವುದು ಅನಿವಾರ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್‌ ತಿಳಿಸಿದರು.

ನಗರದ ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಆಯೋಜಿಸಿದ್ದ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿಯ 63ನೇ ವಾರ್ಷಿಕ ರಾಷ್ಟ್ರೀಯ ಸಮಾವೇಶ ಮತ್ತು ಪದವಿ ಪ್ರದಾನ ಸಮಾರಂಭ (NAMSCON-2023) ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕ್ಷೇತ್ರದಲ್ಲೂ ಬೆಳವಣಿಗೆಗೆ ಸಾಮೂಹಿಕ ಪ್ರಯತ್ನ ಮತ್ತು ಸಹಕಾರ ಮುಖ್ಯ. ಹೆಲ್ತ್ ಕೇರ್ ಪರಿಸರ ವ್ಯವಸ್ಥೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವುದಕ್ಕಾಗಿ ಹಾಗೂ ವೈದ್ಯಕೀಯ ಸೇವೆಗಳನ್ನು ಉನ್ನತ ಮಟ್ಟಕ್ಕೆ ಏರಿಸುವುದಕ್ಕೆ ನಾವೆಲ್ಲರೂ ಸಹಕಾರ ನೀಡೋಣ ಎಂದು ಹೇಳಿದರು.

ಇದನ್ನೂ ಓದಿ | School timing : ಶಾಲಾ ಸಮಯ ಬದಲಾವಣೆ ಇಲ್ಲ; ಶಿಕ್ಷಣ ಇಲಾಖೆ ಸ್ಪಷ್ಟ ನಿರ್ಧಾರ

ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಪ್ರೊ. ಎಸ್.ಪಿ. ಸಿಂಗ್ ಬಗೇಲ್ ಅವರು ಮಾತನಾಡಿ, ನಮ್ಮ ಕ್ಷೇತ್ರದ (ವೈದ್ಯಕೀಯ) ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ (NAMS)ನಿಂದ ಗೌರವ ಪಡೆದಂಥ ಡಾ ಒ.ಪಿ. ಖರ್ ಬಂದ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ. ಮೂರು ದಿನಗಳ ಸಮ್ಮೇಳನವು ಮೌಲ್ಯಯುತವಾದ ವೈಜ್ಞಾನಿಕ ಜ್ಞಾನದ ಅಮೂಲ್ಯವಾದ ಸಂಗ್ರಹವಾಗಲಿದೆ ಎಂಬ ವಿಶ್ವಾಸ ನನಗಿದೆ ಮತ್ತು ಈ ಜ್ಞಾನವು ಈ ಸಂಸ್ಥೆ ಮತ್ತು ರಾಷ್ಟ್ರದ ಪ್ರಗತಿಗೆ ಫಲ ನೀಡುತ್ತದೆ ಎಂದು ಭಾವಿಸುತ್ತೇನೆ ಎಂದರು.

ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ (ಸ್ವತಂತ್ರ) ಡಾ. ಜಿತೇಂದ್ರ ಶರ್ಮಾ ಮಾತನಾಡಿ, ದೇಶವು ಆಶಾವಾದದಿಂದ ತುಂಬಿರುವಾಗ ನಾವು ಇಲ್ಲಿ ಸೇರುವುದು ಅನಿರೀಕ್ಷಿತ ಕ್ಷಣವಾಗಿದೆ. ಈಗಿನ ಸಂದರ್ಭದಲ್ಲಿ ವಿಶ್ವವು ಭಾರತದ ಪ್ರಾಮುಖ್ಯವನ್ನು ಗುರುತಿಸುತ್ತಿದೆ, ಅದರಲ್ಲೂ ನಿರ್ದಿಷ್ಟವಾಗಿ ವೈದ್ಯಕೀಯ ವಿಜ್ಞಾನ ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲಿ ಗುರುತಿಸುತ್ತಿದೆ. ಅದಕ್ಕೆ ಎರಡು ಅತ್ಯುತ್ತಮ ಉದಾಹರಣೆಗಳೆಂದರೆ ಚಂದ್ರಯಾನ ಮತ್ತು ಗಮನಾರ್ಹವಾದ ಲಸಿಕೆ ಯಶೋಗಾಥೆ’ ಎಂದು ಹೇಳಿದರು.

ಎನ್ಎಎಂಎಸ್ ವಾರ್ಷಿಕ ವರದಿಯನ್ನು ಮುಖ್ಯ ಅತಿಥಿಗಳು ಮತ್ತು ಗೌರವ ಅತಿಥಿಗಳು ಸಮಾವೇಶದಲ್ಲಿ ಬಿಡುಗಡೆ ಮಾಡಿದರು. ಗೋಕುಲ ಎಜುಕೇಷನ್ ಫೌಂಡೇಷನ್ ಮುಖ್ಯಸ್ಥರು ಮತ್ತು ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್‌ ಸೈನ್ಸಸ್ (RUAS) ಕುಲಪತಿ ಡಾ.ಎಂ.ಆರ್. ಜಯರಾಮ್, ಪ್ರೊ. ಉಪಕುಲಪತಿ ಡಾ. ಒ.ಪಿ. ಖ‌ರ್‌ ಬಂದ, ರಾಮಯ್ಯ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್, ಡೀನ್ ಡಾ.ಶಾಲಿನಿ ಸಿ ನೂಯಿ, ಎನ್‌ಎಎಂಎಸ್ ಅಧ್ಯಕ್ಷರಾದ ಡಾ ಶಿವ್ ಕೆ. ಸರಿನ್, ಕಾರ್ಯದರ್ಶಿ ಡಾ.ಉಮೇಶ್ ಕಪಿಲ್ ಸೇರಿ ಅನೇಕ ಗಣ್ಯರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಈ ಸಮಾರಂಭದಲ್ಲಿ RUAS ಪ್ರೊ. ಉಪಕುಲಪತಿ ಡಾ. ಒ.ಪಿ. ಖರ್ ಬಂದ ಅವರನ್ನು ಎನ್‌ಎಎಂಎಸ್ ಗೌರವ ಪ್ರೊಫೆಸರ್ ಎಂದು ಗೌರವಿಸಲಾಯಿತು. ಇದರ ಜತೆಗೆ ನೂರಕ್ಕೂ ಹೆಚ್ಚು ಪ್ರಖ್ಯಾತ ಹಿರಿಯ ಹೆಲ್ತ್ ಕೇರ್ ವೃತ್ತಿಪರರನ್ನು ಫೆಲೋಷಿಪ್ ಮತ್ತು ಎನ್ಎಎಂಎಸ್ ಸದಸ್ಯತ್ವದೊಂದಿಗೆ ಗೌರವಿಸಲಾಯಿತು.

ಇದನ್ನೂ ಓದಿ | Anti Rabies Vaccine: ಪ್ರಾಣಿ ಕಡಿತಕ್ಕೊಳಗಾದವರಿಗೆ ಆ್ಯಂಟಿ ರೇಬಿಸ್ ಲಸಿಕೆ ಉಚಿತ

ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್‌ ಸೈನ್ಸಸ್ (RUAS) ಅಡಿಯಲ್ಲಿ ಪ್ರತಿಷ್ಠಿತ ಸಂಸ್ಥೆ ರಾಮಯ್ಯ ಮೆಡಿಕಲ್ ಕಾಲೇಜು (RMC) ಕಾರ್ಯ ನಿರ್ವಹಿಸುತ್ತದೆ. ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಅಕಾಡೆಮಿ ಎಂಬುದು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

Exit mobile version