Site icon Vistara News

Dog Bite : ಯಲಹಂಕದಲ್ಲಿ ಹುಚ್ಚು ನಾಯಿ ದಾಳಿ; ಬಾಲಕರು ಸೇರಿ 7 ಮಂದಿಗೆ ಗಾಯ

Dog attack

ಬೆಂಗಳೂರು: ಸಿಕ್ಕ ಸಿಕ್ಕವರ ಮೇಲೆ ಎರಗಿ ಹುಚ್ಚು ನಾಯಿ ದಾಳಿ (Dog Bite) ಮಾಡುತ್ತಿದೆ. ಯಲಹಂಕದ ಕೊಂಡಪ್ಪ ಲೇಔಟ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಹುಚ್ಚುನಾಯಿಯೊಂದು ದಾಳಿ ಮಾಡಿ ಕಚ್ಚುತ್ತಿದೆ.

ಹುಚ್ಚುನಾಯಿ ಕಚ್ಚಿ ಏಳು ಜನರು ಗಾಯಗೊಂಡಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕರಿಬ್ಬರು, ಓರ್ವ ಬಾಲಕಿ ಗಂಭೀರ ಗಾಯಗೊಂಡಿದ್ದಾರೆ. ಜತೆಗೆ ಯಲಹಂಕದ ಮೂವರು ಯುವಕರು ಹಾಗು ಮಣಿಪುರದ ಯುವಕನಿಗೆ ಹುಚ್ಚುನಾಯಿ ಕಚ್ಚಿದೆ.

ನಿನ್ನೆ ಸಂಜೆ ರಸ್ತೆ ಪಕ್ಕದಲ್ಲಿ ನಡೆದು ಹೋಗುತ್ತಿದ್ದವರ ಮೇಲೆ ಹುಚ್ಚುನಾಯಿ ದಾಳಿ ಮಾಡುತ್ತಿದೆ. ಎಲ್ಲ ಗಾಯಾಳುಗಳು ಯಲಹಂಕ ಸರ್ಕಾರಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹುಚ್ಚುನಾಯಿ ದಾಳಿಯಿಂದ ಯಲಹಂಕ ಮತ್ತು ಕೊಂಡಪ್ಪ ಲೇಔಟ್‌ನ ಜನರು ಭಯಭೀತರಾಗಿದ್ದಾರೆ.

ಬಿಬಿಎಂಪಿಯವರು ಕೂಡಲೇ ಬೀದಿನಾಯಿಗಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಜತೆಗೆ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿರುವ ಹುಚ್ಚುನಾಯಿಯನ್ನು ಕೂಡಲೇ ಹಿಡಿಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬಾಲಕಿ ಮೇಲೆ ಎರಗಿ ಕಿತ್ತು ತಿಂದ ಹುಚ್ಚು ನಾಯಿಗಳು

ಕಲಬುರಗಿ: ಕಲಬುರಗಿ ನಗರದ ಮಿಜ್ಬಾ ನಗರದಲ್ಲಿ ಹುಚ್ಚು ನಾಯಿಗಳ (Dog Bite) ಹಾವಳಿ ಹೆಚ್ಚಾಗಿದ್ದು, ಜನರ ನಿದ್ದೆಗೆಡಿಸಿದೆ. ರಸ್ತೆಯಲ್ಲಿ ಓಡಾಡುವವರ ಮೇಲೆ ಎರಗಿ ಕಚ್ಚುತ್ತಿದ್ದು, ಜನರು ಭಯಗೊಂಡಿದ್ದಾರೆ. ಮಿಜ್ಬಾ ನಗರದಲ್ಲಿ ಹುಚ್ಚು ನಾಯಿ ಕಡಿತ (Dog Bite) ಪ್ರಕರಣಗಳು ಹೆಚ್ಚಾಗಿವೆ. ಸದ್ಯ ಬಾಲಕಿಯೊಬ್ಬ ಮೇಲೆ ಹುಚ್ಚು ನಾಯಿಗಳು ದಾಳಿ ಮಾಡಿದೆ.

ಬಾಲಕಿ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿರುವ ಹುಚ್ಚು ನಾಯಿಗಳು, ಬಾಲಕಿಯ ಗಲ್ಲ, ಹಾಗೂ ಕತ್ತಿನ ಮಾಂಸವನ್ನೇ ಕಿತ್ತು ಹಾಕಿದೆ. ಮಿಜ್ಬಾ ನಗರ ನಿವಾಸಿ ಸಫೂರಾ (6) ಎಂಬಾಕೆ ನಾಯಿಗಳ ದಾಳಿಗೆ ಒಳಗಾದವಳು. ಸದ್ಯ ಸಫೂರಾ ಆರೋಗ್ಯ ಸ್ಥಿತಿಯು ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಹುಚ್ಚು ನಾಯಿಗಳು ಹೆಚ್ಚಾಗಿ ಮಕ್ಕಳನ್ನೇ ಕಚ್ಚುತ್ತಿದ್ದು, ನಾಯಿಯಿಂದ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಇತ್ತ ಹುಚ್ಚುನಾಯಿಗಳನ್ನು ಸೆರೆ ಹಿಡಿಯಲು ನಿರ್ಲಕ್ಷ್ಯ ವಹಿಸಿದ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ಹೊರಹಾಕಿದ್ದಾರೆ

ಮಲಗಿದ್ದ ಕರುವಿನ ಮೇಲೆ ದಾಳಿ; ಕಿತ್ತು ತಿಂದು, ರುಂಡ ಬಿಸಾಡಿದ ಬೀದಿ ನಾಯಿಗಳು

ವಿಜಯನಗರ: ರಸ್ತೆಯಲ್ಲಿ ಓಡಾಡುವ ಜನರ ಮೇಲೆ ಎರಗಿ ದಾಳಿ ಮಾಡುತ್ತಿದ್ದ ಬೀದಿ ನಾಯಿಗಳು, ಇದೀಗ ದನಕರುಗಳ ಮೇಲೆ ದಾಳಿ (Street Dog Attack) ಮಾಡುತ್ತಿವೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಜಂಬುನಾಥ ರಸ್ತೆಯಲ್ಲಿ ಬೀದಿ ನಾಯಿಗಳ ದಾಳಿಗೆ ಕರುವೊಂದು ಬಲಿಯಾಗಿತ್ತು.

ಕೊಟ್ಟಿಗೆ ಹೊರಗೆ ಮಲಗಿದ್ದ ಕರುವಿನ ಮೇಲೆ ಏಕಾಏಕಿ ಹತ್ತಾರು ಬೀದಿನಾಯಿಗಳು ದಾಳಿ ಮಾಡಿವೆ. ಕಟ್ಟಿ ಹಾಕಿದ್ದರಿಂದ ಕರು ನಾಯಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಆಗಿಲ್ಲ. ಕರುವಿನ ದೇಹವನ್ನು ಹಿಡಿದು ಎಳೆದಾಡಿ ತಿಂದು ಹಾಕಿರುವ ಬೀದಿ ನಾಯಿಗಳು ಬಳಿಕ ರುಂಡವನ್ನು ಬಿಟ್ಟು ಹೋಗಿವೆ.

ರಸ್ತೆಯಲ್ಲೇ ಕರುವಿನ ತಲೆಭಾಗ ಬಿದ್ದಿದೆ. ಇನ್ನು ಬೀದಿನಾಯಿಗಳ ದಾಳಿಯು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೀದಿ ನಾಯಿಗಳ ಹಾವಳಿ ತಡೆಗಟ್ಟಲು ಸಾಕಷ್ಟು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಈ ಹಿಂದೆ ಮಕ್ಕಳ ಮೇಲೆಯೂ ಬೀದಿ ನಾಯಿಗಳು ದಾಳಿ ಮಾಡಿದ್ದವು.

ಚಿತ್ತವಾಡ್ಗಿ ಸೇರಿದಂತೆ ಕೆಲ ಸ್ಲಂ ಏರಿಯಾಗಳಲ್ಲಿ ನಾಯಿಗಳು ಮಕ್ಕಳ ಮೇಲೆ ದಾಳಿ ಮಾಡಿತ್ತು. ಹೀಗಾಗಿ ನಗರಸಭೆ, ಆಸ್ಪತ್ರೆ ಎದುರು ಸಾರ್ವಜನಿಕರು ಪ್ರತಿಭಟನ ನಡೆಸಿದರು. ವಿಜಯನಗರ ಜಿಲ್ಲೆಯ ಹೊಸಪೇಟೆಯ ನಾನಾ ಕಡೆ ನಾಯಿ ದಾಳಿಗೆ ಹಲವರು ಗಾಯಗೊಂಡಿದ್ದಾರೆ.

ಹಸುಗೂಸನ್ನು ತಿಂದು ಹಾಕಿದ ಬೀದಿ ನಾಯಿಗಳು; ಅನೈತಿಕ ಸಂಬಂಧದ ಶಿಶುವೇ!

ಗದಗ: ದುರಸ್ಥಿ ಮನೆಯೊಂದರ ಬಳಿ ಆಗ ತಾನೇ ಜನಿಸಿದ ಮಗುವನ್ನು (New Born Baby) ಕಟುಕರು ಎಸೆದು ಹೋಗಿದ್ದಾರೆ. ರಸ್ತೆಯಲ್ಲಿ ಬಿದ್ದಿದ್ದ ಜೀವಂತ ಹಸುಗೂಸನ್ನು ಬೀದಿ ನಾಯಿಗಳು ತಿಂದು ಹಾಕಿವೆ. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ದೇವಿಹಾಳ‌ ಎಂಬಲ್ಲಿ ಈ ಅಮಾನವೀಯ ಘಟನೆ ನಡೆದಿದೆ.

ಡಿ.21ರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ದೇವಿಹಾಳ ಗ್ರಾಮದ ರತ್ನಮ್ಮ ಬಡ್ನಿ ಎಂಬುವವರ ದುರಸ್ಥಿ ಮನೆಯ ಹತ್ತಿರ ನವಜಾತ ಶಿಶುವನ್ನು ಎಸೆದು ಹೋಗಿದ್ದಾರೆ. ಅನೈತಿಕ ಸಂಬಂಧದಿಂದ ಜನಿಸಿದ ಮಗು ಎಂದು ಹೇಳಲಾಗುತ್ತಿದೆ. ಅನೈತಿಕ ಸಂಬಂಧಕ್ಕೆ ಈ ಮಗು ಜನಿಸಿದ್ದು, ತಮ್ಮ ಸಂಬಂಧವನ್ನು ಮುಚ್ಚಿಡಲು ಸಲುವಾಗಿ ಹುಟ್ಟಿದ ಮಗುವನ್ನು ಎಸೆದು ಹೋಗಿದ್ದಾರೆ ಎಂದು ದೂರಲ್ಲಿ ಉಲ್ಲೇಖಸಿಲಾಗಿದೆ.

ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು

ರಸ್ತೆಯಲ್ಲಿ ಬಿದ್ದಿದ್ದ ಮಗುವನ್ನು ನಾಯಿಗಳು ಅರ್ಧಾಂಬರ್ದಾ ತಿಂದು ಹಾಕಿವೆ. ಮಗುವಿನ ತಲೆಯ ಭಾಗವಿಲ್ಲದ ದೇಹ ಪತ್ತೆಯಾಗಿದೆ. ಕೂಸಿನ ವಾರಸುದಾರರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕ್ರಮಕೈಗೊಳ್ಳಿ ಎಂದು ಸ್ಥಳೀಯರು ದೂರು ನೀಡಿದ್ದಾರೆ.

ಅರ್ಧಾಂಬರ್ದಾ ಸಿಕ್ಕಿರುವ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಶಿರಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version