ಬೆಂಗಳೂರು: ದೀಪಾವಳಿ ಸಂದರ್ಭದಲ್ಲಿ ಹಿಂದೂಗಳ ಆರಾಧ್ಯ ದೇವರು, ದೇವತೆಗಳು ಹಾಗೂ ಮಹಾನ್ ನಾಯಕರ ಚಿತ್ರಗಳಿರುವ ಹಾಗೂ ಚೀನಾ ನಿರ್ಮಿತ ಪಟಾಕಿಗಳನ್ನು ಮಾರಾಟ ಮಾಡಬಾರದು. ಪಟಾಕಿಗಳ ತ್ಯಾಜ್ಯವನ್ನು ಜನರು ತುಳಿಯುವುದು, ಕಸಕ್ಕೆ ಹಾಕುವುದರಿಂದ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ ಅಂತಹ ಪಟಾಕಿಗಳನ್ನು ಮಾರಾಟ ಮಾಡಬಾರದು ಎಂದು ಹಿಂದೂ ಜನಜಾಗೃತಿ ಸಮಿತಿ ಮನವಿ ಮಾಡಿದೆ.
ಶ್ರೀ ಕೃಷ್ಣ, ವಿಷ್ಣು, ಅಯ್ಯಪ್ಪ ಸ್ವಾಮಿ, ವೆಂಕಟೇಶ್ವರ ಹಾಗೂ ಶ್ರೀಲಕ್ಷ್ಮೀ ಇನ್ನಿತರ ದೇವರು, ದೇವತೆಗಳ ಚಿತ್ರ ಹಾಗೂ ನೇತಾಜಿ ಸುಭಾಷಚಂದ್ರ ಬೋಸ್, ಬಾಲಗಂಗಾಧರ ತಿಲಕ್ ಮತ್ತಿತರ ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿಗಳನ್ನು ಸಿಡಿಸಿದ ನಂತರ ಪ್ಯಾಕೆಟ್ ಹಾಗೂ ಕಾಗದಗಳು ಛಿದ್ರವಾಗಿ ರಸ್ತೆ, ಚರಂಡಿಯಲ್ಲಿ ಬಿದ್ದಿರುತ್ತವೆ. ತ್ಯಾಜ್ಯವನ್ನು ಜನರು ತುಳಿಯುವುದರಿಂದ ಅವಮಾನ ಮಾಡಿದಂತಾಗುತ್ತದೆ. ಹೀಗಾಗಿ ಚೀನಾ ನಿರ್ಮಿತ ಹಾಗೂ ದೇವರುಗಳು, ಮಹಾನ್ ನಾಯಕರ ಚಿತ್ರಗಳಿರುವ ಪಟಾಕಿಗಳನ್ನು ಮಾರಾಟ ಮಾಡಬಾರದು ಎಂದು ನಗರದ ಶಂಕರಮಠದ ಮೈದಾನ, ವಿದ್ಯಾ ಪೀಠ ಸೇರಿ ವಿವಿಧ ಭಾಗಗಳಲ್ಲಿ ಪಟಾಕಿ ಮಾರಾಟಗಾರರಿಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ಮಾಡಲಾಯಿತು.
ಇದನ್ನೂ ಓದಿ | Deepavali 2022 | ದೀಪಾವಳಿಯಲ್ಲಿ ದೀಪಗಳನ್ನೇಕೆ ಹಚ್ಚಬೇಕು? ಯಾವ ಎಣ್ಣೆ ದೀಪ ಶ್ರೇಷ್ಠ?
ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಮಾತನಾಡಿ, ಭಾರತೀಯ ದಂಡ ಸಂಹಿತೆ 295 ಅನ್ವಯ ಇಂತಹ ಪಟಾಕಿಗಳ ಮಾರಾಟ ಮಾಡುವುದು ‘ಧಾರ್ಮಿಕ ಭಾವನೆಗೆ ಘಾಸಿ ಗೊಳಿಸುವುದು’ ಎಂಬ ಗಂಭೀರವಾದ ಅಪರಾಧವಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಪಟಾಕಿಯಲ್ಲಿ ದೇವರ ಚಿತ್ರ ಮುದ್ರಿಸುವುದನ್ನು ನಿಷೇಧಿಸಲಾಗಿದೆ. ಹಾಗಾಗಿ ತಾವು ಸಹ ಇಂತಹ ಪಟಾಕಿಗಳ ಮಾರಾಟ ಮಾಡಬಾರದು ಎಂದು ಮಾರಾಟಗಾರರಿಗೆ ಮನವಿ ಮಾಡಿದರು.
ಸಮಿತಿಯ ಮನವಿಗೆ ಸ್ಪಂದಿಸಿದ ಅಂಗಡಿ ಮಾಲೀಕರು, ಮುಂದಿನ ವರ್ಷದಿಂದ ಯಾವುದೇ ರೀತಿಯ ದೇವರು ಹಾಗೂ ಮಹಾನ್ ನಾಯಕರ ಚಿತ್ರಗಳಿರುವ ಪಟಾಕಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಹೇಳಿದರು.
ಈ ವೇಳೆ ಹಿಂದೂ ಮುಖಂಡರಾದ ಶಿವಕುಮಾರ, ಸುರೇಶ್ ಗೌಡ, ಅರುಣ್, ಗುರುಪ್ರಸಾದ್, ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | CM Deepavali | ಆರ್ಟ್ ಆಫ್ ಲಿವಿಂಗ್ ಸೆಂಟರ್‌ನಲ್ಲಿ ಗೋಪೂಜೆ ಮಾಡಿ ಗೋವಿನ ಹಣೆಗೆ ಮುತ್ತಿಟ್ಟ ಬೊಮ್ಮಾಯಿ