ಬೆಂಗಳೂರು: ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ (Double Decker Flyover) ಕೊನೆಗೂ ಸಿದ್ಧವಾಗಿದೆ. ರಾಗಿ ಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಹಳದಿ ಮಾರ್ಗದ (ಆರ್‌ವಿ ರಸ್ತೆ- ಬೊಮ್ಮಸಂದ್ರ) 3.3 ಕಿ.ಮೀ ಉದ್ದದ ರಸ್ತೆ ಮೇಲ್ಸೇತುವೆ ಪೂರ್ಣಗೊಂಡಿದೆ. ಜೂನ್ 15ರಂದು ಅಥವಾ ನಂತರ ರಾಗಿಗುಡ್ಡದಿಂದ ಸಿಎಸ್‌ಬಿ ಒಂದು ಬದಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ ಇದಕ್ಕೂ ಮುನ್ನ ಅಧಿಕಾರಿಗಳು ಅಂತಿಮ ತಪಾಸಣೆ ನಡೆಸಲಿದ್ದಾರೆ. ಕೆಳ ಡೆಕ್ ಅನ್ನು ವಾಹನಗಳ ಸಂಚಾರಕ್ಕೆ ಇದ್ದರೆ, ಮೇಲಿನ ಡೆಕ್ ನಮ್ಮ ಮೆಟ್ರೋಗಾಗಿ ಬಳಕೆ ಮಾಡಲಾಗುತ್ತದೆ.
ಬಿಎಂಆರ್‌ಸಿಎಲ್ ಸಿಎಸ್‌ಬಿ ಜಂಕ್ಷನ್‌ನಲ್ಲಿ 5 ಲೂಪ್‌ಗಳು (A,B,C,D ಮತ್ತುE) ಮತ್ತು ರ‍್ಯಾಂಪ್‌ಗಳನ್ನು ನಿರ್ಮಿಸುತ್ತಿದೆ. ಎ,ಬಿ,ಸಿ ಲೂಪ್‌ಗಳು ರಾಗಿಗುಡ್ಡ / ಬಿಟಿಎಂ ಲೇಔಟ್ ಕಡೆಯಿಂದ ಕೆ.ಆರ್.ಪುರಂ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ. ಈಗಾಗಲೇ ಎ,ಬಿ, ಸಿ ರ‍್ಯಾಂಪ್‌ಗಳಲ್ಲಿ ಎಲ್ಲಾ ಕಾರ್ಯಗಳು ಪೂರ್ಣಗೊಂಡಿದ್ದು, ಜೂನ್‌ನಲ್ಲಿ ತೆರೆಯುವ ನಿರೀಕ್ಷೆಯಿದೆ. 2025ರ ಜೂನ್ ವೇಳೆಗೆ ಡಿ ಮತ್ತು ಇ ರ‍್ಯಾಂಪ್‌ಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿಗ್ನಲ್ ಫ್ರೀ ಕಾರಿಡಾರ್
ಫ್ಲೈಓವರ್ ಈಗಿರುವ ರಸ್ತೆಯಿಂದ 8 ಮೀಟರ್ ಎತ್ತರದಲ್ಲಿದ್ದರೆ, ಮೆಟ್ರೋ ವಯಾಡಕ್ಟ್ 16 ಮೀಟರ್ ಎತ್ತರದಲ್ಲಿದೆ. ಈಗಾಗಲೇ ರಸ್ತೆ ಮತ್ತು ಮೆಟ್ರೋ ಸ್ಟ್ರಕ್ಚರ್ಸ್ ಜೈಪುರ, ನಾಗ್ಪುರ ಮತ್ತು ಮುಂಬೈನಂತಹ ನಗರಗಳಲ್ಲಿ ಇವೆ. ರಾಗಿಗುಡ್ಡ ಮತ್ತು ಸಿಎಸ್‌ಬಿ ನಡುವಿನ ವಿಭಾಗವು ಸಿಗ್ನಲ್ ಫ್ರೀ ಕಾರಿಡಾರ್ ಆಗಲಿದೆ. ಇದರಿಂದ ಪೀಕ್ ಸಮಯದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ. ರಾಗಿಗುಡ್ಡದಿಂದ ಬರುವ ವಾಹನಗಳು ಸಿಗ್ನಲ್ ಇಲ್ಲದೆ ಸಿಎಸ್‌ಬಿ ದಾಟಿ ಎಚ್ಎಸ್ಆರ್ ಲೇಔಟ್ ಮತ್ತು ಹೊಸೂರು ರಸ್ತೆ ಕಡೆಗೆ ತಲುಪಬಹುದಾಗಿದೆ. ಔಟರ್ ರಿಂಗ್ ರೋಡ್ ಮತ್ತು ಹೊಸೂರು ರಸ್ತೆಯನ್ನು ಸೇರುವ ಸಿಎಸ್‌ಬಿ ಜಂಕ್ಷನ್ ಬೆಂಗಳೂರಿನ ಅತ್ಯಂತ ಜನನಿಬಿಡ ಜಂಕ್ಷನ್‌ಗಳಲ್ಲಿ ಒಂದಾಗಿದೆ. ಈ ಜಂಕ್ಷನ್ ಔಟರ್ ರಿಂಗ್ ರೋಡ್‌ನಲ್ಲಿ ಬ್ಲೂ ಲೈನ್ (ಸಿಎಸ್‌ಬಿ-ಕೆಆರ್ ಪುರಂ) ಮತ್ತು ಯೆಲ್ಲೋ ಲೈನ್ (ಆರ್‌ವಿ ರಸ್ತೆ-ಬೊಮ್ಮಸಂದ್ರ) ಎರಡು ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ.
ಇದನ್ನೂ ಓದಿ: Road Accident : ಪ್ರತ್ಯೇಕ 5 ಕಡೆಗಳಲ್ಲಿ ಆ್ಯಕ್ಸಿಡೆಂಟ್; ಕಾರು ಡಿಕ್ಕಿಗೆ ಚೆಲ್ಲಾಪಿಲ್ಲಿಯಾಗಿ ಬಿದ್ದ ಸವಾರ ಸಾವು
ಯೆಲ್ಲೋ ಲೈನ್ ಕಾರಿಡಾರ್ ಟ್ರಯಲ್ ರನ್
ಜೂನ್ 13ರಂದು ಯೆಲ್ಲೋ ಮಾರ್ಗವಾದ ಆರ್‌ವಿರಸ್ತೆ – ಬೊಮ್ಮಸಂದ್ರದ ಮುಖ್ಯ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಈ ಹಿಂದೆ ಜೂನ್ 7 ರಂದು ನಿಗದಿಯಾಗಿದ್ದ ಪ್ರಾಯೋಗಿಕ ಸಂಚಾರವನ್ನು ತಾಂತ್ರಿಕ ಸಮಸ್ಯೆಗಳಿಂದಾಗಿ ಮುಂದೂಡಲಾಯಿತು. ಇನ್ಫೋಸಿಸ್ ಮತ್ತು ಬಯೋಕಾನ್ ನಂತಹ ಪ್ರಮುಖ ಕಂಪನಿಗಳನ್ನು ಹೊಂದಿರುವ ಬೆಂಗಳೂರಿನ ಟೆಕ್ ಹಬ್ ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಮೆಟ್ರೋ ಜಾಲಕ್ಕೆ ಸಂಪರ್ಕಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.
ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರವನ್ನು ಸಂಪರ್ಕಿಸುವ 18.8 ಕಿ.ಮೀ ಹಳದಿ ಮಾರ್ಗವು ಮೊದಲು 2021ರಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿತ್ತು, ಆದರೆ ಬೋಗಿಗಳು ಲಭ್ಯವಿಲ್ಲದ ಕಾರಣ ಬಿಎಂಆರ್‌ಸಿಎಲ್ ಗಡುವನ್ನು 2024 ರ ಡಿಸೆಂಬರ್‌ಗೆ ಮುಂದೂಡಿತು. ಸದ್ಯ ಈ ಮಾರ್ಗವನ್ನು ಸಾರ್ವಜನಿಕರಿಗೆ ತೆರೆಯುವ ಮೊದಲು ರೈಲ್ವೆ ಮಂಡಳಿಯಿಂದ ತಾಂತ್ರಿಕ ಅನುಮೋದನೆ ಮತ್ತು ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ಸಿಎಂಆರ್ಎಸ್) ಅನುಮೋದನೆ ಸಿಗಬೇಕಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ