Site icon Vistara News

Havyaka Mahasabha: ಡಾ. ಗಿರಿಧರ ಕಜೆ 9ನೇ ಬಾರಿಗೆ ಹವ್ಯಕ ಮಹಾಸಭಾ ಅಧ್ಯಕ್ಷರಾಗಿ ಪುನರಾಯ್ಕೆ

Dr Giridhara Kaje

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾದ ನೂತನ ಅಧ್ಯಕ್ಷರಾಗಿ ಡಾ. ಗಿರಿಧರ ಕಜೆ ಅವರು 9ನೇ ಬಾರಿಗೆ ಪುನರಾಯ್ಕೆ ಆಗಿದ್ದಾರೆ. ಮಲ್ಲೇಶ್ವರದ ಹವ್ಯಕ ಭವನದಲ್ಲಿ ಭಾನುವಾರ ನಡೆದ ಅಖಿಲ ಹವ್ಯಕ ಮಹಾಸಭಾದ 80ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದೇ ವೇಳೆ 2024ರ ಡಿಸೆಂಬರ್‌ನಲ್ಲಿ 3ನೇ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.

ವಾರ್ಷಿಕ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಗಿರಿಧರ ಕಜೆ ಅವರು, 2024ರ ಡಿಸೆಂಬರ್‌ನಲ್ಲಿ 3ನೇ ವಿಶ್ವ ಹವ್ಯಕ ಸಮ್ಮೇಳನ ಆಯೋಜಿಸಲಾಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಅಮೆರಿಕ, ಸಿಂಗಾಪುರ, ಇಂಗ್ಲೆಂಡ್‌ ಮುಂತಾದ ದೇಶಗಳಲ್ಲಿಯೂ ಪೂರ್ವಭಾವಿ ಸಮ್ಮೇಳನವನ್ನು ಸಂಘಟಿಸಲು ಆಲೋಚಿಸಲಾಗಿದೆ ಎಂದು ತಿಳಿಸಿದರು.

ವಿಶ್ವ ಹವ್ಯಕ ಸಮ್ಮೇಳನದ ಪೂರ್ವಭಾವಿಯಾಗಿ ಹವ್ಯಕ ನ್ಯಾಯವಾದಿಗಳ ಸಮಾವೇಶ, ಹವ್ಯಕ ಮಹಿಳಾ ಸಮಾವೇಶ, ಹವ್ಯಕ ಉದ್ಯಮಿಗಳ ಸಮಾವೇಶ, ಹವ್ಯಕ ಸಂಗೀತ ಉತ್ಸವ, ಹವ್ಯಕ ಯಕ್ಷಗಾನ ಉತ್ಸವ, ಹವ್ಯಕ ವೈದಿಕ ಸಮಾವೇಶ, ಗಾಯತ್ರಿ ಮಹೋತ್ಸವ, ಸಂಸ್ಕಾರೋತ್ಸವ, ಹವ್ಯಕ ಸಾಹಿತ್ಯ – ಭಾಷಾ ಸಮಾವೇಶ, ಕ್ರೀಡೋತ್ಸವ, ಹವ್ಯಕ ಹೈನುಗಾರರ ಸಮಾವೇಶ ಮುಂತಾದವು ವರ್ಷಪೂರ್ತಿ ನಡೆಯಲಿದ್ದು, ಸಮಾಜವನ್ನು ಆ ಮೂಲಕ ಜಾಗೃತಗೊಳಿಸಲಾಗುವುದು ಎಂದು ಹೇಳಿದರು.

ಇದನ್ನೂ ಓದಿ | ತಾತಯ್ಯ ತತ್ವಾಮೃತಂ: ಭಕ್ತ ಜನರಿಗೆ ಯಾತರ ಭಯವೂ ಇಲ್ಲ

ಹವ್ಯಕ ಸಮಾಜ ಜನಸಂಖ್ಯಾದೃಷ್ಟಿಯಲ್ಲಿ ಅತಿಚಿಕ್ಕ ಸಮಾಜವಾದರೂ, ನಾವು ಸಂಘಟಿತವಾದರೆ ಎಲ್ಲವೂ ಸಾಧ್ಯ. ಸಂಘಟನೆಗೆ ಅದ್ಭುತವಾದ ಶಕ್ತಿಯಿದ್ದು, ಇನ್ನಷ್ಟು ಸಂಘಟಿತವಾಗುವ ಮೂಲಕ ಸಮಾಜವನ್ನು ಸಶಕ್ತವಾಗಿಸೋಣ ಎಂದು ಕರೆ ನೀಡಿದರು.

ಅಡಿಕೆ ಎಲೆಚುಕ್ಕಿ ರೋಗ ಸಮಸ್ಯೆಗೆ ಸ್ಪಂದನೆ

ಅಡಿಕೆ ಹವ್ಯಕರ ಪಾರಂಪರಿಕ ಕೃಷಿಯಾಗಿದ್ದು, ಪ್ರಸ್ತುತ ಅಡಿಕೆ ಎಲೆಚುಕ್ಕಿ ರೋಗ ಕೃಷಿಕರನ್ನು ಬಾಧಿಸುತ್ತಿದೆ. ಸಮಾಜದ ಕಷ್ಟಕ್ಕೆ ಮಹಾಸಭೆ ಸರ್ವದಾ ಸ್ಪಂದಿಸಲಿದ್ದು, ಹವ್ಯಕ ಕೃಷಿಕರ ಸಮಾವೇಶವನ್ನು ಆಯೋಜಿಸಿ, ಕೃಷಿಕರ ಜತೆಗೆ ಕೃಷಿ ವಿಜ್ಞಾನಿಗಳ ಸಂವಾದವನ್ನು ನಡೆಸಿ ಸಮಕಾಲೀನ ಸವಾಲುಗಳಿಗೆ ಉತ್ತರಕಂಡುಕೊಳ್ಳಲು ಪ್ರಯತ್ನಿಸೋಣ ಎಂದರು.

ವಿಶೇಷವಾಗಿ ನವರಾತ್ರಿ ಉತ್ಸವ

ಹವ್ಯಕ ಮಹಾಸಭೆಯ ಸಮಾಜಮುಖೀ ಕಾರ್ಯವನ್ನು ಗುರುತಿಸಿ ಮಂಜುನಾಥ ಬಿಲ್ಲವ ಅವರು ಭಟ್ಕಳ ಸಮೀಪ ದುರ್ಗಾಪರಮೇಶ್ವರೀ ದೇವಾಲಯ ಸಹಿತವಾದ ಸುಮಾರು ಒಂದು ಎಕರೆ ಜಾಗವನ್ನು ದಾನರೂಪದಲ್ಲಿ ನೀಡಿದ್ದು, ಇಲ್ಲಿ ನವರಾತ್ರಿ ಉತ್ಸವವನ್ನು ಈ ಬಾರಿ ವಿಶೇಷವಾಗಿ ಆಯೋಜಿಸಲಾಗುವುದು ಎಂದರು.

ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿ, ಮಹಾಸಭೆಯ ಕಾರ್ಯಗಳಿಗೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ನೀಡುತ್ತಿರುವ ಬೆಂಬಲಕ್ಕೆ ಅಭಿನಂದನೆ ಸಲ್ಲಿಸಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಆಯವ್ಯಯ ಮಂಡಿಸಿ, ಖರ್ಚುವೆಚ್ಚ, ಮಹಾಸಭೆಯಲ್ಲಿ ಆರ್ಥಿಕ ಶಿಸ್ತಿಗಾಗಿ ಕೈಗೊಂಡಿರುವ ಕ್ರಮಗಳ ಮಾಹಿತಿ ನೀಡಿದರು.

ಇದನ್ನೂ ಓದಿ | Mysore Dasara : ದಸರಾದಲ್ಲಿ ಉರ್ದು ಕವಿಗೋಷ್ಠಿ; ಟಿಪ್ಪು ಸಂಸ್ಕೃತಿ ವೈಭವೀಕರಣ ಎಂದ ಸುನಿಲ್‌ ಕುಮಾರ್

ಉಪಾಧ್ಯಕ್ಷ ಶ್ರೀಧರ ಭಟ್ಟ ಕೆಕ್ಕಾರು, ಕಾರ್ಯದರ್ಶಿ ಪ್ರಶಾಂತ್ ಭಟ್ಟ, ಆದಿತ್ಯ ಕಲಗಾರು ಹಾಗೂ ಸಾಗರ, ಮಂಗಳೂರು, ಉತ್ತರ ಕನ್ನಡ ಸೇರಿ ವಿವಿಧ ಪ್ರಾಂತಗಳ ನಿರ್ದೇಶಕರು, ಸದಸ್ಯರು ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದರು,

ನೂತನ ಆಡಳಿತ ಮಂಡಳಿ

ಡಾ. ಗಿರಿಧರ ಕಜೆ – ಅಧ್ಯಕ್ಷರು

ಆರ್.ಎಂ. ಹೆಗಡೆ – ಉಪಾಧ್ಯಕ್ಷರು

ಶ್ರೀಧರ ಜೆ. ಭಟ್ಟ ಕೆಕ್ಕಾರು – ಉಪಾಧ್ಯಕ್ಷರು

ಸಿಎ. ವೇಣುವಿಘ್ನೇಶ ಸಂಪ – ಪ್ರಧಾನ ಕಾರ್ಯದರ್ಶಿ

ಪ್ರಶಾಂತ ಕುಮಾರ ಜಿ. ಭಟ್ಟ ಮಲವಳ್ಳಿ – ಕಾರ್ಯದರ್ಶಿ

ಆದಿತ್ಯ ಹೆಗಡೆ ಕಲಗಾರು – ಕಾರ್ಯದರ್ಶಿ

ಕೃಷ್ಣಮೂರ್ತಿ ಎಸ್ ಭಟ್ ಯಲಹಂಕ – ಕೋಶಾಧಿಕಾರಿ

ಇದಕ್ಕೂ ಮೊದಲು ವಿವಿಧ ಪ್ರಾಂತ್ಯಗಳ 15 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರ್ದೇಶಕರನ್ನು ಅವಿರೋಧ ಆಯ್ಕೆ ಮಾಡಲಾಗಿದೆ.

Exit mobile version