ಬೆಂಗಳೂರು: ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುವುದರಿಂದ ಸೇವಾ ಮನೋಭಾವ, ಸಂಸ್ಕಾರ ನೀಡುವುದರ ಜತೆಗೆ ದೇಶದ ದೃಷ್ಟಿ ಬಾಧಿತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಸಕ್ಷಮ ಬೆಂಗಳೂರು ಘಟಕ ಪ್ರಾಂತ ಅಧ್ಯಕ್ಷ ಡಾ. ಕೆ. ಎಲ್.ಸುಧೀರ್ ಪೈ ಹೇಳಿದರು.
ಸಕ್ಷಮ ಬೆಂಗಳೂರು ಘಟಕ ಹಾಗೂ ಆರ್‌ಎನ್ಎಸ್ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ನಗರದ ಚನ್ನಸಂದ್ರದ ಆರ್‌ಎನ್ಎಸ್ ಸಭಾಂಗಣದಲ್ಲಿ ರಾಷ್ಟೀಯ ನೇತ್ರದಾನ ಪಾಕ್ಷಿಕ ಪ್ರಯುಕ್ತ ಶನಿವಾರ ನಡೆದ ಬೃಹತ್ ನೇತ್ರದಾನ ಜಾಗೃತಿ ಶಿಬಿರ ಹಾಗೂ ಸಾಧಕ ದಿವ್ಯಾಂಗ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದನ್ನೂ ಓದಿ | Blood Donation | ರಕ್ತದಾನ ಮಾಡಿ ಜೀವ ಉಳಿಸಿ, ನಿಮ್ಮ ಆರೋಗ್ಯ ಹೆಚ್ಚಿಸಿ; ರಾಮಚಂದ್ರ
ಬೆಂಗಳೂರಿನ ನೇತ್ರಧಾಮ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನೇತ್ರ ತಜ್ಞೆ ಡಾ.ಎಚ್.ಸಂಹಿತ ಅವರು, ನೇತ್ರದಾನದ ಮಹತ್ವ, ನೇತ್ರದಾನದ ಬಗ್ಗೆ ಜನರಲ್ಲಿ ಇರುವ ತಪ್ಪು ಕಲ್ಪನೆಗಳು ಹಾಗೂ ನೇತ್ರದಾನ ಮಾಡುವ ವಿಧಾನಗಳ ಬಗ್ಗೆ ಮಾಹಿತಿ ನೀಡಿ, ನೇತ್ರದಾನ ಮಾಡುವುದರಿಂದ 4 ಜನರಿಗೆ ದೃಷ್ಟಿ ಸಿಗುವ ಆಧುನಿಕ ತಂತ್ರಜ್ಞಾನಗಳ ಬಗ್ಗೆ ವಿವರಿಸಿದರು.
ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಇಬ್ಬರು ಸಾಧಕ ದಿವ್ಯಾಂಗ ಶಿಕ್ಷಕರಾದ, ಸಂಗೀತ ಕ್ಷೇತ್ರದ ಅದ್ವಿತೀಯ ಸಾಧನೆಗಾಗಿ ಮೈಸೂರಿನ ಖ್ಯಾತ ದೃಷ್ಟಿಬಾಧಿತ ಗಾಯಕಿ ಹಾಗೂ ಸಂಗೀತ ಗುರು ವಿದುಷಿ ಮಾಲಿನಿ ಹಾಗೂ ಎನ್‌ಟಿಟಿಎಫ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಅಲ್ಲಿನ ದಿವ್ಯಾಂಗ ಮಕ್ಕಳಿಗೆ ಉಚಿತ ಊಟ, ವಸತಿ ನೀಡುವುದು ಸೇರಿ ಇತರ ಸೇವಾಕಾರ್ಯಗಳಿಗಾಗಿ ಪೋಲಿಯೋ ಬಾಧಿತ ವಿಜಯನಗರದ ಲಕ್ಷ್ಮೀಪತಯ್ಯ ಅವರನ್ನು ಸನ್ಮಾನಿಸಲಾಯಿತು.
ಸಕ್ಷಮ ಬೆಂಗಳೂರು ಘಟಕದ ಅಧ್ಯಕ್ಷ ಡಾ. ಕಿರಣ್ ಎಸ್ . ಮೂರ್ತಿ ಪ್ರಾಸ್ತಾವಿಕ ನುಡಿಗಳ ಮೂಲಕ ಸಕ್ಷಮದ ಸೇವಾಕಾರ್ಯಗಳ ಕಿರುಪರಿಚಯ ನೀಡಿದರು. ಡಾ. ಹರಿಕೃಷ್ಣ ರೈ ಅವರು ಸೇರಿದ್ದ ಸಭಿಕರಿಗೆ ನೇತ್ರದಾನದ ಹಾಗೂ ಕಾರ್ನಿಯ ಅಂಧತ್ವ ಮುಕ್ತ ಭಾರತ ಅಭಿಯಾನದ ಪ್ರತಿಜ್ಞೆಯನ್ನು ಬೋಧಿಸಿದರು. ಸಭಾಕಾರ್ಯಕ್ರಮದ ನಂತರ ಸುಮಾರು 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಟಾಥಾನ್ – ಕಣ್ಣು ಕಟ್ಟಿ ನಡಿಗೆ ಮೂಲಕ ರಸ್ತೆಗಳಲ್ಲಿ ನೇತ್ರದಾನ ಜಾಗೃತಿಯ ಘೋಷಣೆ ಕೂಗುತ್ತ ನೇತ್ರದಾನದ ಅರಿವು ಮೂಡಿಸಿದರು.
ಇದನ್ನೂ ಓದಿ | ಮೈಸೂರು ದಸರಾ ಉದ್ಘಾಟನೆಗೆ ಬರ್ತಾರೆ ರಾಷ್ಟ್ರಪತಿ ದ್ರೌಪದಿ ಮುರ್ಮು: ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ