Site icon Vistara News

ಜಿ.ವೆಂಕಟಸುಬ್ಬಯ್ಯ ನಿಘಂಟನ್ನು ಎಂತಹ ಮೇಧಾವಿಗಳೂ ಮೆಚ್ಚಿಕೊಳ್ಳಬೇಕು: ಡಾ.ನಾಗರಾಜು

ಜಿ.ವೆಂಕಟಸುಬ್ಬಯ್ಯ

ಬೆಂಗಳೂರು: ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಅವರು ಬರೆದ ಇಂಗ್ಲಿಷ್-ಕನ್ನಡ ನಿಘಂಟನ್ನು ಎಂತಹ ಮೇಧಾವಿಗಳೂ ಮೆಚ್ಚಿಕೊಳ್ಳಬೇಕು. ಅವರಿಗೆ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕು, ಮಕ್ಕಳು ಚೆನ್ನಾಗಿ ಓದಿ ಉನ್ನತ ಹಂತಕ್ಕೆ ತಲುಪಬೇಕು ಎಂಬ ಆಸೆ ಇತ್ತು. ಹೀಗಾಗಿ ಅವರು “ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ” ಹಾಸ್ಟೆಲ್‌ಗೆ ಬಂದಾಗ ಮಕ್ಕಳ ಕುಂದುಕೊರತೆ ವಿಚಾರಿಸುತ್ತಿದ್ದರು ಎಂದು ಡಾ.ನಾಗರಾಜು ತಿಳಿಸಿದರು.

ಜಯನಗರದ 8ನೇ ಬ್ಲಾಕ್‌ನ ಪ್ರೊ.ಜಿ. ವೆಂಕಟಸುಬ್ಬಯ್ಯ ಸಭಾಂಗಣದಲ್ಲಿ ಅರ್ಪಣ ಸೇವಾ ಸಂಸ್ಥೆ ಹಾಗೂ ಬೆಂಗಳೂರು ಕಿಡ್ನಿ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪದ್ಮಶ್ರೀ ಪುರಸ್ಕೃತ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ 110ನೇ ಜನ್ಮದಿನಾಚರಣೆಯಲ್ಲಿ ಮಂಗಳವಾರ ಮಾತನಾಡಿದರು. ‌

ಇದನ್ನೂ ಓದಿ | ಎಸಿಬಿ ವಿಚಾರದಲ್ಲಿ ಸುಪ್ರೀಂ ಮೊರೆ ಹೋಗಿದ್ದು ರಾಜ್ಯ ಸರಕಾರವಲ್ಲ: ಲೋಕಾಯಕ್ತಕ್ಕೆ ಬಲ ತುಂಬಲು ಸಿಎಂ ಸಭೆ

“ರಾಮಕೃಷ್ಣ ಸ್ಟೂಡೆಂಟ್ಸ್ ಹೋಂ” ಹಾಸ್ಟೆಲ್‌ನಲ್ಲಿ 1963ರಿಂದ 1970 ರವರೆಗೂ ನನ್ನ ವೈದ್ಯ ಶಿಕ್ಷಣ ಮುಗಿಸಿ ನಂತರ ಸರ್ಕಾರಿ ಸೇವೆಗೆ ಸೇರಿದೆ. ಆ ಸಮಯದಲ್ಲಿ ವರದರಾಜನ್‌ ಅವರು ಅಧ್ಯಕ್ಷರಾಗಿದ್ದರು. ನಂತರ ಜಿ.ವೆಂಕಟಸುಬ್ಬಯ್ಯ ಅವರು ಕಾರ್ಯದರ್ಶಿಯಾಗಿದ್ದಾಗ ಭೇಟಿಯಾಗಿದ್ದೆ. ಅವರನ್ನು ಭೇಟಿಯಾದಾಗ ಬಹಳ ಆತ್ಮೀಯವಾಗಿ ಮಾತನಾಡುತ್ತಿದ್ದರು. ನಂತರ 2019ರಲ್ಲಿ ಹಾಸ್ಟೆಲ್‌ನ ಶತಮಾನೋತ್ಸವ ಕಾರ್ಯಕ್ರಮ ಮಾಡಲಾಗಿತ್ತು. 107 ವರ್ಷವಾಗಿದ್ದರೂ ಅಷ್ಟೇ ಜ್ಞಾನವಂತರಾಗಿ, ಕ್ರಿಯಾಶೀಲರಾಗಿದ್ದರು ಎಂದು ತಿಳಿಸಿದರು.

ರಂಗಕರ್ಮಿ ಬಿ.ವಿ.ರಾಜಾರಾಂ ಅವರು ಮಾತನಾಡಿ, ವೆಂಕಟಸುಬ್ಬಯ್ಯ ಅವರು ತಮ್ಮ ಕೆಲಸಗಳನ್ನು ಹಲವು ಅಡಚಣೆಗಳ ನಡುವೆ ಮಾಡಿದ್ದಾರೆ. ಹಣಕ್ಕಾಗಿ ದುಡಿಯುವ ಜನರ ನಡುವೆ ನಿಘಂಟಿಗಾಗಿ ಪ್ರಾಮಾಣಿಕವಾಗಿ ಸದಾ ದುಡಿದಿದ್ದಾರೆ. ರಾಮಕೃಷ್ಣ ಸ್ಟೂಡೆಂಟ್ಸ್‌ ಹೋಂನಲ್ಲಿ ಓದಿರುವ ವಿದ್ಯಾರ್ಥಿಗಳು ಇಂದು ಉನ್ನತ ಹಂತದಲ್ಲಿ ಇದ್ದಾರೆ ಎಂದು ಹೇಳಿದರು. ಬಳಿಕ ಅರ್ಪಣ ಸಂಸ್ಥೆಯ ಸಿ.ವಿ.ಸುಂದರೇಶ್‌ ಮಾತನಾಡಿದರು.

ಅರ್ಪಣ ಸೇವಾ ಸಂಸ್ಥೆ ಹಾಗೂ ಬೆಂಗಳೂರು ಕಿಡ್ನಿ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಬರೋಬ್ಬರಿ 110 ಮಂದಿ ಆರ್ಥಿಕ ಅಶಕ್ತರಿಗೆ ಧನಸಹಾಯ ಮಾಡಲಾಯಿತು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಜನರು ಕಡ್ಡಾಯವಾಗಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುತ್ತದೆ. ಒಂದು ಬಾರಿ ಡಯಾಲಿಸಿಸ್‌ ಮಾಡಿಸಿಕೊಳ್ಳಲು ಕನಿಷ್ಠವೆಂದರೂ 1ರಿಂದ 2 ಸಾವಿರ ರೂಪಾಯಿ ಖರ್ಚಾಗುತ್ತದೆ. ಹೀಗಿರುವಾಗ ಕೆಲ ಸೋಂಕಿತರಿಗೆ ವಾರಕ್ಕೆ 2ರಿಂದ 3 ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಾಗಿರುತ್ತದೆ.

ಆರ್ಥಿಕವಾಗಿ ಸಧೃಡರಾಗಿರುವವರಿಗೆ ಹೊರೆಯಾಗದಿದ್ದರೂ ಮಧ್ಯಮ ಹಾಗೂ ದುರ್ಬಲರಿಗೆ ತೀವ್ರ ಸಮಸ್ಯೆ ಎದುರಾಗುತ್ತದೆ. ಹೀಗಾಗಿ ಅವರಿಗೆ ಅನುಕೂಲವಾಗಲು ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಸ್ಮರಣಾರ್ಥ ʼಆಸರೆʼ ಯೋಜನೆಯಲ್ಲಿ ಹಣವನ್ನು ಮುಡಿಪಾಗಿಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.

ಇದನ್ನೂ ಓದಿ | ಬಿಯಾಂಡ್‌ ಬೆಂಗಳೂರು ಸಮಾವೇಶಕ್ಕೆ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ರಾಜೀವ್‌ ಚಂದ್ರಶೇಖರ್‌ಗೆ ಆಹ್ವಾನ

Exit mobile version