ಬೆಂಗಳೂರು: ವೇದ, ವೇದಾಂತದ ಖ್ಯಾತ ವಿದ್ವಾಂಸರು, ಪ್ರಸಿದ್ಧ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ.ಪ್ರಸನ್ನಾಚಾರ್ಯ ಎಸ್.ಕಟ್ಟಿ ಅವರಿಗೆ ರಾಷ್ಟ್ರಮಟ್ಟದ 109ನೇ ಜ್ಯೋತಿಷ್ಯ ಸಮಾವೇಶದಲ್ಲಿ ‘ಜ್ಯೋತಿಷ್ಯ ಮಹಾಚಾರ್ಯ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಮೈಸೂರಿನ ಮಾಯಕಾರ ಗುರುಕುಲವು ಬೆಂಗಳೂರಿನ ಗವಿಗಂಗಾಧರೇಶ್ವರ ದೇಗುಲ ಸಮೀಪದ ಉದಯ ಭಾನು ಕಲಾ ಸಂಘದಲ್ಲಿ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಡಾ.ಪ್ರಸನ್ನಾಚಾರ್ಯ ಕಟ್ಟಿ ಅವರು, ಜಾತಕದಲ್ಲಿ `ಸಪ್ತಮಭಾವ ಚಿಂತನೆ’ ವಿಷಯವಾಗಿ ಸುದೀರ್ಘವಾದ ವಿಷಯ ಮಂಡಿಸಿದ್ದರು. ಈ ವಿಷಯ ಅಧ್ಯಯನ ಮತ್ತು ಮಂಡನೆಗೆ ರಾಷ್ಟ್ರಮಟ್ಟದ ಜ್ಯೋತಿಷ್ಯ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದಕ್ಕಾಗಿ ಅವರಿಗೆ ‘ಜ್ಯೋತಿಷ್ಯ ಮಹಾಚಾರ್ಯʼ ಮತ್ತು ʼ “ಅತೀಂದ್ರಿಯ ವಿಜ್ಞಾನದ ವಿಶೇಷಜ್ಞʼ ಎಂಬ ಬಿರುದು ನೀಡಿ ಸತ್ಕರಿಸಲಾಯಿತು.
ಮೂಲತಃ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಬಾಗೇವಾಡಿ ರಾಮೇನಹಳ್ಳಿಯ ಶ್ರೀಕಾಂತಾಚಾರ್ಯ ತಮ್ಮಣ್ಣಾಚಾರ್ಯ ಕಟ್ಟಿ ಮತ್ತು ಶ್ರೀಮತಿ ಸುನಂದಾಬಾಯಿ ಎಸ್.ಕಟ್ಟಿ ಇವರ ಪುತ್ರರಾಗಿರುವ ಡಾ. ಪ್ರಸನ್ನಾಚಾರ್ಯ ಎಸ್. ಕಟ್ಟಿ, ಬೆಂಗಳೂರಿನ ಶ್ರೀಮದುತ್ತರಾಧಿಮಠದ ಶ್ರೀ ಜಯತೀರ್ಥ ವಿದ್ಯಾಪೀಠದಲ್ಲಿ ವೇದ, ವೇದಾಂತ, ವಾಸ್ತು, ಜ್ಯೋತಿಷ್ಯ ಮತ್ತು ಪೌರೋಹಿತ್ಯದಲ್ಲಿ ವ್ಯಾಸಂಗ ಮಾಡಿದವರು. ಶ್ರೀಮದುತ್ತರಾಧಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಉಡುಪಿ ಕ್ಷೇತ್ರದ ರಾಜಾಂಗಣದಲ್ಲಿ `ಶ್ರೀಮನ್ಯಾಯ ಸುಧಾ ಮಂಗಳ ಮಹೋತ್ಸವ’ ನೆರವೇರಿಸಿದ್ದರು. ಆಗ ಈ ಮಹೋತ್ಸವದಲ್ಲಿ ಡಾ.ಪ್ರಸನ್ನಾಚಾರ್ಯ ಕಟ್ಟಿ ಅವರು ವಿದ್ವಾಂಸರಾಗಿ ಹೊರ ಹೊಮ್ಮಿದ್ದರು.
ಇದನ್ನೂ ಓದಿ | Raja Marga Column : ಸಂಗೀತವೇ ನನ್ನ ಧರ್ಮ ಎಂದವರು ಗಾನ ಗಂಧರ್ವ ಯೇಸುದಾಸ್
ಹಬ್ಬ ಹರಿದಿನಗಳ ವೇಳೆ ಕನ್ನಡದ ವಿವಿಧ ವಾಹಿನಿ ಮತ್ತು ಮಾಧ್ಯಮಗಳಲ್ಲಿ ಧಾರ್ಮಿಕ, ವೈಚಾರಿಕ ವಿಷಯಗಳ ಜೊತೆಗೆ ಜ್ಯೋತಿಷ್ಯದ ವಿಷಯವಾಗಿ 5 ಸಾವಿರಕ್ಕೂ ಅಧಿಕ ನೇರ ಪ್ರಸಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಹಿರಿಮೆ ಹೊಂದಿದ್ದಾರೆ. ಕನ್ನಡದ ಸುಪ್ರಸಿದ್ಧ ದಿನ ಪತ್ರಿಕೆಗಳು, ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಕಟ್ಟಿ ಅವರು ಧಾರ್ಮಿಕ, ವಾಸ್ತು ಮತ್ತು ಜ್ಯೋತಿಷ್ಯ, ವೇದ, ವೇದಾಂತ ಹಾಗೂ ಹಬ್ಬ ಹರಿದಿನಗಳ ವಿಷಯವಾಗಿ ಐನೂರಕ್ಕೂ ಅಧಿಕ ಲೇಖನಗಳನ್ನು ಬರೆಯುವ ಮೂಲಕ ನಾಡಿಗೆ ಚಿರಪಚಿತರಾಗಿದ್ದಾರೆ.
ಹಲ ಪ್ರಶಸ್ತಿಗಳ ಹಿರಿಮೆ
ಧಾರ್ಮಿಕ ವಿಚಾರಧಾರೆಗಳ ಮೂಲಕ ನಾಡಿನ ಮನೆ ಮಾತಾಗಿರುವ ಡಾ.ಪ್ರಸನ್ನಾಚಾರ್ಯ ಎಸ್. ಕಟ್ಟಿ ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿವೆ. ಗೌರವ ಡಾಕ್ಟರೇಟ್, ವಿದ್ವಾನ್ ಪ್ರಶಸ್ತಿ, ಜ್ಯೋತಿಷ್ಯ ಮಹರ್ಷಿ, ಕರ್ನಾಟಕ ಆಧ್ಯಾತ್ಮ ಭಾಸ್ಕರ ರತ್ನ, ಜೀವಮಾನ ಶ್ರೇಷ್ಠ ಧಾರ್ಮಿಕ ಸೇವಾ ರತ್ನ, ರಾಷ್ಟ್ರೀಯ ಜ್ಯೋತಿಷ್ಯ ರತ್ನ, ಹರಿದಾಸ ಅನುಗ್ರಹ, ಕರ್ನಾಟಕ ಜ್ಯೋತಿಷ್ಯ ರತ್ನ ಸೇರಿದಂತೆ ಹಲವು ಹನ್ನೊಂದು ಪ್ರಶಸ್ತಿ ಪುರಸ್ಕಾರಗಳು ಇವರ ಮುಡಿಗೇರಿವೆ.
ನೂರಾರು ಜ್ಯೋತಿಷ್ಯ ಪಂಡಿತರು ಪಾಲ್ಗೊಂಡಿರುವ ಈ ಕಾರ್ಯಾಗಾರದಲ್ಲಿ ಬೆರಣಿಕೆಯಷ್ಟು ಜ್ಯೋತಿಷಿಗಳು ಮಾತ್ರ ಆಯ್ಕೆಯಾಗಿದ್ದರು. ಈ ಪೈಕಿ ಡಾ. ಪ್ರಸನ್ನಾಚಾರ್ಯ ಎಸ್. ಕಟ್ಟಿ ಅವರು ಮಂಡಿಸಿದ `ಕುಂಡಲಿಯಲ್ಲಿ ಸಪ್ತಮ ಭಾವ ಚಿಂತನೆ’ ವಿಷಯ ಎಲ್ಲ ಜ್ಯೋತಿಷ್ಯ ವಿದ್ವನ್ಮಣಿಗಳಿಗೆ ಮೆಚ್ಚುಗೆಗೆ ಪಾತ್ರವಾದ ಪರಿಣಾಮ ಮಾಯಕಾರ ಗುರುಕುಲವು ಡಾ.ಪ್ರಸನ್ನಾಚಾರ್ಯ ಎಸ್. ಕಟ್ಟಿ ಸೇರಿದಂತೆ ಆರು ಮಂದಿಯನ್ನು ಪುರಸ್ಕರಿಸಿ ಬಿರುದಾಂಕಿತ ನೀಡಿದೆ.
ಉತ್ತರ ಭಾರತದಲ್ಲಿ ಅಧ್ಯಯನ
ಡಾ. ಪ್ರಸನ್ನಾಚಾರ್ಯ ಕಟ್ಟಿಯವರು ಉತ್ತರ ಕರ್ನಾಟಕ ಮತ್ತು ಉತ್ತರ ಭಾರತದ ಪ್ರಮುಖ ವಿದ್ವಾಂಸರ ಬಳಿ ವಿಶೇಷ ಉನ್ನತ ಅಧ್ಯಯನ ಮಾಡಿದ್ದಾರೆ. ವೇದ, ವೇದಾಂತ, ವಾಸ್ತು, ಜ್ಯೋತಿಷ್ಯ ಮತ್ತು ಪೌರೋಹಿತ್ಯವನ್ನು ಸುದೀರ್ಘ 12 ವರ್ಷಗಳಿಂದ ಅಭ್ಯಸಿಸಿದ್ದಾರೆ. ಕಳೆದ 15 ವರ್ಷಗಳಿಂದ ಡಾ.ಪ್ರಸನ್ನಾಚಾರ್ಯ ಕಟ್ಟಿಯವರು ಸಮಾಜಮುಖಿಯಾಗಿ ಆಸ್ತಿಕ ಜನಗಳಿಗೆ ತಮ್ಮ ಅನುಭವ ಧಾರೆ ಎರೆಯುತ್ತಿದ್ದಾರೆ. ಜ್ಯೋತಿಷ್ಯದಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಿರುವ ಅವರು, ವಿವಿಧ ಮಾಧ್ಯಮಗಳಲ್ಲಿ ಇವರ ವಿಶೇಷ ಸಾಧನೆಗಳು ಪ್ರಕಟಗೊಂಡಿವೆ. ಅಂತರಾಷ್ಟ್ರೀಯ ಮಟ್ಟದ, ರಾಷ್ಟ್ರಮಟ್ಟದ ಹಾಗೂ ರಾಜ್ಯ ಮಟ್ಟದ ಹಲವಾರು ಪ್ರಮುಖ ಸಂಘ, ಸಂಸ್ಥೆಗಳಲ್ಲಿ ಸಂಘಟನಾ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ
ಈ ಸಂದರ್ಭದಲ್ಲಿ ಮಾಯಕಾರ ಗುರುಕುಲದ ಮುಖ್ಯಸ್ಥ ಡಾ. ವಿದ್ವಾನ್ ಮಧು ದೀಕ್ಷಿತ್, ವಿದ್ವಾನ್ ಗೋಪಾಲಕೃಷ್ಣ ಶರ್ಮಾ, ಡಾ.ಜಯಲಕ್ಷ್ಮಿ ಹೆಚ್.ಕೆ., ಗೋವಿಂದ ವೇದಪ್ರಕಾಶ್ ಶಾಂಡಿಲ್ಯ, ವಿಠ್ಠಲ್ ಭಟ್, ವಿದ್ವಾನ್ ಆರ್. ವೆಂಕಟಕೃಷ್ಣಾಚಾರ್ಯ ಸೇರಿದಂತೆ ಇನ್ನೂ ಅನೇಕ ಜ್ಯೋತಿಷ್ಯ ವಿದ್ವನ್ಮಣಿಗಳು, ರಾಜ್ಯದ ನಾನಾ ಭಾಗಗಳಿಂದಲೂ ಆಗಮಿಸಿದ್ದ ನೂರಾರು ಸಂಖ್ಯೆಯ ಜ್ಯೋತಿಷ್ಯ ವಿದ್ವಾಂಸರು ಹಾಗೂ ಜ್ಯೋತಿಷ್ಯ ಕಲಿಕಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.