Site icon Vistara News

Solar Energy | ಸೌರಶಕ್ತಿ ಬಳಸಿಕೊಂಡು ಮುನ್ನಡೆಯುವುದು ತಕ್ಷಣದ ಆದ್ಯತೆ: ಡಾ. ಶಾಲಿನಿ ರಜನೀಶ್

Solar Energy

ಬೆಂಗಳೂರು: ರಾಜ್ಯದಲ್ಲಿ ಶೇ.100ರಷ್ಟು ವಿದ್ಯುದೀಕರಣ ಹೊಂದಿದ್ದರೂ, ಒಟ್ಟಾರೆ ನಿರ್ವಹಣೆಯೂ ಸೇರಿ ಸಂಗ್ರಹಣೆ, ವಿತರಣೆ, ಹಣಕಾಸು, ಕಾರ್ಯಾಚರಣೆಗಳ ವಿಷಯವಾಗಿ ಸವಾಲುಗಳಿವೆ. ಹಾಗಾಗಿ, ಸೌರಶಕ್ತಿಯನ್ನು(Solar Energy) ಲಭ್ಯವಿರುವ ಸ್ಥಳೀಯ ಸಂಪನ್ಮೂಲಗಳೊಂದಿಗೆ ಬಳಸಿಕೊಂಡು ಮುನ್ನಡೆಯುವುದು ತಕ್ಷಣದ ಆದ್ಯತೆಯಾಗಿದೆ ಎಂದು ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದರು.

ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‌ನಲ್ಲಿ(ಐಐಎಂಬಿ) ಆಯೋಜಿಸಿದ್ದ ‘ಜಾಗತಿಕ ಸುಸ್ಥಿರ ಅಭಿವೃದ್ಧಿ 7ರ ಪರಿಸರ ವ್ಯವಸ್ಥೆ ಕುರಿತ ದಕ್ಷಿಣ ದೇಶಗಳ ಜಾಗತಿಕ ಸಮಾವೇಶ 2022’ ಅನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ | PM Mitra Scheme | 3 ಜಿಲ್ಲೆಗಳಲ್ಲಿ ಮೆಗಾ ಜವಳಿ ಪಾರ್ಕ್ ಸ್ಥಾಪನೆಗೆ ಅನುದಾನ ನೀಡಲು ಕೇಂದ್ರಕ್ಕೆ ಸಿಎಂ ಬೊಮ್ಮಾಯಿ ಮನವಿ

ಬೀದಿ ವ್ಯಾಪಾರಿಗಳಿಗೆ ಮೂಲ ಸೌಕರ್ಯ ಒದಗಿಸಲು ಭಾರತ ಸರ್ಕಾರ ಪ್ರಾರಂಭಿಸಿದ ಕಾರ್ಯಕ್ರಮದಿಂದ ಸಹಾಯವಾಯಿತು. ಆದರೆ, ಒಂದು ದಿನದ ನಂತರ ಮಾರಾಟವಾಗದ ಮತ್ತು ಹಾಳಾಗುವ ಉತ್ಪನ್ನಗಳನ್ನು ಸಂರಕ್ಷಿಸುವ ಸವಾಲು ಎದುರಾಯಿತು. ಆದರೆ, ಸೆಲ್ಕೋ ಫೌಂಡೇಶನ್ ಸಹಭಾಗಿತ್ವದಲ್ಲಿ ವೀಕೆಂದ್ರೀಕೃತ ನವೀಕರಿಸಬಹುದಾದ ಇಂಧನದ ಬೆಂಬಲಿತ ಕೋಲ್ಡ್ ಸ್ಟೋರೇಜ್ ಘಟಕಗಳನ್ನು ಅನೇಕ ರೈತರಿಗೆ ನೀಡಲಾಯಿತು. ಇದರಿಂದ ಈ ಮಾರಾಟಗಾರರಿಗೆ ತಮ್ಮ ಉತ್ಪನ್ನಗಳನ್ನು ಕೆಡದಂತೆ ಸಂಗ್ರಹಿಸಿಡಲು ಮತ್ತು ಮರುದಿನ ಮಾರಾಟ ಮಾಡಲು ಸಾಧ್ಯವಾಯಿತು ಎಂದು ಸೆಲ್ಕೋ ಸಹಭಾಗಿತ್ವವನ್ನು ಶ್ಲಾಘಿಸಿದರು.

ಸೆಲ್ಕೋ ಸಹಭಾಗಿತ್ವದಲ್ಲಿ ರಾಜ್ಯ ಸರ್ಕಾರವು ರಾಯಚೂರು ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳನ್ನು ಸೌರಶಕ್ತಿ ಆಧಾರಿತ ವ್ಯವಸ್ಥೆಯಿಂದ ನಡೆಯುವಂತೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಆರೋಗ್ಯ ಕೇಂದ್ರಗಳು ಮತ್ತು ಶಾಲೆಗಳನ್ನು ಸ್ಮಾರ್ಟ್ ಕ್ಲಾಸ್ ಮಾಡಬೇಕಾದ ಅಗತ್ಯವಿದೆ ಎಂದರು.

ಅಂತಾರಾಷ್ಟ್ರೀಯ ಸೌರಶಕ್ತಿ ಸಂಘಟನೆ (ಐಎಸ್‌ಎ)ಯ ಮಹಾ ನಿರ್ದೇಶಕರಾದ ಡಾ. ಅಜೇಯ್ ಮಾಡೂರ್ ಮಾತನಾಡಿ, ಪಳೆಯುಳಿಕೆ ಇಂಧನಕ್ಕಿಂತ ಅಗ್ಗದಲ್ಲಿ ದೊರೆಯುವ ಸೋಲಾರ್ ಶಕ್ತಿಯನ್ನು ಹೆಚ್ಚಾಗಿ ಬಳಸದಿದ್ದರೆ ಜನರ ಜೀವನ ದುಬಾರಿಯಾಗಲಿದೆ.

ಭಾರತದಂತೆಯೇ ಆಫ್ರಿಕಾ ದೇಶಗಳಲ್ಲಿ ಸೌರಶಕ್ತಿಯನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಿದೆ ಎಂದ ಅವರು, ಈ ನಿಟ್ಟಿನಲ್ಲಿ, 20 ಸ್ಟಾರ್ಟಪ್ ಯೋಜನೆಗಳಿಗೆ ಪ್ರೋತ್ಸಾಹ ನೀಡಲು ಅಂತಾರಾಷ್ಟ್ರೀಯ ಸೌರಶಕ್ತಿ ಸಂಘಟನೆ ನಿರ್ಧರಿಸಿದ್ದು, ಆಸಕ್ತರು 2023ರ ಮಾರ್ಚ್ 31ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದರು.

ಸೆಲ್ಕೋ ಫೌಂಡೇಶನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಹರೀಶ್ ಹಂದೆ ಅವರು ಮಾತನಾಡಿ, ಏಷ್ಯಾ ಉಪಖಂಡ ಮತ್ತು ಆಫ್ರಿಕಾ ದೇಶಗಳ ಜನರು ಆರೋಗ್ಯ ಮತ್ತು ಜೀವನೋಪಾಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶ್ವಾಸಾರ್ಹ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದೆ ಬಿದ್ದಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ದೇಶಗಳ ಜನರ ಜೀವನ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಇದು ಬಹಳ ಮಹತ್ವದ ಕಾಲಘಟ್ಟವಾಗಿದೆ ಎಂದರು.

ಇದೇ ಸಂದರ್ಭದಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಯ ಸಂಪನ್ಮೂಲ ಕೇಂದ್ರ (NHSRC) ಮತ್ತಿತರ ಸಂಸ್ಥೆಗಳ ಸಹಯೋಗದಲ್ಲಿ ಸೆಲ್ಕೋ ಫೌಂಡೇಶನ್‌ನ 1000 ಸೌರ ಆಧಾರಿತ ಆರೋಗ್ಯ ವ್ಯವಸ್ಥೆಗಳ ಅಳವಡಿಕೆಯ ಮೈಲುಗಲ್ಲನ್ನು ದಾಟಿದ ಸಂಭ್ರಮದ ಜತೆಗೆ ಮಣಿಪುರದ ಸಗಾಂಗ್ ಹಾಗೂ ಇಥಿಯೋಪಿಯಾದ ಸಗ್ಗಾನ್ ವಾಜಿಯ ಸೌರಶಕ್ತಿ ಆಧರಿತ ಆರೋಗ್ಯ ಕೇಂದ್ರಗಳನ್ನು ಏಕಕಾಲಕ್ಕೆ ಉದ್ಘಾಟಿಸಲಾಯಿತು.

ಟಿಎಂಎಫ್‌ಐನ ಕಾರ್ಯನಿರ್ವಾಹಕ ನಿರ್ದೇಶಕರಾದ ವಿನ್ನಿ ಟೆರಿ, ಸಿಯೆರಾ ಲಿಯೋನ್‌ನ ಸಂಸತ್ ಸದಸ್ಯರಾದ ಕೀರುರಾ ಕ್ರಿಸ್ಟೋಪಾ ವಂಡಿ, ಇಥಿಯೋಪಿಯಾದ ಪ್ರಿಸೆಸ್ ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ಪಾಲುದಾರರಾದ ಹೆನೋಕ್ ಅಸೆಫಾ, TENNನಲ್ಲಿ ತಾಂತ್ರಿಕ ಸಲಹೆಗಾರ ಮತ್ತು SEforALL ನಲ್ಲಿ ಲಿಯೋನ್ ರಾಷ್ಟ್ರೀಯ ಇಂಧನ ಸಲಹೆಗಾರರಾದ ಪಾಲ್ ಟಿ. ಯಿಲಿಯಾ, ಸೆಲ್ಯೂ ಇಂಡಿಯಾದ ನಿರ್ದೇಶಕರಾದ ಥಾಮಸ್ ಪುಲ್ಲಂಕೇವ್, ಸೆಲ್ಯೂ ಫೌಂಡೇಷನ್ ನಿರ್ದೇಶಕರಾದ ಹುದಾ ಜಾಫರ್ ಹಾಜರಿದ್ದರು.

ಇದನ್ನೂ ಓದಿ | Air India-Vistara | ಏರ್ ಇಂಡಿಯಾದಲ್ಲಿ ವಿಸ್ತಾರ ವಿಲೀನಕ್ಕೆ ಅಂತಿಮ ಒಪ್ಪಿಗೆ ನೀಡಿದ ಸಿಂಗಪುರ ಏರ್‌ಲೈನ್ಸ್

Exit mobile version