ಚೆನ್ನೈ: ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ತಮಿಳ್ ಸೆಲ್ವಿ (Dr Tamil selvi) ಅವರಿಗೆ ತಮಿಳುನಾಡು ಸರ್ಕಾರದಿಂದ 2021 ನೇ ಸಾಲಿನ ‘ಶ್ರೇಷ್ಠ ಅನುವಾದಕರು ಪ್ರಶಸ್ತಿ’ಯನ್ನು ಘೋಷಿಸಲಾಗಿದೆ. ಇದು ಕನ್ನಡಕ್ಕಾಗಿ ತಮಿಳುನಾಡಿನ ಸರ್ಕಾರ ನೀಡಿರುವ ಮೊದಲ ಪ್ರಶಸ್ತಿ ಎಂಬುವುದು ವಿಶೇಷವಾಗಿದೆ.
ಈ ಪ್ರಶಸ್ತಿಯು ಎರಡು ಲಕ್ಷ ರೂ. ನಗದು ಬಹುಮಾನ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಈ ಪ್ರಶಸ್ತಿಯನ್ನು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಡಿಸೆಂಬರ್ 21 ರಂದು ಡಾ. ತಮಿಳ್ ಸೆಲ್ವಿ ಅವರಿಗೆ ಪ್ರದಾನ ಮಾಡಲಿದ್ದಾರೆ. ಇವರ ಅನುವಾದಿತ ಕಥೆ, ಕವನಗಳು ಹಲವಾರು ಪತ್ರಿಕೆಗಳಲ್ಲೂ ಪ್ರಕಟವಾಗಿವೆ. ತಮಿಳು ಹಾಗೂ ಕನ್ನಡ ಭಾಷೆಗಳಿಗೆ ಇವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಇವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ತಮಿಳು ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ | Sunday read | ಹೊಸ ಪುಸ್ತಕ | ಮತ್ತೆ ಹಾಡಾಗಿದೆ ಮಳೆ ಸಂಗೀತ
ಡಾ. ಸೆಲ್ವಿ ಅವರು ‘ಶ್ರೀಲಂಕಾದ ತಮಿಳು ಕವಿತೆಗಳು’, ಡಾ. ಕಾರ್ಲೋಸ್ ಅವರ ‘ಇವರು ಕಥೆಯಾದವರು’, ಅಬ್ದುಲ್ ರಹಮಾನ್ ಅವರ ‘ಆಲಾಪನೆ’, ಕನಿಮೊಳಿ ಅವರ ‘ಬಸಿರ ವಾಸನೆ’, ಶಿವಗಾಮಿ ಐ.ಎ.ಎಸ್. ಅವರ ‘ಸಂಕ್ರಾಂತಿ’, ಸುಪ್ರಭಾರತಿ ಮಣಿಯನ್ ಅವರ ‘ ಬಣ್ಣದ ತೆರೆ’, ‘ಮ.ರಂಗನಾಥನ್ ಕತೆಗಳು, ‘ಅಶೋಕ ಮಿತ್ರನ್ ಕಥೆಗಳು’, ‘ನಾನು ಅವನಲ್ಲ ಅವಳು’ ಮೊದಲಾದ ಕೃತಿಗಳನ್ನು ತಮಿಳಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ.
ಅದೇ ರೀತಿ ವೀರಪ್ಪ ಮೊಯ್ಲಿ ಅವರ ‘ಶ್ರೀರಾಮಾಯಣ ಮಹಾನ್ವೇಷಣಂ’, ‘ಅಕ್ಕಮಹಾದೇವಿ ವಚನಗಳು’, ‘ವಚನಗಳು’, ಹಂಪನಾ ಅವರ ‘ಕುವೆಂಪು’, ‘ಅತ್ತಿಮಬ್ಬೆ’ ಮೊದಲಾದ ಕೃತಿಗಳನ್ನು ಕನ್ನಡದಿಂದ ತಮಿಳಿಗೆ ಅನುವಾದಿಸಿದ್ದಾರೆ.
ತಮಿಳು ಕನ್ನಡ ಭಾಷೆಗಳ ನಡುವಿನ ಸಾಹಿತ್ಯಕ- ಭಾಷಿಕ ಸಂಬಂಧವನ್ನು ಕುರಿತ ಲೇಖನಗಳು, ತಿರುಕ್ಕುರಳ್ ಬಗೆಗಿನ ಲೇಖನಗಳು, ತೌಲನಿಕ ಅಧ್ಯಯನ, ಕರ್ನಾಟಕದ ಜತೆ ಚೋಳರು ಹೊಂದಿದ್ದ ಸಂಬಂಧ, ತಮಿಳು ಜಾನಪದ, ತಮಿಳು ಮಹಿಳಾ ಸಾಹಿತ್ಯ, ಸಣ್ಣ ಕಥೆಗಳು, ಕವನಗಳನ್ನು ಕುರಿತು ಇವರು ರಚಿಸಿರುವ ಲೇಖನಗಳು ಹಾಗೂ ನೂರಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಇವರು ಮಂಡಿಸಿರುವ ಪ್ರಬಂಧಗಳು ಇತ್ಯಾದಿಗಳ ಮೂಲಕ ಇವರು ಕನ್ನಡ ಹಾಗೂ ತಮಿಳು ಸಾಹಿತ್ಯ ಲೋಕಕ್ಕೆ ಸಲ್ಲಿಸಿರುವ ಸೇವೆಯನ್ನು ತಮಿಳು ಅಭಿವೃದ್ಧಿ ಪ್ರಾಧಿಕಾರವು ಶ್ಲಾಘಿಸಿದೆ.
ಇದನ್ನೂ ಓದಿ | Sunday read | ಹೊಸ ಪುಸ್ತಕ | ಮಹಾಭಾರತದ ನೈಜ ನಾಯಕ ವಿದುರ