ಬೆಂಗಳೂರು: ಹರ್ಬಲ್ ಲೈಫ್, ಶಿಶು ಮಂದಿರದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಇಕೋ-ವೀಲ್ಸ್ ವುಮೆನ್ಸ್ ಇನಿಶಿಯೇಟಿವ್’ ಯೋಜನೆಯಡಿ ಹರ್ಬಲ್ ಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಅವರು 50 ಫಲಾನುಭವಿ ಮಹಿಳೆಯರಿಗೆ ಇ-ಆಟೋಗಳನ್ನು (Electric Auto Rickshaw ) ವಿತರಣೆ ಮಾಡಿದರು. ಈ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಶಾಸಕಿ ಮಂಜುಳಾ ಅರವಿಂದ ಲಿಂಬಾವಳಿ ಹಾಗೂ ಶಿಶು ಮಂದಿರದ ಸಂಸ್ಥಾಪಕ ಡಾ. ಹೆಲ್ಲಾ ಮುಂಡ್ರಾ ಉಪಸ್ಥಿತರಿದ್ದರು.
ಇಕೋ-ವ್ಹೀಲ್ಸ್ ವುಮೆನ್ಸ್ ಇನಿಶಿಯೇಟಿವ್ ವಿಶಿಷ್ಟ ಯೋಜನೆಯಾಗಿದ್ದು, ಆರ್ಥಿಕವಾಗಿ ಅಶಕ್ತರಾಗಿರುವ ಮಹಿಳೆಯರನ್ನು ಆರ್ಥಿಕ ಸ್ವಾತಂತ್ರ್ಯ ಮತ್ತು ಕೌಶಲ್ಯ ಅಭಿವೃದ್ಧಿಗೆ ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಸುಸ್ಥಿರ ಮತ್ತು ಪರಿಣಾಮಕಾರಿ ಸಿಎಸ್ಆರ್ ಉಪಕ್ರಮಗಳಿಗೆ ಬೆಂಬಲ ನೀಡುತ್ತಿರುವ ಶಿಶು ಮಂದಿರದ ಯೋಜನೆಗೆ ಹರ್ಬಲ್ಲೈಫ್ ನೀಡುತ್ತಿರುವ ಬೆಂಬಲವನ್ನು ಮುಂದುವರಿಸುವುದಾಗಿ ಅಜಯ್ ಖನ್ನಾ ಹೇಳಿದರು. ಈ ವೇಳೆ ಇಕೋ-ವ್ಹೀಲ್ಸ್ ವುಮೆನ್ಸ್ ಇನಿಶಿಯೇಟಿವ್ ಯೋಜನೆಯ ಫಲಾನುಭವಿಗಳು ತಮ್ಮ ಜೀವನದ ಬದಲಾವಣೆಯ ಅನುಭವಗಳನ್ನು ಹಂಚಿಕೊಂಡರು.
ಇದನ್ನೂ ಓದಿ: Tourism Policy: ಹೊಸ ಪ್ರವಾಸೋದ್ಯಮ ನೀತಿ; ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ರೂಪಿಸಲು ಸಿಎಂ ಸೂಚನೆ
ಈ ಕುರಿತು ಹರ್ಬಲ್ ಲೈಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಖನ್ನಾ ಮಾತನಾಡಿ, “ಹರ್ಬಲ್ ಲೈಫ್ ತನ್ನ ಸಿಎಸ್ಆರ್ ಉಪಕ್ರಮಗಳ ಮೂಲಕ ಸಮುದಾಯಗಳನ್ನು ಅಭಿವೃದ್ಧಿ ಮಾಡುವಲ್ಲಿ ಆಳವಾದ ಬದ್ಧತೆಯನ್ನು ಹೊಂದಿದೆ. ಪ್ರತಿಯೊಂದು ಯೋಜನೆಯು ನಾವು ಬದಲಾವಣೆ ಬಯಸುವಂಥ ಪರಿಣಾಮಗಳಿಗೆ ನಮ್ಮನ್ನು ಹತ್ತಿರ ಕೊಂಡೊಯ್ಯುತ್ತದೆ.
ಇಕೋ ವ್ಹೀಲ್ಸ್ ವುಮೆನ್ ಉಪಕ್ರಮವು ಮಹಿಳೆಯರನ್ನು ಸಬಲೀಕರಣಗೊಳಿಸುವುದರ ಜತೆಗೆ ಪರಿಸರ ಸುಸ್ಥಿರತೆಯನ್ನು ಕಾಪಾಡುವ ಎರಡೆರಡು ಗುರಿಯೊಂದಿಗೆ ಗಮನ ಸೆಳೆಯುತ್ತದೆ. ನಾವು ವೈವಿಧ್ಯತೆಯನ್ನು ಒಪ್ಪಿಕೊಂಡಿದ್ದೇವೆ ಮತ್ತು ಒಳಗೊಳ್ಳುವಿಕೆಗೆ ಬದ್ಧರಾಗಿದ್ದೇವೆ. ಈ ಯೋಜನೆಯು 115ಕ್ಕೂ ಹೆಚ್ಚು ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳನ್ನು ಶಕ್ತಗೊಳಿಸುತ್ತದೆ, ಅದು ಅವರಿಗೆ ಆರ್ಥಿಕ ಸ್ಥಿರತೆ ಮತ್ತು ಸ್ವಾತಂತ್ರ್ಯ ಒದಗಿಸುತ್ತದೆ.
ಸಾರಿಗೆ ವ್ಯವಸ್ಥೆಯ ಪರಿಪೂರ್ಣತೆಗಾಗಿ ಎಲೆಕ್ಟ್ರಿಕ್ ಆಟೋಗಳನ್ನು ಪರಿಚಯಿಸುವ ಜತೆಗೆ ಪರಿಸರಕ್ಕೆ ಹೊಗೆಯ ಹೊರ ಸೂಸುವಿಕೆ ಮತ್ತು ಶಬ್ದ ಮಾಲಿನ್ಯ ಕಡಿಮೆ ಮಾಡುತ್ತಿದ್ದೇವೆ. ಇದು ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿದೆ. ನಾವು ಭಾರತದಲ್ಲಿ ಮೊದಲ ಹೆಜ್ಜೆಯನ್ನು ಊರಿ 25 ವರ್ಷಗಳನ್ನು ಆಚರಿಸುತ್ತಿರುವಾಗ, ಅಶಕ್ತ ಕುಟುಂಬಗಳನ್ನು ಬಡತನದಿಂದ ಮೇಲೆತ್ತುವ ಮತ್ತು ಸಮುದಾಯದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಯೋಜನೆಗಳನ್ನು ಪ್ರಾರಂಭಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ಶಿಶು ಮಂದಿರದ ನಿರ್ದೇಶಕ ಆನಂದ್ ಸಿ. ಮಾತನಾಡಿ, ನಮ್ಮ ಇ-ಆಟೋ ಯೋಜನೆಯು ಬಡತನದ ಅಂಚಿನಲ್ಲಿರುವ ಮಹಿಳೆಯರು ಮತ್ತು ತೃತೀಯ ಲಿಂಗಿಗಳಿಗೆ ಭರವಸೆಯ ದೀಪವಾಗಿದೆ. ಹತಾಶೆಯಿಂದ ಮೇಲೆದ್ದು, ಘನತೆ ಮತ್ತು ಸ್ವಾವಲಂಬನೆಯತ್ತ ಸಾಗುವಂತೆ ಮಾಡುತ್ತದೆ. ಹರ್ಬಲ್ ಲೈಫ್‌ನ ಅಚಲ ಬೆಂಬಲವು ಈ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾವು ಶಾಶ್ವತ ಬದಲಾವಣೆಯನ್ನು ಮಾಡುತ್ತಿದ್ದೇವೆ. ನಮ್ಮ ಪಾಲುದಾರಿಕೆಯು ಸಾಮಾಜಿಕ ಪರಿಣಾಮ ಮತ್ತು ಸಮುದಾಯ ಸಬಲೀಕರಣವನ್ನು ಪ್ರೇರೇಪಿಸುವಲ್ಲಿ ಪಾಲುದಾರಿಕೆಯ ಶಕ್ತಿಗೆ ಸ್ಪಷ್ಟ ಉದಾಹರಣೆಯಾಗಿದೆ. ಈ ಪ್ರಯಾಣವನ್ನು ಮುಂದುವರಿಸಲು ಮತ್ತು ಭವಿಷ್ಯದಲ್ಲಿ ಹೆಚ್ಚಿನ ಜನರನ್ನು ಯೋಜನೆಯಲ್ಲಿ ಸೇರಿಸಿಕೊಳ್ಳುವುದಕ್ಕೆ ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಮಹಿಳೆಯರಿಗೆ ಇ-ಆಟೋಗಳ ವಿತರಣೆ
ಕಳೆದ ಐದು ವರ್ಷಗಳಲ್ಲಿ, ಶಿಶು ಮಂದಿರದ ಚಾಲನಾ ತರಬೇತಿ ಶಾಲೆ 900 ಕ್ಕೂ ಹೆಚ್ಚು ಪುರುಷರು ಮತ್ತು ಮಹಿಳೆಯರಿಗೆ ತರಬೇತಿ ನೀಡಿದೆ. ಕೋವಿಡ್ ನಂತರ, ಗಮನವು ಮಹಿಳೆಯರತ್ತ ಕೇಂದ್ರೀಕೃತವಾಗಿದೆ. ಆರಂಭದಲ್ಲಿ ಚಾಲನಾ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಹಿಂಜರಿಯುತ್ತಿದ್ದ ಹೆಚ್ಚಿನ ಮಹಿಳೆಯರು ಮುಂದೆ ಬರಲು ಪ್ರಾರಂಭಿಸಿದ್ದಾರೆ, ರೋಟರಿ ಕ್ಲಬ್ ಸಹಯೋಗದೊಂದಿಗೆ ಖರೀದಿಸಿದ ಮೊದಲ ಐದು ಇ-ಆಟೋಗಳ ಯಶಸ್ಸಿನಿಂದ ಪ್ರೇರೇಪಿತರಾಗಿದ್ದಾರೆ. ಪ್ರಸ್ತುತ, ಇಬ್ಬರು ತೃತೀಯ ಲಿಂಗಿಗಳು ಸೇರಿದಂತೆ 17 ಮಹಿಳೆಯರು ಶಿಶು ಮಂದಿರ ಒದಗಿಸಿದ ಇ-ಆಟೋಗಳನ್ನು ಓಡಿಸುತ್ತಿದ್ದಾರೆ.
ಶಿಶು ಮಂದಿರವು ಆಟೋಗಳಲ್ಲಿ ದಾನಿಗಳ ಬ್ರ್ಯಾಂಡಿಂಗ್ ಅನ್ನು ನಮೂದಿಸುತ್ತದೆ. ಉತ್ಪಾದನಾ ಕಂಪನಿಯು ಒಂದು ವರ್ಷದ ಉಚಿತ ಸೇವೆ ಒದಗಿಸುತ್ತದೆ. ನಿರ್ವಹಣಾ ವೆಚ್ಚಗಳು ಕಡಿಮೆ ಮಾಡುವುದು ಮತ್ತು ಮಹಿಳಾ ಸಂಘಗಳ ಮೂಲಕ ಉಳಿತಾಯ ಯೋಜನೆಯಡಿ ಬ್ಯಾಟರಿಗಳನ್ನು ಬದಲಿಸುವಂಥ ಭವಿಷ್ಯದ ಅಗತ್ಯಗಳನ್ನು ಮನವರಿಕೆ ಮಾಡಲಾಗಿದೆ. ಇದು ಚಾಲಕರಿಗೆ ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಇ-ಆಟೋಗಳು ಚಾಲಕನ ಹೆಸರಿನಲ್ಲಿ ನೋಂದಣಿಯಾಗಿದೆ. ಇದರಿಂದಾಗಿ ಅವರು ನಿಜವಾದ ಮಾಲೀಕರಾಗುತ್ತವೆ. ವಿಮೆ, ತೆರಿಗೆ ಮತ್ತು ಇತರ ಆಡಳಿತಾತ್ಮಕ ಕಾರ್ಯಗಳನ್ನು ಶಿಶು ಮಂದಿರವು ಭರಿಸುತ್ತದೆ. ಶಿಶು ಮಂದಿರ ಕ್ಯಾಂಪಸ್‌ನಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಮಹೀಂದ್ರಾ ಬೆಂಬಲದೊಂದಿಗೆ ಹೆಚ್ಚಿನ ನಿಲ್ದಾಣಗಳನ್ನು ಸ್ಥಾಪಿಸುವ ಯೋಜನೆ ಇದೆ ಎಂದು ತಿಳಿಸಿದೆ.