Site icon Vistara News

PES University: ವಿದ್ಯಾವಂತ ಯುವ ಮಾನವ ಸಂಪನ್ಮೂಲ ದೇಶದ ಬಹುದೊಡ್ಡ ಶಕ್ತಿ: ಡಾ. ಎಂ.ಆರ್. ದೊರೆಸ್ವಾಮಿ

PES University chancellor Prof M R Doreswamy

ಬೆಂಗಳೂರು: ನಮ್ಮ ದೇಶದ ದೊಡ್ಡ ಶಕ್ತಿ ವಿದ್ಯಾವಂತ ಯುವ ಮಾನವ ಸಂಪನ್ಮೂಲವಾಗಿದೆ. ದೇಶದಲ್ಲಿ 3500 ಎಂಜಿನಿಯರಿಂಗ್‌ ಸಂಸ್ಥೆಗಳಿದ್ದು, ವಿದ್ಯಾರ್ಥಿಗಳ ಮಾರ್ಗದರ್ಶನ ಕಾರ್ಯಕ್ರಮದ ಮೂಲಕ ಎಂಜಿನಿಯರಿಂಗ್ ಕಾಲೇಜಿನ ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಪಿಇಎಸ್ ವಿಶ್ವವಿದ್ಯಾಲಯದ (PES University) ಕುಲಾಧಿಪತಿ ಡಾ. ಎಂ. ಆರ್.ದೊರೆಸ್ವಾಮಿ ತಿಳಿಸಿದರು.

ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ “ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಪರಿಣಾಮ” ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಸ್ನಾತಕೋತ್ತರ ಪದವಿಯ ನಂತರ ಬೋಧನೆಗೆ ನೇರವಾಗಿ ಅವಕಾಶ ನೀಡದೆ 3 ರಿಂದ 6 ತಿಂಗಳ ಅಧ್ಯಾಪಕರ ತರಬೇತಿ ಕಾರ್ಯಕ್ರಮವನ್ನು ಮಾಡಬೇಕು ಎಂದು ಎಐಸಿಟಿಇ ಅಧ್ಯಕ್ಷ ಡಾ. ಟಿ.ಜಿ. ಸೀತಾರಾಮ್ ಅವರಿಗೆ ಸಲಹೆ ನೀಡಿದರು.

ಬೋಧನೆ-ಕಲಿಕೆ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕೃತಕ ಬುದ್ಧಿಮತ್ತೆ (ಎಐ) ಜತೆಗೆ ಮುಂದುವರಿಯಬೇಕು ಎಂದು ಅಧ್ಯಾಪಕರಿಗೆ ಸಲಹೆ ನೀಡಿದ ಅವರು, ಭಾಷಣದ ಕೊನೆಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.

ಎಐಸಿಟಿಇ ಅಧ್ಯಕ್ಷ ಡಾ.ಟಿ.ಜಿ.ಸೀತಾರಾಮ್ ಅವರು ಮಾತನಾಡಿ, ಐಐಟಿ ಸೇರಿ ನಮ್ಮ ದೇಶದ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಮಾರ್ಗದರ್ಶನವನ್ನು ಕಡ್ಡಾಯ ಪ್ರಕ್ರಿಯೆಯನ್ನಾಗಿ ಮಾಡಲಾಗುತ್ತಿದೆ. ಜತೆಗೆ ಕಡ್ಡಾಯ ವಿದ್ಯಾರ್ಥಿ ಮಾರ್ಗದರ್ಶನ ಕೆಲಸದ ವರದಿಯ ಕರಡನ್ನು ಪ್ರಕಟಿಸಲಾಗಿದೆ. ಬೋಧನೆ-ಕಲಿಕೆ ಪ್ರಕ್ರಿಯೆಯನ್ನು ವರ್ಧಿಸಲು ಎಐಸಿಟಿಇ ಅಭಿವೃದ್ಧಿಪಡಿಸಿದ ಎಐ ಪರಿಕರಗಳನ್ನು ಬಳಸಿಕೊಳ್ಳುವಂತೆ ಅವರು ಅಧ್ಯಾಪಕರಿಗೆ ಸಲಹೆ ನೀಡಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ :‌ ಯಾವತ್ತಾದ್ರೂ ತುಂಬ ಡಿಪ್ರೆಸ್‌ ಆದಾಗ ನೀವು ಈ ಕಪ್ಪು ಜಿಂಕೆ ಕಥೆ ಓದಿಬಿಡಿ ಸಾಕು!

ಉದ್ಯೋಗ ಪಡೆಯುವುದಕ್ಕಿಂದ ಉದ್ಯೋಗ ನೀಡುವತ್ತ ಯುವ ಸಮೂಹ ಗಮನಹರಿಸಬೇಕ ಎಂದ ಅವರು, ಶಿಕ್ಷಣ, ವೈದ್ಯಕೀಯ, ಆಟೋಮೊಬೈಲ್, ಕೈಗಾರಿಕಾ ಅಗತ್ಯತೆಗಳು ಇತ್ಯಾದಿ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ಕುಲಪತಿ ಡಾ. ಜೆ. ಸೂರ್ಯ ಪ್ರಸಾದ್ ಸೇರಿ ಹಲವು ಗಣ್ಯರು, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version