ಮಹದೇವಪುರ (ಬೆಂಗಳೂರು): ಬಿಬಿಎಂಪಿ ಮಹದೇವಪುರ ವಲಯದ ವಿದ್ಯುತ್ ಚಿತಾಗಾರದಲ್ಲಿ ಯಂತ್ರೋಪಕರಣ ಕೆಟ್ಟುಹೋಗಿ ವಾರ ಕಳೆದರೂ ದುರಸ್ತಿಗೊಳಿಸದ ಕಾರಣ ಮೃತ ದೇಹವನ್ನು ದಹನ ಮಾಡಲು (ಶವ ಸಂಸ್ಕಾರ ಮಾಡಲು) ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಮಹದೇವಪುರ ವಲಯದ ಪಣತ್ತೂರು ಸಮೀಪದ ಬಿಬಿಎಂಪಿಯ ವಿದ್ಯುತ್ ಚಿತಾಗಾರದಲ್ಲಿ ಏಕ ಕಾಲಕ್ಕೆ ಎರಡು ಮೃತ ದೇಹಗಳನ್ನು ಸುಡುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಚಿತಾಗಾರದಲ್ಲಿನ ಎರಡೂ ಯಂತ್ರೋಪಕರಣಗಳು
ಕೆಟ್ಟುಹೋಗಿ ವಾರ ಕಳೆದಿದೆ. ಆದರೂ ಇಲ್ಲಿಯವರೆಗೂ ಸರಿಪಡಿಸಿಲ್ಲ. ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | Namma Clinic | ಡಿ.14ರಂದು 114 ‘ನಮ್ಮ ಕ್ಲಿನಿಕ್’ ಉದ್ಘಾಟನೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್
ಚಿತಾಗಾರದಲ್ಲಿ ಯಂತ್ರೋಪಕರಣ ಕೆಟ್ಟಿದ್ದರೂ ಮೃತ ದೇಹಗಳ ದಹನ ಮಾಡುವುದಕ್ಕೆ ಆನ್‌ಲೈನ್ ಮೂಲಕ ಬಿಬಿಎಂಪಿ ಹಣ ಪಡೆಯುತ್ತಿದೆ. ಈ ಬಗ್ಗೆ ತಿಳಿಯದವರೂ ಮೃತ ದೇಹಗಳನ್ನು ತಂದು ವಾಪಸ್ ಬೇರೆಡೆಗೆ ಸಾಗಿಸುವಂತಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಯಂತ್ರೋಪಕರಣಗಳ ದುರಸ್ತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಹದೇವಪುರ ಬಿಬಿಎಂಪಿ ವಲಯ ವ್ಯಾಪ್ತಿಯ ಪಣತ್ತೂರಿನಲ್ಲಿ ಮಾತ್ರ ವಿದ್ಯುತ್ ಚಿತಾಗಾರವಿದೆ. ಅದರಲ್ಲಿ ಯಂತ್ರೋಪಕರಣಗಳು ಆಗಾಗ್ಗೆ ಕೆಟ್ಟು ಹೋಗುತ್ತಿವೆ. ಇದು ಸಂಬಂಧಿಕರ ಸಾವಿನಿಂದ ನೊಂದವರಿಗೆ ಮತ್ತಷ್ಟು ನೋವು ಉಂಟು ಮಾಡುತ್ತಿದೆ. ಪ್ರತಿ ದಿನ ೫ಕ್ಕೂ ಹೆಚ್ಚು ಮೃತದೇಹಗಳು ಚಿತಾಗಾರಕ್ಕೆ ಬರುತ್ತವೆ. ಆದರೆ ಯಂತ್ರಗಳು ಕೈ ಕೊಟ್ಟಾಗ ಮೃತ ದೇಹಗಳನ್ನು ಕೂಡ್ಲು ಗೇಟ್, ಯಲಹಂಕಗೆ ಚಿತಾಗಾರಕ್ಕೆ ಸಾಗಿಸಬೇಕಾಗಿದೆ.
ಪಣತ್ತೂರು ಚಿತಾಗಾರದಲ್ಲಿ ಯಂತ್ರಗಳು ಕೆಟ್ಟಿರುವುದರಿಂದ ಶವ ಸಂಸ್ಕಾರ ಮಾಡಲು ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆಯ ಬೇಕಾಗಿದೆ. ಇದಕ್ಕಾಗಿ ಎರಡು ಪಟ್ಟು ಹಣ ಖರ್ಚಾಗುತ್ತಿದೆ. ಅಲ್ಲದೆ ಶಾಸ್ತ್ರೋಕ್ತವಾಗಿ ಸಂಸ್ಕಾರ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಧಿಕಾರಿಗಳು, ಚಿತಾಗಾರದ ಸಮಸ್ಯೆ ಪರಿಹರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು.
| ಎಸ್. ಲೋಕೇಶ್, ರಾಮಮೂರ್ತಿ ನಗರ ನಿವಾಸಿ.
ಇದನ್ನೂ ಓದಿ | Cyclone Mandous | ಶೀತಗಾಳಿ, ಮಳೆಯಿಂದಾಗಿ ಮಕ್ಕಳು, ವೃದ್ಧರಿಗೆ ತೊಂದರೆ; ಎಚ್ಚರ ವಹಿಸಲು ಆರೋಗ್ಯ ಸಚಿವರ ಸಲಹೆ