ಬೆಂಗಳೂರು: ಕಳೆದ ಡಿಸೆಂಬರ್ 8ರಂದು ನೋಡನೋಡುತ್ತಿದ್ದಂತೆ ಏರ್ಟೆಲ್ ಟವರ್ವೊಂದು ಉರುಳಿ ಬಿದ್ದಿತ್ತು. ಅಂದು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿತ್ತು. ಆದರೆ ಇಂದು ಆ ಟವರ್ ಕಂಬವನ್ನು ತೆರವು ಮಾಡಲು ಹೋದ ಯುವಕನ ಬಲಿ ಪಡೆದಿದೆ. ರಸ್ತೆ ಬದಿ ಬಿದ್ದಿದ್ದ ವಿದ್ಯುತ್ ತಂತಿ ತಾಗಿ (Electric shock) ಯುವಕನೊಬ್ಬ ಮೃತಪಟ್ಟಿದ್ದಾನೆ.
ಜಿತೀನ್ ಕುಮಾರ್ (20) ಮೃತ ದುರ್ದೈವಿ. ಜಿತೀನ್ ಕುಮಾರ್ ಹಾಗು ಆತನ ಸಹೋದರ ವೃತ್ತಿಯಲ್ಲಿ ಕ್ರೇನ್ ಆಪರೇಟರ್ ಆಗಿದ್ದರು. ಟವರ್ ಬಿದ್ದ ಅವಶೇಷಗಳನ್ನು ತೆರವುಗೊಳಿಸಲು ಇವರನ್ನು ನಿಯೋಜನೆ ಮಾಡಲಾಗಿತ್ತು. ಕಟ್ಟಡದ ಮೇಲಿದ್ದ ವಸ್ತುಗಳನ್ನು ತೆಗೆಯಲು ಕ್ರೇನ್ ಬಳಕೆ ಮಾಡಲಾಗಿತ್ತು. ಟವರ್ಗೆ ಅಳವಡಿಸಲಾಗಿದ್ದ ಬ್ಯಾಟರಿ ಕಟ್ಟಡದ ಮೇಲ್ಭಾಗದಲ್ಲಿತ್ತು. ಅದನ್ನು ತೆಗೆಯಲು ಸಹೋದರರು ಮುಂದಾಗಿದ್ದರು. ಜಿತೀನ್ನ ಸಹೋದರ ಕ್ರೇನ್ ಆಪರೇಟ್ ಮಾಡಿದರೆ, ಜಿತೀನ್ ಕ್ರೇನ್ ಹೊರಭಾಗದಲ್ಲಿ ನಿಂತು ಸಹೋದರನಿಗೆ ಸೂಚನೆ ಕೊಡುತ್ತಿದ್ದ.
ಈ ವೇಳೆ ಬ್ಯಾಟರಿ ತೆಗೆಯಲು ಮುಂದಾದಾಗ ಮೇಲಿದ್ದ ವಿದ್ಯುತ್ ತಂತಿ ಕ್ರೇನ್ಗೆ ಟಚ್ ಆಗಿದೆ. ಅಷ್ಟೇ ಕ್ಷಣಾರ್ಧದಲ್ಲಿ ಪೂರ್ತಿ ಕ್ರೇನ್ಗೆ ವಿದ್ಯುತ್ ಪ್ರವಹಿಸಿದೆ. ಒಳಗಿದ್ದ ಜಿತೀನ್ ಸಹೋದರ ಶೂ ಸೇರಿ ಹಲವು ಮುನ್ನೆಚ್ಚರಿಕೆ ವಹಿಸಿದ್ದ ಕಾರಣ ಅತನಿಗೆ ಏನೂ ಆಗಿಲ್ಲ. ಆದರೆ ಕ್ರೇನ್ ಮೇಲೆ ಕೈ ಇಟ್ಟು ಸೂಚನೆ ಕೊಡುತ್ತಿದ್ದ ಜಿತೀನ್ಗೆ ಕರೆಂಟ್ ಶಾಕ್ ಹೊಡೆದಿದೆ. ಇನ್ನು ಇಲ್ಲಿ ಬೆಸ್ಕಾಂಗೆ ಯಾವ ಮಾಹಿತಿ ನೀಡದೆ ಇರುವುದು ದುರಂತಕ್ಕೆ ಕಾರಣವಾಗಿದೆ. ಲಗ್ಗೆರೆಯ ಪಾರ್ವತಿಪುರದಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಸಹಸ್ರಲಿಂಗದಲ್ಲಿ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನಾಪತ್ತೆ
ಏನಿದು ಘಟನೆ?
ರಾಜಧಾನಿಯಲ್ಲಿ ಹಲವಾರು ಕಟ್ಟಡಗಳ ಮೇಲೆ ನಾನಾ ಕಂಪನಿಗಳಿಗೆ ಸೇರಿದ ಸಾವಿರಾರು ಟವರ್ಗಳು (Communication towers) ಇವೆ. ಇವು ಯಾವ ಕ್ಷಣದಲ್ಲಿ ಬೇಕಾದರೂ ಉರುಳಿ ಬೀಳಬಹುದು ಎಂಬ ಆತಂಕ ಎಲ್ಲರನ್ನೂ ಕಾಡುತ್ತದೆ. ಯಾಕೆಂದರೆ, ಎತ್ತರದ ಕಟ್ಟಡಗಳ ಮೇಲ್ಭಾಗದಲ್ಲಿ ಇವುಗಳನ್ನು ಸ್ಥಾಪಿಸಲಾಗಿರುತ್ತದೆ. ಮೊದಲೇ ಕೆಲವು ಕಟ್ಟಡಗಳು ಗಟ್ಟಿಯಾಗಿರುವುದಿಲ್ಲ. ಅಂಥ ಕಟ್ಟಡಗಳ ಮೇಲೆ ಈ ರೀತಿಯ ಟವರ್ಗಳನ್ನು ನಿರ್ಮಿಸಲಾಗಿರುತ್ತದೆ. ಹಾಗಾಗಿ ಯಾವಾಗ ಕಿತ್ತುಕೊಂಡು ಹೋಗುತ್ತವೋ ಎಂಬ ಭಯ ಸಹಜವಾಗಿ ಕಾಡುತ್ತದೆ. ಅದರಲ್ಲೂ ಮುಖ್ಯವಾಗಿ ಪಕ್ಕದ ಕಟ್ಟಡದವರು ಭಯಪಡುತ್ತಿರುತ್ತಾರೆ.
ಕಳೆದ ಡಿ.8ರ ಶುಕ್ರವಾರ ಬೆಂಗಳೂರಿನಲ್ಲಿ ನೋಡನೋಡುತ್ತಿದ್ದಂತೆಯೇ ಏರ್ಟೆಲ್ ಕಂಪನಿಗೆ (Airtel Company tower) ಸೇರಿದ ಒಂದು ಟವರ್ ನೆಲಕ್ಕೆ (Tower overturns) ಉರುಳಿತ್ತು. ಆದರೆ, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿರಲಿಲ್ಲ. ಲಗ್ಗೆರೆಯ ಪಾರ್ವತಿ ನಗರದಲ್ಲಿ ಮನೆಯೊಂದರ ಮೇಲೆ ಕಬ್ಬಿಣದಿಂದ ನಿರ್ಮಿಸಿದ ಲೊಕೇಷನ್ ಟವರನ್ನು ಅಳವಡಿಸಲಾಗಿತ್ತು. ಮೇನ್ ರೋಡ್ನ ಪಕ್ಕದಲ್ಲೇ ಈ ಕಟ್ಟಡವಿತ್ತು.
ಈ ಟವರ್ ಅಳವಡಿಸಿದ್ದ ಮನೆ ಪಕ್ಕದಲ್ಲಿ ಖಾಲಿ ಸೈಟ್ ಇತ್ತು. ಇದೇ ಸೈಟ್ನಲ್ಲಿ ಮನೆ ನಿರ್ಮಾಣಕ್ಕೆ ಮಾಲೀಕ ಮುಂದಾಗಿದ್ದರು. ಹೊಸ ಮನೆ ನಿರ್ಮಾಣದ ಪಾಯಕ್ಕೆಂದು ಜೆಸಿಬಿಯಿಂದ ಮಣ್ಣನ್ನು ತೆಗೆಯಲಾಗುತ್ತಿತ್ತು. ಈವೇಳೆ ಟವರ್ ಇದ್ದ ಮನೆ ಪಾಯಕ್ಕೆ ತೊಂದರೆಯಾಗಿತ್ತು. ಹೀಗಾಗಿ ಟವರ್ನ ಭಾರಕ್ಕೆ ಕಟ್ಟಡದಲ್ಲಿ ಸಂಚಲನ ಉಂಟಾಗಿ, ಕಬ್ಬಿಣದ ಟವರ್ ನೆಲಕ್ಕಪ್ಪಳಿಸಿತ್ತು.
ಈ ಟವರ್ ಖಾಲಿ ಸೈಟ್ ಮತ್ತು ಅದರಾಚೆಯ ಕಟ್ಟಡದ ಮೇಲೆ ಉರುಳಿ ಹಾನಿಯುಂಟು ಮಾಡಿತ್ತು. ಅದೃಷ್ಟವಶಾತ್ ಅಂದು ಯಾವುದೇ ಪ್ರಾಣಾಪಾಯ ಸಂಭವಿಸಿರಲಿಲ್ಲ. ಟವರ್ ಬೀಳುವ ಮುನ್ಸೂಚನೆ ಪಡೆದ ಜನರು ಕೂಡಲೇ ಎಚ್ಚೆತ್ತು ಕಟ್ಟಡದಲ್ಲಿ ವಾಸಿಸುತ್ತಿದ್ದ ಎಲ್ಲರನ್ನೂ ಹೊರ ಕರೆದಿದ್ದರಿಂದ ದೊಡ್ಡ ಅಪಾಯ ತಪ್ಪಿತ್ತು. ನಂತರದ ಕೆಲವೇ ಕ್ಷಣಗಳಲ್ಲಿ ಟವರ್ ಕುಸಿದು ಬಿದ್ದು, ಒಂದು ಹಣ್ಣಿನ ಅಂಗಡಿ ಮತ್ತು ಬಂಬು ಅಂಗಡಿಗೆ ಹಾನಿಯಾಗಿತ್ತು.
ಆದರೆ ಇಂದು ಇದೇ ಟವರ್ ಕಂಬ ಕೆಲಸಕ್ಕೆ ಬಂದಿದ್ದ ಯುವಕನೊಬ್ಬ ವಿದ್ಯುತ್ ತಂತಿ ತಾಗಿ ಮೃತಪಟ್ಟಿದ್ದಾನೆ. ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಿಮಾಚಲ ಪ್ರದೇಶ ಮೂಲದ ಜಿತೀನ್ ಕುಮಾರ್ ವಿದ್ಯುತ್ ತಂತಿ ತಗುಲಿ ಗಂಭೀರವಾಗಿ ಗಾಯಗೊಂಡಿದ್ದ. ಅಲ್ಲಿದ್ದ ಸ್ಥಳೀಯರು ತಕ್ಷಣ ಜಿತೀನ್ನನ್ನು ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ