ಬೆಂಗಳೂರು: ಅಂಗಡಿ-ಮುಂಗಟ್ಟು, ಮಳಿಗೆಗಳು, ಮಾಲ್‌ಗಳು ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ (Kannada nameplate mandatory) ಅಳವಡಿಸಿಕೊಳ್ಳಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮಳಿಗೆಗಳಲ್ಲಿ ಫೆಬ್ರವರಿ 28 ರೊಳಗಾಗಿ ಶೇ. 60ರಷ್ಟು ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಬೆಂಗಳೂರಿನ ಅಂಗಡಿ-ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕಡೆಗಣನೆ ತೋರಲಾಗುತ್ತಿದೆ. ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ಇದ್ದರೂ, ಆದೇಶ ಪಾಲನೆ ಆಗುತ್ತಿಲ್ಲ ಎಂದು ಕನ್ನಡ ಪರ ಸಂಘಟನೆಗಳು ಕಿಡಿಕಾರಿದವು. ಹೀಗಾಗಿ ಭಾನುವಾರ ಮಲ್ಲೇಶ್ವರದ ಬಿಬಿಎಂಪಿ ಕಚೇರಿಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಲಾಯಿತು. ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಚರ್ಚಿಸಲಾಯಿತು.
ಸಭೆ ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕರ್ನಾಟಕ ರಕ್ಷಣಾ ವೇದಿಕೆಯವರು ಕನ್ನಡ ನಾಮಫಲಕ ಅಭಿಯಾನ ಆರಂಭಿಸುತ್ತಿದ್ದಾರೆ. ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ ಎಂದು ಸರ್ಕಾರದ ಆದೇಶ ಇದೆ. ಈಗಾಗಲೇ ಮುಖ್ಯ ರಸ್ತೆ, ಉಪ ರಸ್ತೆಗಳ ನಾಮಫಲಕ ಸರ್ವೇ ಮಾಡಲಾಗುವುದು. ನಗರದಲ್ಲಿ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳು 1400 ಕಿ.ಮೀ ನಷ್ಟಿದ್ದು, ಸದರಿ ರಸ್ತೆಗಳಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳನ್ನು ವಲಯವಾರು ಸರ್ವೆ ಮಾಡಿಸಲಾಗುವುದು. ಸರ್ವೇಯ ನಂತರ ಶೇ. 60 ರಷ್ಟು ಕನ್ನಡ ಭಾಷೆ ಬಳಸದ ಮಳಿಗೆಗಳಿಗೆ ನೋಟೀಸ್ ನೀಡಲಾಗುವುದು. ನೋಟೀಸ್ ನಿಡಿದ ಬಳಿಕ ಫೆಬ್ರವರಿ 28 ರವರೆಗೆ ಸಮಯಾವಕಾಶ ನೀಡಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿ ಆಯಾ ವಲಯ ಆಯುಕ್ತರಿಗೆ ಅನುಪಾಲನೆ ಸಲ್ಲಿಸಬೇಕೆಂದು ಸೂಚಿಸಲಾಗುವುದೆಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಮಾಲ್ ಸೇರಿದಂತೆ ಇನ್ನಿತರೆ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ಬಳಸುವ ಸಂಬಂಧ ಎಲ್ಲಾ ವಲಯ ಆಯುಕ್ತರ ಜತೆ ಸಭೆ ನಡೆಸಿ ಸೂಕ್ತ ನಿರ್ದೇಶನ ನೀಡಲಾಗುವುದು. ನಗರದಲ್ಲಿರುವ ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಫಲಕ ಹಾಕದೇ ಇರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಆದೇಶ ಹಾಗೂ ಪಾಲಿಕೆ ಸುತ್ತೋಲೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು ಎಂದರು.
ಅಧಿಕಾರಿಗಳ ಮೇಲೂ ಶಿಸ್ತು ಕ್ರಮದ ಎಚ್ಚರಿಕೆ
2024ರ ಫೆಬ್ರವರಿ 28 ರೊಳಗೆ ಎಲ್ಲ ಅಂಗಡಿ-ಮುಂಗಟ್ಟುಗಳು, ಮಳಿಗೆಗಳು ಕಡ್ಡಾಯವಾಗಿ ನಾಮಫಲಕವನ್ನು ಕನ್ನಡದಲ್ಲಿ ಹಾಕಬೇಕು. ಕನ್ನಡ ನಾಮಫಲಕಗಳನ್ನು ಅಳವಡಿಕೊಳ್ಳದ ಅಂಗಡಿ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಅದರಂತೆ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಬಳಸದ ಅಂಗಡಿ ಮುಂಗಟ್ಟುಗಳನ್ನು ಕಾನೂನಿನ ಪ್ರಕಾರ ಅಮಾನತಿನಲ್ಲಿಟ್ಟು ತದನಂತರ ಪರವಾನಗಿಯನ್ನು ರದ್ದುಗೊಳಿಸಲಾಗುವುದು. ಜತೆಗೆ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಯ ಮೇಲೂ ಶಿಸ್ತು ಕ್ರಮ ಜರುಗಿಸಲಾಗುವುದೆಂದು ತಿಳಿಸಿದರು.
ನಗರದಲ್ಲಿ ಬರುವ ದೊಡ್ಡ ದೊಡ್ಡ ಮಾಲ್‌ಗಳ ಜತೆ ಕೂಡಲೆ ಸಮಾಲೋಚನೆ ನಡೆಸಿ ಮಾಲ್‌ಗಳಲ್ಲಿರುವ ಎಲ್ಲಾ ಮಳಿಗೆಗಳಲ್ಲಿ 15-20 ದಿನಗಳೊಳಗಾಗಿ ನಾಮಫಲಕಗಳಲ್ಲಿ ಕನ್ನಡ ಭಾಷೆಯನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: Karnataka Weather : ಚಳಿ ಇರಲಿ, ಮಳೆ ಬರಲಿ; ಆರೋಗ್ಯದ ಕುರಿತು ಕಾಳಜಿ ಇರಲಿ
ಬಳಿಕ ಮಾತನಾಡಿದ ಕರವೇ ಅಧ್ಯಕ್ಷ ನಾರಾಯಣಗೌಡ, ಬೆಂಗಳೂರಿನ 8 ವಲಯಗಳ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಕನ್ನಡಕ್ಕೆ ಕುತ್ತು ಬಂದಿದೆ. ಈ ವಿಷಯವನ್ನು ಆಯುಕ್ತರ ಗಮನಕ್ಕೆ ತಂದಿದ್ದೇವೆ. ನಮ್ಮ ಸಂಘದಿಂದ ಸರ್ವೇ ಮಾಡಿದಾಗ, ಅಂಗಡಿ-ಮುಂಗಟ್ಟು ಲೈಸೆನ್ಸ್ ರಿನಿವಲ್ ಮಾಡಲು ಅಧಿಕಾರಿಗಳು ಹಣ ಪಡೆದಿದ್ದಾರೆ. ಹೀಗಾಗಿ ಆಯಾ ವಲಯ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದ್ದೇವೆ. ವಲಯ ಅಧಿಕಾರಿಗಳ ಜತೆ ಸಭೆ ಮಾಡಿ ಎಚ್ಚರಿಸುವ ಭರವಸೆ ಕೊಟ್ಟಿದ್ದಾರೆ ಎಂದರು.
ಜತೆಗೆ ಬೆಂಗಳೂರಲ್ಲಿ ಕನ್ನಡ ನಾಮಫಲಕವನ್ನು ಅಳವಡಿಸಲು ಫೆಬ್ರವರಿ 28ರ ವರೆಗೆ ಗಡುವು ತೆಗೆದುಕೊಂಡಿದ್ದಾರೆ. ಆ ಗಡುವಿನೊಳಗೆ ಕ್ರಮ ತೆಗೆದುಕೊಳ್ಳದಿದ್ದರೆ ನಂತರ ಬಿಬಿಎಂಪಿ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ನಾರಾಯಣಗೌಡ ತಿಳಿಸಿದರು. ಕನ್ನಡ ನಾಮಫಲಕ ಕಡ್ಡಾಯವನ್ನು ಪಾಲಿಕೆಯೇ ಮಾಡಿದೆ. ಹೀಗಾಗಿ ಈವರೆಗೆ ನಿಯಮ ಉಲ್ಲಂಘಿಸಿದವರು ಹಾಗೂ ಅವರಿಗೆ ಎಷ್ಟು ದಂಡ ಹಾಕಿದ್ದಾರೆ ಎಂಬುದರ ವರದಿಯನ್ನು ಕೇಳಲಾಗಿದೆ. ಇನ್ನು ಡಿ. 27ರಿಂದ ದೇವನಹಳ್ಳಿ ಏರ್‌ಪೋರ್ಟ್‌ನ ಸಾದರಹಳ್ಳಿ ಟೋಲ್‌ನಿಂದ ಕಬ್ಬನ್ ಪಾರ್ಕ್ ವರೆಗೆ ಮೆರವಣಿಗೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ