ಬೆಂಗಳೂರು: ಗ್ರಾಮೀಣ ಪತ್ರಕರ್ತರ ಉಚಿತ ಬಸ್ ಪಾಸ್ ಬೇಡಿಕೆಯನ್ನು ರಾಜ್ಯ ಬಜೆಟ್‌ನಲ್ಲಿ ಸರ್ಕಾರ ಈಡೇರಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ವತಿಯಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರನ್ನು ಮಂಗಳವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ.ವಿ.ಪ್ರಭಾಕರ್ ಅವರು, ಗ್ರಾಮೀಣ ಪತ್ರಕರ್ತರ ಶ್ರಮ ಮತ್ತು ಕಾರ್ಯಕ್ಷಮತೆ ಗುರುತಿಸಿ, ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಿ, ಬಹುವರ್ಷಗಳ ಬೇಡಿಕೆ ಈಡೇರಿಸಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಸಲ್ಲಿಸುವೆ. ಕಾರ್ಯ ನಿರತ ಪತ್ರಕರ್ತರ ಸಂಘ ಮತ್ತು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನಿರಂತರ ಶ್ರಮದಿಂದಾಗಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ದೊರಕಿದೆ ಎಂದು ತಿಳಿಸಿದರು.
ಪತ್ರಕರ್ತ ಹುದ್ದೆಗೆ ಬರುವವರಲ್ಲಿ ಹೆಚ್ಚಿನವರು ಕಷ್ಟದ ಕುಟುಂಬಗಳಿಂದ ಬರುವವರು. ಆದ್ದರಿಂದ ಸರ್ಕಾರ ಈ ಸಮುದಾಯದ ಬೇಡಿಕೆಗಳಿಗೆ ಸ್ಪಂದಿಸಬೇಕಾಗುತ್ತದೆ. ಪತ್ರಕರ್ತರ ಪೆನ್ಷನ್ ಮತ್ತು ನಿವೇಶನ ಸೇರಿ ಪತ್ರಕರ್ತರಿಗೆ ಇಲಾಖೆಯಿಂದ, ಸರ್ಕಾರದಿಂದ ಸಿಗಬೇಕಾದ ಸವಲತ್ತುಗಳು ಸಿಗದಂತೆ ಅಡ್ಡಿ ಆಗಿರುವ ಎಲ್ಲಾ ತಾಂತ್ರಿಕ ಅಡೆ ತಡೆಗಳನ್ನು ನಿವಾರಿಸಲು ಸತತ ಪ್ರಯತ್ನ ಮತ್ತು ಸಭೆ ನಡೆಸುತ್ತಿದ್ದೇವೆ. ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಅವರು ಮಾತನಾಡಿ, 29 ವರ್ಷದ ಹಿಂದೆ ಚಿಕ್ಕಮಗಳೂರಿನಲ್ಲಿ ರಾಜ್ಯ ಸಮ್ಮೇಳನವಾದ ಸಂದರ್ಭದಿಂದ ಬಸ್ ಪಾಸ್ ಬೇಡಿಕೆ ಇತ್ತು. ಆ ಬೇಡಿಕೆ ಬಜೆಟ್‌ನಲ್ಲಿ ಸಾಕಾರಗೊಂಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಕೆ.ವಿ.ಪ್ರಭಾಕರ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಇದನ್ನೂ ಓದಿ | Police Transfer : Good News; ಪೊಲೀಸರ ಅಂತರ್ಜಿಲ್ಲಾ ವರ್ಗಾವಣೆಗೆ ಸರ್ಕಾರ ಗ್ರೀನ್ ಸಿಗ್ನಲ್
ದಾವಣಗೆರೆಯಲ್ಲಿ ನಡೆದ 38ನೇ ರಾಜ್ಯ ಸಮ್ಮೇಳನದಲ್ಲಿ ಕೆಯುಡಬ್ಲ್ಯೂಜೆ ಹಕ್ಕೊತ್ತಾಯಕ್ಕೆ ಸ್ಪಂದಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಬಸ್ ಪಾಸ್ ಬೇಡಿಕೆ ಈಡೇರಿಸುವುದಾಗಿ ಹೇಳಿ, ಹಾಗೆ ನುಡಿದಂತೆಯೇ ನಡೆದುಕೊಂಡಿದ್ದಾರೆ ಎಂದು ಹೇಳಿದರು.
ಕೆಯುಡಬ್ಲ್ಯೂಜೆ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ನಮ್ಮ ಭಾವನೆಗೆ ಸ್ಪಂದಿಸಿದ ಕೆ.ವಿ. ಪ್ರಭಾಕರ್ ಅವರ ಪರಿಶ್ರಮವನ್ನು ಮರೆಯಲು ಸಾಧ್ಯವಿಲ್ಲ. ಹಣಕಾಸು ಇಲಾಖೆ ಮುಖ್ಯಸ್ಥ ಎಲ್.ಕೆ.ಅತೀಕ್ ಸೇರಿದಂತೆ ಎಲ್ಲಾ ಅಧಿಕಾರಿ ವರ್ಗಕ್ಕೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಗಡೂರು ತಿಳಿಸಿದರು.
ಸಂಘದ ಉಪಾಧ್ಯಕ್ಷ ಅಜ್ಜಮಾಡ ಕುಟ್ಟಪ್ಪ ಮಾತನಾಡಿ, ಬಸ್ ಪಾಸ್‌ಗೆ ಹೆಚ್ಚಿನ ಷರತ್ತುಗಳನ್ನು ವಿಧಿಸದೆ ಪತ್ರಕರ್ತರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ.ಮದನಗೌಡ ಮಾತನಾಡಿ, ಸ್ನೇಹಿತರಾದ ಪ್ರಭಾಕರ್ ಅವರು ಪತ್ರಕರ್ತರ ಬೇಡಿಕೆಗಳಿಗೆ ಸ್ಪಂಸಿಸಿದ್ದರೆ, ಶಿವಾನಂದ ತಗಡೂರು ಅವರು ಪತ್ರಕರ್ತರ ಶಕ್ತಿಯಾಗಿ ಕೆಲಸ ಮಾಡಿ ಇಬ್ಬರೂ ಸೇರಿ ಬಸ್ ಪಾಸ್ ಕನಸು ನನಸಾಗಿಸಿದ್ದಾರೆ ಎಂದರು.
ವಸತಿ ಸಚಿವರ ಮಾಧ್ಯಮ ಸಂಯೋಜಕ ಲಕ್ಷ್ಮೀನಾರಾಯಣ್ ಮಾತನಾಡಿ, ಹಿಡಿದ ಕೆಲಸವನ್ನು ತಗಡೂರು ಬಿಡುವುದಿಲ್ಲ. ಸತತ ವಿಧಾನಸೌಧದಲ್ಲಿ ಫಾಲೊಅಪ್ ಮಾಡುತ್ತಾರೆ ಎಂದರು. ಈ ನಿಟ್ಟಿನಲ್ಲಿ ಕೆ.ವಿ.ಪ್ರಭಾಕರ್ ಮತ್ತು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕೆಯುಡಬ್ಲ್ಯೂಜೆ ಪ್ರಶಸ್ತಿಗೆ ಭಾಜನರಾಗಿದ್ದ ಕೆ.ಎನ್.ಪುಟ್ಟಲಿಂಗಯ್ಯ ಮತ್ತು ತೃಪ್ತಿ ಕುಮ್ರಗೋಡು ಅವರನ್ನು ಸನ್ಮಾನಿಸಲಾಯಿತು.
ವಾರ್ತಾ ಇಲಾಖೆಯ ಆಯುಕ್ತರಾದ ಹೇಮಂತ ನಿಂಬಾಳ್ಕರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉಪಾಧ್ಯಕ್ಷರಾದ ಪುಂಡಲೀಕ ಬಾಳೋಜಿ, ಭವಾನಿಸಿಂಗ್ ಠಾಕೂರ್, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಖಜಾಂಚಿ ವಾಸುದೇವ ಹೊಳ್ಳ ಹಾಜರಿದ್ದರು.
ಇದನ್ನೂ ಓದಿ | 7ನೇ ವೇತನ ಆಯೋಗದ ವರದಿ ಬಂದ ನಂತರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್: ಸಿಎಂ ಭರವಸೆ
ಅಭಿಮಾನದಲ್ಲಿ ಮಿಂದೆದ್ದ ಪ್ರಭಾಕರ್
ಕೆ.ವಿ.ಪ್ರಭಾಕರ್ ಅವರನ್ನು ಮೊದಲು ರಾಜ್ಯ ಸಂಘದಿಂದ ಗೌರವಿಸಲಾಯಿತು. ಬಿ.ಪಿ.ಲೋಕೇಶ್ ಅವರು ರಚಿಸಿದ ಅವರದೇ ಭಾವಚಿತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಜಿಲ್ಲೆ ಮತ್ತು ತಾಲೂಕುಗಳಿಂದ ಬಂದಿದ್ದ ಪತ್ರಕರ್ತರು ಪ್ರಭಾಕರ್ ಅವರನ್ನು ಅಭಿಮಾನದಿಂದ ಸನ್ಮಾನಿಸಿದರು. ಪತ್ರಕರ್ತರ ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಪ್ರಭಾಕರ್, ಕ್ಷಣ ಕಾಲ ಭಾವುಕರಾಗಿ, ಸುದ್ದಿಮನೆಯ ಒಡನಾಟವನ್ನು ನೆನೆದರು.