ಬೆಂಗಳೂರು: ಲಾಭರಹಿತ ಸಂಸ್ಥೆ ಕ್ವೆಸ್ಟ್ ಅಲಯನ್ಸ್ (Quest Alliance) ವತಿಯಿಂದ ಹವಾಮಾನ ಬಿಕ್ಕಟ್ಟು ಮತ್ತು ಕೃತಕ ಬುದ್ಧಿಮತ್ತೆಯಿಂದ ಉಂಟಾಗುವ ಅಡೆತಡೆಗಳ ಹಿನ್ನೆಲೆಯಲ್ಲಿ ಕೌಶಲ್ಯಗಳ ಭವಿಷ್ಯ ಮತ್ತು ಶಿಕ್ಷಣದ ಕುರಿತು ಚರ್ಚಿಸಲು ʼಭವಿಷ್ಯದ ಸಾಕ್ಷರತೆʼ (Futures Literacy) ಸಮ್ಮೇಳನವನ್ನು ಅಕ್ಟೋಬರ್ 9 ಮತ್ತು 10 ರಂದು ನಗರದ ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್ (ಬಿಐಸಿ) ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಹಲವು ಜನಪ್ರಿಯ ಶಿಕ್ಷಣ ತಜ್ಞರು ಮತ್ತು ದೂರದೃಷ್ಟಿ ತಜ್ಞರು ಸಮ್ಮೇಳದಲ್ಲಿ ಭಾಗವಹಿಸಲಿದ್ದಾರೆ.
ಈ ಸಮ್ಮೇಳನ ಭವಿಷ್ಯದ ಸಾಕ್ಷರತೆಯ ಕುರಿತು ನಡೆಯಲಿರುವ ಮೊದಲ ಸಮ್ಮೇಳನವಾಗಿರುವುದರಿಂದ ಮಹತ್ವದ ಮೈಲುಗಲ್ಲು ಕೂಡ ಆಗಲಿದೆ. ಈ ಪ್ರಮುಖ ಕಾರ್ಯಕ್ರಮವು ಹವಾಮಾನ ಬಿಕ್ಕಟ್ಟು ಮತ್ತು ಕೃತಕ ಬುದ್ಧಿಮತ್ತೆಯ ಬಗ್ಗೆ ಆಳವಾದ ಚರ್ಚೆಗೆ ವೇದಿಕೆ ಕಲ್ಪಿಸಲಿದೆ. ಜತೆಗೆ ಇದು ಶಿಕ್ಷಣ ಮತ್ತು ಉದ್ಯೋಗದ ಮೇಲೆ ಬೀರುವ ಪರಿಣಾಮಗಳ ಮೇಲೆ ಬೆಳಕು ಚೆಲ್ಲಲಿದೆ. ಭವಿಷ್ಯದ ಕಲಿಕೆ ಮತ್ತು ಔದ್ಯೋಗಿಕ ಕ್ಷೇತ್ರದ ಮೇಲೆ ಕೃತಕ ಬುದ್ಧಿಮತ್ತೆಯ ಪ್ರಭಾವ, ಶಿಕ್ಷಣದ ಮೇಲೆ ಮತ್ತು ಯುವ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಮೇಲೆ ಹವಾಮಾನ ಬದಲಾವಣೆಯ ಪರಿಣಾಮ, ಮುಂಬರುವ ವರ್ಷಗಳಲ್ಲಿ ಪರಿಸರ ಸಂರಕ್ಷಣೆಯ ಕೇಂದ್ರಿತ ಹಸಿರು ಉದ್ಯೋಗಾವಕಾಶಗಳ (green employment) ಕುರಿತು ಈ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ.
ಇದನ್ನೂ ಓದಿ | Narahalli Award: ಬಸವನಗುಡಿಯಲ್ಲಿ ಅ.8ರಂದು ನರಹಳ್ಳಿ ಪ್ರಶಸ್ತಿ, ನರಹಳ್ಳಿ ದಶಮಾನ ಪುರಸ್ಕಾರ ಪ್ರದಾನ
ಈ ಸಮ್ಮೇಳನವು ಹೊಸ ಹೊಳಹುಗಳನ್ನೊಳಗೊಂಡ ಪರಿಣಾಮಕಾರಿ ಚರ್ಚೆಗೆ ಅವಕಾಶ ನೀಡಲಿದೆ. ಸವಾಲುಗಳನ್ನು ಅರಿಯಲು ಹಾಗೂ ಭವಿಷ್ಯದಲ್ಲಿ ಭಾರತದಲ್ಲಿ ಕೌಶಲ್ಯ ಹೊಂದಿರುವ ಸಿಬ್ಬಂದಿಯನ್ನು ರೂಪಿಸುವಂತೆ ಯೋಜನೆ ರೂಪಿಸುವ ನಿಟ್ಟಿನಲ್ಲಿ ತಜ್ಞರು ಮತ್ತು ಪಾಲುದಾರರನ್ನು ಒಂದುಗೂಡಿಸಲು ಈ ಸಮ್ಮೇಳನ ನೆರವಾಗಲಿದೆ.
ಶಿಕ್ಷಣ ಸಂಸ್ಥೆಗಳು, ಸರ್ಕಾರಗಳು ಮತ್ತು ಸಮಾಜವು ʼಭವಿಷ್ಯದ ಸಾಕ್ಷರತೆʼಯ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಹೇಗೆ ನೆರವಾಗಬಹುದು ಎಂಬುದನ್ನು ತಜ್ಞರು ಇಲ್ಲಿ ಚರ್ಚಿಸಲಿದ್ದಾರೆ. ಈ ಪರಿಕಲ್ಪನೆಯ ಪದವನ್ನು ಮೊದಲ ಬಾರಿಗೆ ಯುನೆಸ್ಕೋ ಹುಟ್ಟುಹಾಕಿದೆ. ʼಭವಿಷ್ಯದ ಪಾತ್ರವನ್ನು ವರ್ತಮಾನದಲ್ಲಿ ನೋಡುವ ಸಾಮರ್ಥ್ಯ’ ಎಂಬುದು ಇದರ ಅರ್ಥ. ಯುವಜನರು ಭವಿಷ್ಯವನ್ನು ಹಾಗೆಯೇ ಸ್ವೀಕರಿಸುವ ಬದಲು, ಗುರಿಯನ್ನು ರೂಪಿಸಿಕೊಂಡು ಸಿದ್ಧಗೊಳ್ಳುವಂತೆ ಸಬಲೀಕರಣಗೊಳಿಸುವ ಕುರಿತು ತಜ್ಞರು ಇಲ್ಲಿ ಬೆಳಕು ಚೆಲ್ಲಲಿದ್ದಾರೆ.
ಅಸೋಸಿಯೇಷನ್ ಆಫ್ ಪ್ರೊಫೆಷನಲ್ ಫ್ಯೂಚರಿಸ್ಟ್ಸ್ (APF) ಮುಖ್ಯಸ್ಥ ಮತ್ತು ಫಿಲಿಪೈನ್ಸ್‌ನ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಯುನೆಸ್ಕೋದ ಆಂಟಿಸಿಪೇಟರಿ ಗವರ್ನೆನ್ಸ್ ಮತ್ತು ರೀಜನರೇಟಿವ್ ಸಿಟೀಸ್‌ನ ಮುಖ್ಯ ಅಭ್ಯರ್ಥಿ ಪ್ರೊ.ಶೆರ್ಮನ್ ಕ್ರೂಜ್, ನೀತಿ ಆಯೋಗದ (ಕಾರ್ಮಿಕ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ) ಹಿರಿಯ ತಜ್ಞರಾದ ಡಾ.ಸಾಕ್ಷಿ ಖುರಾನಾ, ಎಡ್ ಟೆಕ್ ಹಬ್‌ನ ಬಾಂಗ್ಲಾದೇಶದ ಮುಖ್ಯಸ್ಥ ಮತ್ತು ರಿಡಿಕ್ಯುಲಸ್ ಫ್ಯೂಚರ್ಸ್‌ನ ತಜ್ಞ ಶಕೀಲ್ ಅಹ್ಮದ್, ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ಸ್ಟ್ರಾಟೆಜಿ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮನೀಷ್ ಮಿಶ್ರಾ ಸೇರಿದಂತೆ ಹಲವು ತಜ್ಞರು ಹಾಗೂ ತಂತ್ರಜ್ಞಾನ ಪರಿಣತರು ಭವಿಷ್ಯ ರೂಪಿಸುವಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ.
ಕ್ವೆಸ್ಟ್ ಅಲಯನ್ಸ್‌ನ ಸಿಇಒ ಆಕಾಶ್ ಸೇಥಿ ಮಾತನಾಡಿ, “ಹವಾಮಾನ ಬದಲಾವಣೆ ಮತ್ತು ಕೃತಕ ಬುದ್ಧಿಮತ್ತೆಯಲ್ಲಿನ ಬೆಳವಣಿಗೆಗಳು ನಮ್ಮ ಯುವಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಆತಂಕವನ್ನು ಭರವಸೆಯಾಗಿ ಬದಲಿಸಲು ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸುವ ತುರ್ತು ಇದೆ. ಭವಿಷ್ಯದ ಬಗ್ಗೆ ಚಿಂತಿಸುವ ಮೂಲಕ ಸಾಮೂಹಿಕವಾಗಿ ಭವಿಷ್ಯವನ್ನು ಮರು ರೂಪಿಸಲು ಮತ್ತು ಭವಿಷ್ಯದ ಸಾಕ್ಷರತೆಯನ್ನು ಸಾಮರ್ಥ್ಯವಾಗಿ ರೂಪಿಸುವ ಸಮಯ ಬಂದಿದೆ. ಈ ಸಮ್ಮೇಳನವು ಈ ನಿಟ್ಟಿನಲ್ಲಿ ಇಟ್ಟಿರುವ ಒಂದು ಹೆಜ್ಜೆ” ಎಂದು ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ವಿಶಿಷ್ಟವಾದ ಪ್ರದರ್ಶನ ಏರ್ಪಡಿಸಲಾಗಿದೆ. ಇಲ್ಲಿ ಭಾಗವಹಿಸುವವರು 2045ರ ಭವಿಷ್ಯದ ಶಿಕ್ಷಣವನ್ನು ನೋಡಬಹುದು. ಈ ಪ್ರದರ್ಶನದಲ್ಲಿ AR/VR ನೆರವಿನಿಂದ ಹಿಂದಿನ ಶಾಲೆಗಳು ಹಾಗೂ ಭವಿಷ್ಯದ ಶಾಲೆಗಳ ಬೆಳವಣಿಗೆಯನ್ನು ಇಲ್ಲಿ ನೋಡಬಹುದು. 2045ರಲ್ಲಿ ಯುವಜನರ ಜೀವನ ಹೇಗಿರುತ್ತದೆ ಎಂಬ ಮುನ್ನೋಟವನ್ನು ಕೂಡ ಇದು ಒದಗಿಸುತ್ತದೆ.
ಯುವ ವಿದ್ಯಾರ್ಥಿಗಳು ಭವಿಷ್ಯವನ್ನು ಹೇಗೆ ಗ್ರಹಿಸುತ್ತಾರೆ ಎಂಬ ಸಂಶೋಧನಾ ವರದಿ ಸಮ್ಮೇಳನದಲ್ಲಿ ಬಿಡುಗಡೆಯಾಗಲಿದೆ. ಒಡಿಶಾ, ಅಸ್ಸಾಂ ಮತ್ತು ಗುಜರಾತ್‌ನ 600 ವಿದ್ಯಾರ್ಥಿಗಳ ಅಭಿಪ್ರಾಯ ಒಳಗೊಂಡಿರುವ ಈ ವರದಿಯು, ಯುವಜನರು ತಮ್ಮ ಭವಿಷ್ಯವನ್ನು ಹೇಗೆ ಕಲ್ಪಿಸಿಕೊಳ್ಳುತ್ತಿದ್ದಾರೆ ಎಂಬುದರ ಕುರಿತು ತಿಳಿಸುತ್ತದೆ. 21ನೇ ಶತಮಾನದ ಕೌಶಲ್ಯಗಳನ್ನು ವಿಸ್ತರಿಸುವ ಅಗತ್ಯದ ಬಗ್ಗೆ ತಜ್ಞರು ಮಾತನಾಡಲಿದ್ದಾರೆ.
ಇದನ್ನೂ ಓದಿ | Utthana Katha Spardhe: ಉತ್ಥಾನ ವಾರ್ಷಿಕ ಕಥಾಸ್ಪರ್ಧೆ 2023; ಕಥೆ ತಲುಪಿಸಲು ಅ.10 ಕೊನೆ ದಿನ
ಕ್ವೆಸ್ಟ್ ಅಲಯನ್ಸ್
ಕ್ವೆಸ್ಟ್ ಅಲಯನ್ಸ್ ಎಂಬುದು ಲಾಭರಹಿತ ಟ್ರಸ್ಟ್. ಸ್ವಯಂ-ಕಲಿಕೆಯ ಮೂಲಕ 21ನೇ ಶತಮಾನದ ಕೌಶಲ್ಯಗಳನ್ನು ಕಲಿಯಲು ಯುವಜನರನ್ನು ಈ ಟ್ರಸ್ಟ್ ಸಜ್ಜುಗೊಳಿಸುತ್ತದೆ. ಗುಣಮಟ್ಟದ ಶಿಕ್ಷಣ ಮತ್ತು ಕೌಶಲ್ಯ ತರಬೇತಿಯ ನಡುವಿನ ಅಂತರವನ್ನು ಕಡಿಮೆ ಮಾಡಲು ಶಿಕ್ಷಕರಿಗೆ ನಾವು ಪರಿಹಾರ ನೀಡುತ್ತೇವೆ. ನಾವು ಶಿಕ್ಷಣ ಕ್ಷೇತ್ರಕ್ಕೆ ನೆರವಾಗುವುದರ ಜತೆಗೆ, ಸಂಶೋಧನೆ ಮತ್ತು ಆವಿಷ್ಕಾರಗಳ ಮೂಲಕ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಸಹಯೋಗದೊಂದಿಗೆ ಕೆಲಸ ಮಾಡುತ್ತೇವೆ.