ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಬೆಂಗಳೂರಿನ ಬಹುರೂಪಿ ಜಂಟಿಯಾಗಿ, ಹಿರಿಯ ಪತ್ರಕರ್ತ ಜಿ ಎನ್ ರಂಗನಾಥ ರಾವ್ ಅವರ ʼಆ ಪತ್ರಿಕೋದ್ಯಮʼ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಗಸ್ಟ್ 6 ರಂದು ಬೆಂಗಳೂರಿನಲ್ಲಿ ಏರ್ಪಡಿಸಿವೆ.
ಬೆಂಗಳೂರಿನ ಕಂದಾಯ ಭವನದ 3ನೇ ಮಹಡಿಯಲ್ಲಿನ ಕೆಯುಡಬ್ಲ್ಯುಜೆ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಖ್ಯಾತ ವಿಮರ್ಶಕ ಪ್ರೊ ಸಿ.ಎನ್. ರಾಮಚಂದ್ರನ್ ಈ ಕೃತಿ ಬಿಡುಗಡೆ ಮಾಡಲಿದ್ದಾರೆ. ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕರಾದ ಆರತಿ ಎಚ್. ಎನ್. ಹಾಗೂ ಬಹುರೂಪಿ ಪ್ರಕಾಶನದ ಜಿ.ಎನ್.ಮೋಹನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ವಹಿಸಲಿದ್ದಾರೆ.
“ಆ ಪತ್ರಿಕೋದ್ಯಮʼʼ ಪುಸ್ತಕವನ್ನು ಬಹುರೂಪಿ ಪ್ರಕಾಶನ ಹೊರ ತಂದಿದ್ದು, ಸುದ್ದಿಮನೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿದ ಜಿ.ಎನ್.ರಂಗನಾಥ ರಾವ್ ಅವರ ಮಾಧ್ಯಮ ಲೋಕದ ಪಯಣದ ಕಥನ ಇದಾಗಿದೆ. ಪ್ರಜಾವಾಣಿ ಪತ್ರಿಕೆಯಲ್ಲಿ ನಾನಾ ಹಂತದಲ್ಲಿ ಹಲವು ಹುದ್ದೆ ನಿಭಾಯಿಸಿದ್ದಲ್ಲದೆ, ಅದೇ ಪತ್ರಿಕೆಯಲ್ಲಿ ಆರು ವರ್ಷ ಸಂಪಾದಕರಾಗಿ ಕೆಲಸ ಮಾಡಿದ ಹೆಗ್ಗಳಿಕೆ ಜಿ.ಎನ್.ರಂಗನಾಥರಾವ್ ಅವರದ್ದು.
ಆಸಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಕಟಣೆಯಲ್ಲಿ ಕೋರಿದೆ.
ಇದನ್ನೂ ಓದಿ| ಆ.7ಕ್ಕೆ ಶಿರಸಿಯಲ್ಲಿ ಡಾ. ಗಿರಿಧರ್ ಕಜೆ ರಚನೆಯ ಔನ್ನತ್ಯ ಕೃತಿ ಬಿಡುಗಡೆ