ಬೆಂಗಳೂರು: ಮಹಿಳೆಯರ ಮೇಲೆ ಆ್ಯಸಿಡ್ ದಾಳಿ ಮಾಡುವವರಿಗೆ ಇನ್ನಷ್ಟು ಕಠಿಣ ಶಿಕ್ಷೆ ಒದಗಿಸುವ ಕಾನೂನು ಜಾರಿಗೊಳಿಸುವಂತೆ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಗೀತಾ ವಿವೇಕಾನಂದ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಆ್ಯಸಿಡ್ ದಾಳಿ ಮಾಡಿದವರ ವಿರುದ್ಧ ಜಾಮೀನುರಹಿತ ವಾರೆಂಟ್ ಹೊರಡಿಸಿ ಕೂಡಲೇ ಬಂಧಿಸಬೇಕು. ಅಪರಾಧಿಗೆ ಕನಿಷ್ಠ 10 ವರ್ಷ ಕಠಿಣ ಶಿಕ್ಷೆ ವಿಧಿಸಬೇಕು. ಆ್ಯಸಿಡ್ ದಾಳಿ ಸಂಬಂಧ ವಿಚಾರಣೆಗೆ ತ್ವರಿತ ನ್ಯಾಯ ನೀಡುವ ಫಾಸ್ಟ್ ಟ್ರ್ಯಾಕ್ ಕೋರ್ಟ್‍ಗಳನ್ನು ಸ್ಥಾಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಆ್ಯಸಿಡ್ ಸಂತ್ರಸ್ತರಿಗೆ ನೆರವಾಗಲು ʼಆಸರೆʼ ನೀಡುವ ದೃಷ್ಟಿಯಿಂದ ಮಾಸಾಶನವನ್ನು ₹3 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಲಾಗಿದೆ. ಪ್ರತಿಯೊಬ್ಬ ಆ್ಯಸಿಡ್ ಸಂತ್ರಸ್ತ ಮಹಿಳೆಗೆ ಸರಕಾರವು ಉಚಿತ ನಿವೇಶನ ನೀಡಿ ಮನೆ ನಿರ್ಮಿಸಿ ಕೊಡಲು ಮುಂದಾಗಿರುವುದು ಅತ್ಯಂತ ಪ್ರಮುಖ ನಿರ್ಧಾರ ಎಂದು ಅವರು ಸ್ವಾಗತಿಸಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ರಾಜ್ಯದ ಸಚಿವಸಂಪುಟಕ್ಕೆ ಅವರು ಧನ್ಯವಾದ ಸಮರ್ಪಿಸಿದ್ದಾರೆ.
ಇದನ್ನೂ ಓದಿ| ಆ್ಯಸಿಡ್ ದಾಳಿ | ಕ್ರೌರ್ಯಕ್ಕೆ ತಕ್ಕಂತೆ ಶಿಕ್ಷೆ ಎಂದ ಸಚಿವ ಸುಧಾಕರ್
ಆ್ಯಸಿಡ್ ಸಂತ್ರಸ್ತರಿಗೆ ಧೈರ್ಯ ತುಂಬುವ ದೃಷ್ಟಿಕೋನದಿಂದ ಮತ್ತು ಸ್ವಯಂ ಉದ್ಯೋಗಕ್ಕಾಗಿ ₹5 ಲಕ್ಷ ಆರ್ಥಿಕ ಸಹಾಯ ಕೊಡುವುದಾಗಿ ರಾಜ್ಯದ ಬಿಜೆಪಿ ಸರಕಾರ ಪ್ರಕಟಿಸಿದೆ. ಇದರಿಂದ ಸಂತ್ರಸ್ತರ ಆರ್ಥಿಕ ಚೇತರಿಕೆ ಸಾಧ್ಯವಿದೆ. ಅಲ್ಲದೆ, ಅವರ ಆತ್ಮಸ್ಥೈರ್ಯವೂ ಹೆಚ್ಚಾಗಲಿದೆ ಎಂದು ತಿಳಿಸಿದರು.
ಆ್ಯಸಿಡ್ ದಾಳಿ ತಡೆಯುವ ದೃಷ್ಟಿಯಿಂದ ಕಾನೂನಿನಲ್ಲಿ ಮಾರ್ಪಾಡಿನ ಅಗತ್ಯವಿದ್ದು, ಅದನ್ನು ಬಿಜೆಪಿ ಸರ್ಕಾರ ಮಾಡಲಿದೆ ಎಂಬ ವಿಶ್ವಾಸವನ್ನು ಗೀತಾ ವಿವೇಕಾನಂದ ಅವರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ| ಆ್ಯಸಿಡ್ ದಾಳಿ ಆರೋಪ ಸಾಬೀತಾದರೆ 10 ವರ್ಷ ಜೈಲು, ಆದರೆ, ಈಗ ಜಾಮೀನು ಸಿಗಲೂಬಹುದು