ಬೆಂಗಳೂರು: ಗೋವಾ ರಾಜ್ಯಪಾಲರಾದ ಪಿ. ಎಸ್. ಶ್ರೀಧರನ್ ಪಿಳ್ಳ ಅವರ ಮಲಯಾಳಂ ಕಥಾಸಂಕಲನ ‘ತತ್ತ ವರಾತಿರಿಕ್ಕಿಲ್ಲ’ ದ ಕನ್ನಡ ಅನುವಾದ ‘ಗಿಳಿಯು ಬಾರದೇ ಇರದು’ ಸೆ. 10 ರಂದು (Book Release) ಬಿಡುಗಡೆಗೊಳ್ಳಲಿದೆ. ಎನ್ ಆರ್ ಕಾಲೊನಿಯ ಡಾ. ಸಿ. ಅಶ್ವಥ ಕಲಾಭವನದಲ್ಲಿ ಬೆಳಗ್ಗೆ 10 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರು ಪುಸ್ತಕವನ್ನು ಬಿಡುಗಡೆಗೊಳಿಸಲಿದ್ದಾರೆ. ವೀರಲೋಕ ಬುಕ್ಸ್ ಇದನ್ನು ಪ್ರಕಟಿಸಿದೆ.
ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಗೋವಾ ರಾಜ್ಯಪಾಲರಾದ ಪಿ. ಎಸ್. ಶ್ರೀಧರನ್ ಪಿಳ್ಳ ಹಾಗೂ ವಿಜಯ ಕರ್ನಾಟಕ ಸಂಪಾದಕರಾದ ಸುದರ್ಶನ ಚನ್ನಂಗಿಹಳ್ಳಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದಾರೆ. ಸಾಹಿತಿ ಶೋಭಾ ರಾವ್ ಉಪಸ್ಥಿತರಿರುತ್ತಾರೆ. ವಿಜಯ ಕರ್ನಾಟಕದ ಜೂನಿಯರ್ ಅಸಿಸ್ಟೆಂಟ್ ಎಡಿಟರ್ ಮೇರಿ ಜೋಸೆಫ್ ಕೃತಿಯ ಅನುವಾದಕಿಯಾಗಿದ್ದಾರೆ.
‘ತತ್ತ ವರಾತಿರಿಕ್ಕಿಲ್ಲ’ ಕಥಾ ಸಂಕಲನ ಪಿ. ಎಸ್. ಶ್ರೀಧರನ್ ಪಿಳ್ಳ ಅವರ 150 ನೇ ಕೃತಿ. ಸೃಜನಶೀಲ ಸಾಹಿತಿಯಾದ ಅವರು ಇದುವರೆಗೆ ಸುಮಾರು 200ರಷ್ಟು ಕೃತಿಗಳನ್ನು ರಚಿಸಿದ್ದಾರೆ. ಹೊಸತನದೊಂದಿಗೆ ಸಮಕಾಲೀನ ಕಥಾವಸ್ತುವನ್ನು ಹೊಂದಿರುವ ಐದು ಸಣ್ಣ ಕಥೆಗಳ ಗುಚ್ಛವೇ ‘ಗಿಳಿಯು ಬಾರದೇ ಇರದು’ ಕಥಾಸಂಕಲನ. ಮಲಯಾಳಂ ಕಥೆಗಳ ಸೊಬಗನ್ನು ಕನ್ನಡಕ್ಕೆ ಪರಿಚಯಿಸಿಕೊಡುವ ಉದ್ದೇಶದಿಂದ, ಹೊಸ ಹೊಸ ಪ್ರಯೋಗಗಳಿಂದ ಕನ್ನಡ ಓದುಗರ ಮೆಚ್ಚುಗೆ ಗಳಿಸುತ್ತಿರುವ ವೀರಲೋಕ ಬುಕ್ಸ್ ಈ ಕಥಾ ಸಂಕಲನವನ್ನು ಬಿಡುಗಡೆಗೊಳಿಸುತ್ತಿದೆ.