ಪೀಣ್ಯ ದಾಸರಹಳ್ಳಿ: ಗಾರ್ಮೆಂಟ್ಸ್ ಜಗತ್ತಿನ ಪ್ರತಿಷ್ಠಿತ ಕಂಪೆನಿಗಳಲ್ಲೊಂದಾದ ಗೋಕುಲ್ ದಾಸ್ ಎಕ್ಸ್‌ಪೋರ್ಟ್ಸ್ ಚಾರಿಟಬಲ್ ಫೌಂಡೇಷನ್ (Gokaldas Exports) ವತಿಯಿಂದ ಪೀಣ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ಕುಡಿಯುವ ನೀರಿನ ಘಟಕ ಹಾಗೂ ಗಣಕ ಯಂತ್ರ ಪ್ರಯೋಗಾಲಯವನ್ನು ಕೊಡುಗೆಯಾಗಿ ನೀಡಲಾಗಿದೆ.
ಕುಡಿಯುವ ನೀರಿನ ಘಟಕ ಹಾಗೂ ಕಂಪ್ಯೂಟರ್ ಪ್ರಯೋಗಾಲಯವನ್ನು ಸಮರ್ಪಿಸಿ ಮಾತನಾಡಿದ ಗೋಕುಲ್ ದಾಸ್ ಎಕ್ಸ್‌ಪೋರ್ಟ್ಸ್ ಕಂಪೆನಿ ಉಪಾಧ್ಯಕ್ಷ ಟಿ.ಸ್ವಾಮಿ ಅವರು, ಖಾಸಗಿ ಶಾಲೆಗಳಲ್ಲಿ ಮಕ್ಕಳಿಂದ ಹೆಚ್ಚು ಡೊನೇಷನ್ ತೆಗೆದುಕೊಳ್ಳುತ್ತಾರೆ. ಇದರಿಂದ ಎಲ್ಲ ರೀತಿಯ ಸೌಲಭ್ಯಗಳು ದೊರೆಯುತ್ತವೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕಡಿಮೆ ಇರುತ್ತದೆ. ಹೀಗಾಗಿ ಬಡಮಕ್ಕಳಿಗೆ ಅನುಕೂಲವಾಗಲು ಪೀಣ್ಯ ಸರ್ಕಾರಿ ಪ್ರೌಢಶಾಲೆ ಹಾಗೂ ಕಾಲೇಜಿಗೆ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕಂಪ್ಯೂಟರ್ ಲ್ಯಾಬ್ ಅನ್ನು ನೀಡಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಎಸ್ಸೆಸ್ಸೆಲ್ಸಿ ಪರೀಕ್ಷೆ ಅಂತಿಮ ತಯಾರಿ ಭಾಗ-4; ಗಣಿತದ ಕುತೂಹಲಕಾರಿ ಅಪ್ಲಿಕೇಶನ್ ಪ್ರಶ್ನೆಗಳು
ಬಡ ವಿದ್ಯಾರ್ಥಿಗಳು ಸೌಲಭ್ಯಗಳಿಂದ ವಂಚಿತರಾಗಬಾರದು ಎಂಬುದನ್ನು ಗುರಿಯಾಗಿಟ್ಟುಕೊಂಡು ವಿಶೇಷವಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಗೊಳಿಸಲು ಗೋಕುಲ್ ದಾಸ್ ಎಕ್ಸ್‌ಪೋರ್ಟ್ಸ್ ಸಂಸ್ಥೆ ಮುಂದಾಗಿದೆ. ಬೆಂಗಳೂರು ಮಾತ್ರವಲ್ಲದೆ ತುಮಕೂರು, ಹಾಸನ ಹಾಗೂ ಮೈಸೂರು ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹಿರಿಯ ಜನರಲ್ ಮ್ಯಾನೇಜರ್ ಮಲ್ಲಿಕಾರ್ಜುನ ಮಾತನಾಡಿ, ಪೀಣ್ಯ ಸರ್ಕಾರಿ ಶಾಲೆ ಹಾಗೂ ಕಾಲೇಜಿಗೆ 1000 ಲೀ. ಸಾಮರ್ಥ್ಯದ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ 20 ಕಂಪ್ಯೂಟರ್‌ಗಳನ್ನು ಕೊಡುಗೆ ನೀಡಲಾಗಿದೆ. ಪೀಣ್ಯ ಬಹುದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ವಿದ್ಯಾಭ್ಯಾಸ ಮಾಡುವ ಬಡಮಕ್ಕಳಿಗೆ ನೆರವಾಗಲು ಅಗತ್ಯ ಸೌಲಭ್ಯ ನೀಡಲಾಗಿದೆ ಎಂದು ತಿಳಿಸಿದರು.
ಪ್ರಾಂಶುಪಾಲ ಜಯರಾಮ್ ಮಾತನಾಡಿ, ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ಸುಮಾರು 2000 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಕಂಪ್ಯೂಟರ್ ವಿಭಾಗ ನಿರ್ಮಿಸಿಕೊಟ್ಟಿರುವ ಗೋಕುಲ್ ದಾಸ್ ಕಂಪೆನಿಗೆ ಆಭಾರಿಯಾಗಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ | SSLC Exam 2023: ಮಾ.31ರಿಂದ SSLC ಎಕ್ಸಾಂ; ಪರೀಕ್ಷೆ ಬರೆಯಲಿರುವ 8.42 ಲಕ್ಷ ವಿದ್ಯಾರ್ಥಿಗಳು
ಶಾಲೆ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿ, ಎಷ್ಟೋ ಖಾಸಗಿ ಶಾಲೆಗಳಲ್ಲೂ ಕಂಪ್ಯೂಟರ್ ಲ್ಯಾಬ್ ಇಲ್ಲ. ಆದರೆ, ಸರ್ಕಾರಿ ಶಾಲೆಗೆ ಕಂಪ್ಯೂಟರ್‌ಗಳನ್ನು ನೀಡಿರುವುದರಿಂದ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಕಂಪ್ಯೂಟರ್ ಲ್ಯಾಬ್ ಕೊಡುಗೆ ನೀಡಿರುವ ಗೋಕುಲ್ ದಾಸ್ ಎಕ್ಸ್‌ಪೋರ್ಟ್ಸ್ ಚಾರಿಟಬಲ್ ಫೌಂಡೇಷನ್‌ಗೆ ಧನ್ಯವಾದ ಹೇಳಲು ಬಯಸುತ್ತೇವೆ ಎಂದು ತಿಳಿಸಿದರು.
ಹಿರಿಯ ಜನರಲ್ ಮ್ಯಾನೇಜರ್ ಮಲ್ಲಿಕಾರ್ಜುನ. ಎಸ್‌ಡಿಎಂಸಿ ಉಪಾಧ್ಯಕ್ಷ ಮಹಂತೇಶ್ ಬಂಗಾರಿ, ಉಪ ಪ್ರಾಂಶುಪಾಲರಾದ ಮಂಜುಳ, ರಮೇಶ್ ಪಟೇಲ್, ಮುನಿಯಪ್ಪ, ನಾಗೇಶ್ ಮೊದಲಾದವರು ಹಾಜರಿದ್ದರು.