Site icon Vistara News

10 ತಿಂಗಳ ಬಳಿಕ ಗೂಡ್ ಶೆಡ್ ರಸ್ತೆ ಸಂಚಾರಕ್ಕೆ ಮುಕ್ತ!

ಬೆಂಗಳೂರು: ಮೈಸೂರು ರಸ್ತೆಯಿಂದ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾದ ಗೂಡ್ ಶೆಡ್ ಡಾ.ಟಿ.ಸಿ.ಎಂ.ರಾಯನ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ 10 ತಿಂಗಳಿಂದ ಸ್ಥಗಿತಗೊಂಡಿದ್ದ ವಾಹನ ಸಂಚಾರವು ಗುರುವಾರ ಪುನಾರಂಭವಾಗಿದೆ.

ಕಳೆದ ವರ್ಷ ಆ. 22ರಿಂದ 1.3 ಕಿ.ಮೀ ಮಾರ್ಗದ ಗೂಡ್ಸ್ ಶೆಡ್ ರಸ್ತೆಯನ್ನು 12 ಕೋಟಿ ರೂ. ವೆಚ್ಚದಲ್ಲಿ ವೈಟ್‌ಟಾಪಿಂಗ್ ಮಾಡಲು ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 3 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಬಿಬಿಎಂಪಿ ಹೇಳಿತ್ತು. ಆದರೆ, ಬರೋಬ್ಬರಿ 10 ತಿಂಗಳು ತೆಗೆದುಕೊಂಡಿದೆ.

ಇದರಿಂದಾಗಿ ಮೈಸೂರು ರಸ್ತೆಯಿಂದ ಮೆಜೆಸ್ಟಿಕ್‌ಗೆ ತಲುಪುವ ವಾಹನ ಸವಾರರು ಏಳೆಂಟು ಕಿ.ಮೀ. ಸುತ್ತಿಕೊಂಡು ಹೋಗಬೇಕಿತ್ತು. ಎಸ್‌ಜೆಪಿ ರಸ್ತೆ, ಕೆ.ಜಿ. ರಸ್ತೆ, ಬಿನ್ನಿಮಿಲ್ ಟ್ಯಾಂಕ್‌ಬಂಡ್ ರಸ್ತೆ, ಹಳೇ ಮೈಸೂರು ರಸ್ತೆ, ಓಕಳಿಪುರ ಸೇರಿ ವಿವಿಧೆಡೆ ತೀವ್ರ ಟ್ರಾಫಿಕ್ ಉಂಟಾಗುತ್ತಿತ್ತು.

ಇದನ್ನೂ ಓದಿ| ವೈಟ್ ಟಾಪಿಂಗ್‌ ಕಾಮಗಾರಿ ಪೂರ್ಣ: ಗುರುವಾರದಿಂದ ಗೂಡ್ಸ್ ಶೆಡ್ ರೋಡ್‌ ಸಂಚಾರಕ್ಕೆ ಮುಕ್ತ

ವಿಳಂಬಕ್ಕೆ ಕಾರಣ

ಬಾಲಗಂಗಾಧರನಾಥ ಸ್ವಾಮಿ ಮೇಲ್ಸೇತುವೆಯ ಡೌನ್‌ರ‍್ಯಾಂಪ್‌ನಿಂದ ಬೇಲಿಮಠದ ಅಡ್ಡರಸ್ತೆಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಮೊದಲ ಹಂತದ ಕಾಮಗಾರಿ ನಂತರ ಜಲಮಂಡಳಿಯಿಂದ ಆರಂಭಿಸಿದ ಒಳಚರಂಡಿ ಮತ್ತು ನೀರಿನ ಕೊಳವೆಗಳನ್ನು ಹೆಚ್ಚುವರಿಯಾಗಿ ಅಳವಡಿಸಬೇಕಾಯಿತು. ಆದರೆ, ಈ ಮಾರ್ಗದಲ್ಲಿ ಗಟ್ಟಿ ಬಂಡೆ ಬಂದಿದ್ದರಿಂದ ಒಡೆದು ಕಾಮಗಾರಿ ನಿರ್ವಹಿಸಬೇಕಾಯಿತು. ಈ ರಸ್ತೆಯಲ್ಲಿ ರಾಜಕಾಲುವೆಯ ಕಲ್ವರ್ಟ್ ಕೂಡ ಶಿಥಿಲಗೊಂಡಿದ್ದು, ಮರು ನಿರ್ಮಿಸಬೇಕಾಯಿತು ಎಂದು ಹೇಳಿಕೊಳ್ಳಲಾಗಿದೆ.

ಬಿಜಿಎಸ್ ಮೇಲ್ಸೇತುವೆ ಇಳಿಜಾರಿನ ಬಳಿ ಪಾಲಿಕೆ ಮುಖ್ಯ ಇಂಜಿನಿಯರ್ ಲೋಕೇಶ್ ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಇದನ್ನೂ ಓದಿ| ಸಂಚಾರ ದಟ್ಟಣೆ ಹೆಚ್ಚಿರುವ 10 ಪ್ರದೇಶಗಳ ಗುರುತು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

Exit mobile version