ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಧೇಯಕವು ತೀವ್ರ ಚರ್ಚೆಯನ್ನು ಸೃಷ್ಟಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ವಿಧೇಯಕ ಚರ್ಚೆಗೆ ಗ್ರಾಸವಾಗಿದೆ. ಮಳೆಗಾಲದ ಅಧಿವೇಶನ (monsoon session) ಮುಗಿಯುವ ಮೊದಲು ಮಂಡಿಸುವ ಸಾಧ್ಯತೆ ಇರುವ ಗ್ರೇಟರ್ ಬೆಂಗಳೂರು (Greater Bengaluru) ಆಡಳಿತ ವಿಧೇಯಕ 2024 (Greater Bengaluru Governance Bill 2024) ಕುರಿತು ಈಗ ಚರ್ಚೆ ಆರಂಭವಾಗಿದೆ.
ಗ್ರೇಟರ್ ಬೆಂಗಳೂರು ಆಡಳಿತ ಕಾಯಿದೆ 2024ರ ಕರಡು ವಿಧೇಯಕ ವರ್ಧಿತ ಯೋಜನೆ ಮತ್ತು ಆರ್ಥಿಕ ಅಧಿಕಾರಗಳೊಂದಿಗೆ ಹೊಸ ರಚನೆಯೊಂದಿಗೆ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಅನ್ನು ರಚಿಸಲು ಪ್ರಸ್ತಾಪಿಸಿದೆ. ಇದರ ಅಡಿಯಲ್ಲಿ 5ರಿಂದ 10 ಕಾರ್ಪೋರೇಷನ್‌ಗಳನ್ನು ಸ್ಥಾಪಿಸುವ ಪ್ರಸ್ತಾಪ ಇದೆ.
ಗ್ರೇಟರ್ ಬೆಂಗಳೂರು ಅಥಾರಿಟಿಯು ಮೂರು ಹಂತದ ಆಡಳಿತ ರಚನೆಯ ಕಲ್ಪನೆ ಹೊಂದಿದೆ. ಮೇಲಿನ ಸ್ತರದಲ್ಲಿ ಮುಖ್ಯಮಂತ್ರಿ, ಅನಂತರ ಪುರಸಭೆಗಳು ಮತ್ತು ವಾರ್ಡ್ ಸಮಿತಿಗಳು ಇರಲಿವೆ. ಗ್ರೇಟರ್ ಬೆಂಗಳೂರು ಅಥಾರಿಟಿಗೆ ಬೆಂಗಳೂರು ಅಭಿವೃದ್ಧಿ ಸಚಿವರು, ಇತರ ನಾಲ್ವರು ಸಚಿವರು, ನಗರದ ಎಲ್ಲಾ ಶಾಸಕರು ಮತ್ತು ಬಿಡಿಎ, ಬಿಡಬ್ಲ್ಯೂಎಸ್‌ಎಸ್‌ಬಿ, ಬೆಸ್ಕಾಂ, ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿಯಂತಹ ಪ್ರಮುಖ ನಗರ ಸಂಸ್ಥೆಗಳ ಮುಖ್ಯಸ್ಥರು ಸಹ ಅಧ್ಯಕ್ಷರಾಗಿರುತ್ತಾರೆ.
ಮಳೆಗಾಲದ ಅಧಿವೇಶನ ಮುಗಿಯುವ ಮೊದಲು ಈ ವಿಧೇಯಕವನ್ನು ಮಂಡಿಸಬಹುದು. ಆದರೆ ಚರ್ಚೆಯನ್ನು ಮುಂದೂಡಬಹುದು ಎನ್ನಲಾಗುತ್ತಿದೆ. ವಿಧೇಯಕ ಮಂಡನೆಯಾಗದಿದ್ದರೆ ಕರ್ನಾಟಕ ಸರ್ಕಾರವು ಅಕ್ಟೋಬರ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಇತರ ರಾಜ್ಯಗಳ ಚುನಾವಣೆಗಳೊಂದಿಗೆ ನಡೆಸಬೇಕಾಗುತ್ತದೆ. ಹಾಗಾಗಿ ಈ ವಿಧೇಯಕವನ್ನು ಮಂಡಿಸುವುದರಿಂದ ಜಿಬಿಎಯನ್ನು ಜಾರಿಗೆ ತರಲು ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚಿನ ಕಾಲಾವಕಾಶ ಸಿಗಲಿದೆ.
ಜಿಬಿಎ ವ್ಯಾಪ್ತಿಗೆ ಸೇರುವ ಪ್ರದೇಶಗಳು
ಬೆಂಗಳೂರಿನ ಮೆಟ್ರೋ ಮಾರ್ಗಗಳನ್ನು ಈಗಾಗಲೇ ಬಿಬಿಎಂಪಿ ಗಡಿಯನ್ನು ಮೀರಿ ವಿಸ್ತರಿಸಲಾಗಿದೆ. ಜಿಬಿಎ ಯೋಜನೆಯಲ್ಲಿ ಇದನ್ನು ಪರಿಗಣಿಸಲಾಗುತ್ತದೆ. ಬೆಳವಣಿಗೆ ಮತ್ತು ಅಭಿವೃದ್ಧಿಯು ದಕ್ಷಿಣ ಕಾರಿಡಾರ್ ಮೇಲೆ ವಿಶೇಷವಾಗಿ ವಿಮಾನ ನಿಲ್ದಾಣದ ಕಡೆಗೆ ಕೇಂದ್ರೀಕರಿಸುತ್ತದೆ. ಅಭಿವೃದ್ಧಿಯು ವಿಮಾನ ನಿಲ್ದಾಣದ ರಸ್ತೆ ಮತ್ತು ಯಲಹಂಕದವರೆಗೂ ವಿಸ್ತರಿಸಬಹುದು. ಜಿಗಣಿ ಮತ್ತು ಬೊಮ್ಮಸಂದ್ರದಂತಹ ಪ್ರದೇಶಗಳಿಗೂ ವಿಸ್ತರಿಸುವ ನಿರೀಕ್ಷೆಯಿದೆ. ಬೆಂಗಳೂರಿನ ಪೂರ್ವ ಭಾಗವು ಸೀಮಿತ ವಿಸ್ತರಣೆ ಸಾಮರ್ಥ್ಯವನ್ನು ಹೊಂದಿದೆ. ಪಶ್ಚಿಮಕ್ಕೆ, ತುಮಕೂರು ರಸ್ತೆ ಮತ್ತು ಹತ್ತಿರದ ಪ್ರದೇಶಗಳು, ಮೆಟ್ರೋ ಮಾರ್ಗದಿಂದ ಸಂಪರ್ಕ ಹೊಂದಿದ ಪ್ರದೇಶಗಳು ನೆಲಮಂಗಲವನ್ನು ತಲುಪಿವೆ. ಇದು ಬಿಬಿಎಂಪಿ ವ್ಯಾಪ್ತಿಯಿಂದ ಹೊರಗಿದೆ. ಆದರೆ ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬಂದರೆ ಈ ಎಲ್ಲ ಪ್ರದೇಶಗಳು ಇದರ ವ್ಯಾಪ್ತಿಗೆ ಬರಲಿವೆ. ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಅಥಾರಿಟಿ (ELCITA) ಕೂಡ ಜಿಬಿಎ ಭಾಗವಾಗಲಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.
ನಗರದ ಬೆಳವಣಿಗೆಗೆ ತುಮಕೂರು, ಚಿಕ್ಕಬಳ್ಳಾಪುರ ಅಥವಾ ರಾಮನಗರದಂತಹ ಪ್ರದೇಶಗಳನ್ನು ಸೇರಿಸಲು ಹಿರಿಯ ಕಾಂಗ್ರೆಸ್ ನಾಯಕರಾದ ಡಾ. ಜಿ. ಪರಮೇಶ್ವರ ಮತ್ತು ಶರತ್ ಬಚ್ಚೇಗೌಡ ಅವರು ಬೇಡಿಕೆ ಇಟ್ಟಿದ್ದಾರೆ. ಆದರೆ ಈ ಪ್ರದೇಶಗಳಿಗೆ ವಿಸ್ತರಿಸುವ ಯಾವುದೇ ಪ್ರಸ್ತಾವನೆ ಸದ್ಯಕ್ಕೆ ಇಲ್ಲ ಎನ್ನಲಾಗುತ್ತಿದೆ. ಈ ಬೇಡಿಕೆಗಳು ರಾಜಕೀಯ ಪ್ರೇರಿತ ಮತ್ತು ಆಡಳಿತಾತ್ಮಕವಾಗಿ ಸರಿಯಲ್ಲ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ತುಮಕೂರು ಅಥವಾ ರಾಮನಗರದ 3,000ರಿಂದ 4,000 ಚದರ ಕಿಲೋ ಮೀಟರ್‌ಗಳನ್ನು ಒಳಗೊಂಡಿದ್ದೇ ಆದಲ್ಲ ಜಿಬಿಎಯ ಉದ್ದೇಶ ವಿಫಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸರ್ಕಾರದ ಸಲಹೆ ಏನು?
ಜಿಬಿಎ ಪ್ರಸ್ತುತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಅಧಿಕಾರ ವ್ಯಾಪ್ತಿಯನ್ನು ನಿರ್ದಿಷ್ಟವಾಗಿ ಮೆಟ್ರೋ ಮಾರ್ಗಗಳಲ್ಲಿ ಸ್ವಲ್ಪಮಟ್ಟಿಗೆ ಪ್ರದೇಶಗಳನ್ನು ಸೇರಿಸಲು ಯೋಜನೆ ರೂಪಿಸಲಾಗಿದೆ. ಸರಿಸುಮಾರು 975 ಚದರ ಕಿಲೋಮೀಟರ್‌ಗಳಷ್ಟು ವಿಸ್ತರಿಸಬೇಕು ಎನ್ನುವುದು ಸರ್ಕಾರದ ಸಲಹೆ.
ಹಿಂದಿನ ಬಿಜೆಪಿ ಸರ್ಕಾರ ಹೊಸಕೋಟೆಯನ್ನು ಬೆಂಗಳೂರಿನ ಭಾಗವಾಗಿಸಲು ಮುಂದಾಗಿತ್ತು. ಅದೇ ರೀತಿ ಕರ್ನಾಟಕದ ಗೃಹ ಸಚಿವ ಪರಮೇಶ್ವರ್ ಅವರು ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿರುವ ಬೆಂಗಳೂರನ್ನು ತುಮಕೂರಿನಂತಹ ಪ್ರದೇಶಗಳನ್ನು ಒಳಗೊಂಡಂತೆ ಅದರ ಪ್ರಸ್ತುತ ಮಿತಿಗಳನ್ನು ಮೀರಿ ವಿಸ್ತರಿಸಬೇಕಾಗಿದೆ ಎಂದು ವಾದಿಸುತ್ತಿದ್ದಾರೆ. ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಗ್ರೇಟರ್ ಬೆಂಗಳೂರು ಬಗ್ಗೆ ಪ್ರಸ್ತಾಪಿಸಿ, ಹರಿಯಾಣದ ಗುರುಗ್ರಾಮವನ್ನು ಹೋಲುವ ಉಪ ನಗರವನ್ನು ರಚಿಸಿ, ಅದನ್ನು ಗ್ರೇಟರ್ ಬೆಂಗಳೂರಿಗೆ ಲಗತ್ತಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ.
ಕರಡು ವಿಧೇಯಕದಲ್ಲಿ ಏನಿದೆ?
ಜಿಬಿಎ ಕರಡು ವಿಧೇಯಕವು ಸುಮಾರು 1,400 ಚದರ ಕಿಲೋಮೀಟರ್‌ಗಳಷ್ಟು ಪ್ರದೇಶವನ್ನು ಪ್ರಸ್ತುತ ಬಿಡಿಎ ವ್ಯಾಪ್ತಿಗೆ ಸೇರಿಸುವ ಪ್ರಸ್ತಾಪ ಹೊಂದಿದೆ. ಬಿಬಿಎಂಪಿಯು ಪ್ರಸ್ತುತ 709 ಚದರ ಕಿ.ಮೀ ವ್ಯಾಪಿಸಿದೆ. ಈ ವಿಧೇಯಕವು ವಾರ್ಡ್‌ಗಳ ಸಂಖ್ಯೆಯನ್ನು 225ರಿಂದ 400ಕ್ಕೆ ಹೆಚ್ಚಿಸುವಂತೆ ಸೂಚಿಸಿದೆ.
ಈ ವಿಧೇಯಕವು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡಿದೆ. ಹಣಕಾಸಿನ ನೆರವು ಸೇರಿದಂತೆ ಸ್ಥಳೀಯ ವಾರ್ಡ್ ಸಮಿತಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ. ಸರ್ಕಾರವು ಕಾರ್ಪೋರೇಷನ್‌ಗಳ ಸಂಖ್ಯೆಯನ್ನು ನಿರ್ಧರಿಸುತ್ತದೆ. ವಿಧೇಯಕದ ವ್ಯಾಪ್ತಿಯನ್ನು ಅಧಿಸೂಚನೆಯ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ಜಿಬಿಎ ರಾಜ್ಯ ಅನುದಾನಗಳ ಮೂಲಕ ಆಸ್ತಿ ತೆರಿಗೆ ಆದಾಯದ ನ್ಯಾಯಯುತ ವಿತರಣೆಯನ್ನು ಖಚಿತಪಡಿಸುತ್ತದೆ.
ಇದನ್ನೂ ಓದಿ: Karnataka Assembly Session: ಮೂಡಾ ಹಗರಣದ ಚರ್ಚೆಗೆ ವಿಧಾನಸಭೆಯಲ್ಲಿ ಬಿಜೆಪಿ ಆಗ್ರಹ; Live ಇಲ್ಲಿ ನೋಡಿ
ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್ ನೇತೃತ್ವದ ಸಮಿತಿಯು 2018ರಲ್ಲಿ ಕರಡು ವಿಧೇಯಕವನ್ನು ಸರ್ಕಾರಕ್ಕೆ ಮೊದಲು ಸಲ್ಲಿಸಿತು. ಕಾಂಗ್ರೆಸ್ ಸರ್ಕಾರವು ಬಿಬಿಎಂಪಿಯನ್ನು ಜಿಬಿಎ ಅಡಿಯಲ್ಲಿ ಸಣ್ಣ ಸಣ್ಣ ಕಾರ್ಪೋರೇಷನ್‌ಗಳಾಗಿ ವಿಭಜಿಸುವ ತನ್ನ ಪ್ರಸ್ತಾವನೆಯನ್ನು ಮುಂದುವರಿಸಿದ್ದರಿಂದ ಜೂನ್ 2023ರಲ್ಲಿ ಅದನ್ನು ಮತ್ತೆ ತಿದ್ದುಪಡಿ ಮಾಡಲಾಯಿತು.
ಗ್ರೇಟರ್ ಬೆಂಗಳೂರಿನ ಹೈಲೈಟ್ಸ್ ಹೀಗಿದೆ:
- – ಬೆಂಗಳೂರು ಆಡಳಿತಾತ್ಮಕವಾಗಿ ಕನಿಷ್ಠ 5 ಭಾಗಗಳಾಗಿ ವಿಭಜನೆ.
- – 5ರಿಂದ 10 ಪಾಲಿಕೆಗಳ ರಚನೆ
- – ಬೆಂಗಳೂರು ಮಹಾ ನಗರ ಪಾಲಿಕೆ, ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ, ಬಿಡದಿ, ಆನೇಕಲ್, ಬೊಮ್ಮಸಂದ್ರ ಸೇರಿದಂತೆ ಸುತ್ತಮುತ್ತಲಿನ ಎಲ್ಲ ಕಾರ್ಪೋರೇಷನ್‌ಗಳನ್ನು ಸೇರಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ.
- – ಕನಿಷ್ಠ 10 ಲಕ್ಷ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಒಂದೊಂದು ನಗರ ಪಾಲಿಕೆ ರಚನೆ.
- – ಗ್ರೇಟರ್ ಬೆಂಗಳೂರು, ನಗರ ಪಾಲಿಕೆ ಮತ್ತು ವಾರ್ಡ್ ಸಮಿತಿಗಳು ಸೇರಿದಂತೆ ಮೂರು ಹಂತದ ಆಡಳಿತ.
- – ಬೃಹತ್ ಮೂಲಸೌಕರ್ಯ ಕಾಮಗಾರಿಗಳ ನಿರ್ವಹಣೆ.
- – ಮುಖ್ಯಮಂತ್ರಿ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಮೇಯರ್ ಸೇರಿದಂತೆ ನಾನಾ ಆಡಳಿತ ಸಂಸ್ಥೆಗಳ ಮುಖ್ಯಸ್ಥರು ಇದರ ಸದಸ್ಯರಾಗಿರುತ್ತಾರೆ.
- – ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿಯೇ ಬಿಬಿಎಂಪಿ, ಜಲ ಮಂಡಳಿ, ಬಿಡಿಎ, ಬೆಸ್ಕಾಂ, ಮೆಟ್ರೊ, ಸಾರಿಗೆ ಇಲಾಖೆಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ.
- – ಬೆಳೆಯುತ್ತಿರುವ ಬೆಂಗಳೂರನ್ನು ವಿಸ್ತರಿಸುವುದು ಮತ್ತು ಮೂಲ ಸೌಕರ್ಯಗಳನ್ನು ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ.