ಬೆಂಗಳೂರು: 2023-24ನೇ ಸಾಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ (Guest Lecturer) ಸರ್ಕಾರವು ಗುಡ್ ನ್ಯೂಸ್ ಕೊಟ್ಟಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಗೌರವ ಧನವನ್ನು ಪಾವತಿಸಲು ಸರ್ಕಾರವು ಅನುದಾನವನ್ನು ಬಿಡುಗಡೆ ಮಾಡಿದೆ.
ಈಗಾಗಲೇ ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಸಂಜೆ ಕಾಲೇಜುಗಳು, ಸಂಸ್ಕೃತ ಕಾಲೇಜುಗಳು ಸೇರಿದಂತೆ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರುಗಳಿಗೆ ಜುಲೈ-2023ರ ವರೆಗಿನ ಗೌರವಧನ ಪಾವತಿಸಲು ಅನುದಾನ ಈಗಾಗಲೇ ಬಿಡುಗಡೆ ಮಾಡಲಾಗಿದೆ.
ಇದೀಗ ಅತಿಥಿ ಉಪನ್ಯಾಸಕರುಗಳಿಗೆ ಪ್ರಸ್ತುತ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳ ಗೌರವಧನವನ್ನು ಪಾವತಿಸಲು ಸೂಚಿಸಲಾಗಿದೆ. ಜತೆಗೆ ಹಿಂದಿನ ತಿಂಗಳಲ್ಲಿ ಕೊರತೆ ಆಗಿರುವ ಅನುದಾನವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಅನುದಾನವನ್ನು ಬಿಡುಗಡೆ ಮಾಡಬೇಕಾಗಿದೆ. ಒಟ್ಟು ರೂ. 20,46,64,708 ಅನುದಾನವನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರಿಗೆ ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಇದನ್ನೂ ಓದಿ: ಲವ್ ಮಾಡಿ ಮನೆ ಬಿಟ್ಟು ಹೋದ ಮಗಳು; ಮನನೊಂದು ಮರಕ್ಕೆ ನೇಣು ಬಿಗಿದುಕೊಂಡ ಅಪ್ಪ!
ಷರತ್ತುಗಳು ಹೀಗಿವೆ
ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರಾಂಶುಪಾಲರಿಗೆ ಕೆಲ ಷರತ್ತುಗಳನ್ನು ಹಾಕಲಾಗಿದೆ.
1) 2022-23ನೇ ಸಾಲಿನಲ್ಲಿ ನೇಮಕಗೊಂಡು ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿಯ ಅನುಮೋದನೆಗೊಂಡಿರುವ ಅತಿಥಿ ಉಪನ್ಯಾಸಕರಿಗೆ ಬಿಡುಗಡೆ ಮಾಡಿರುವ ಗೌರವಧನವನ್ನು ಕರ್ತವ್ಯ ನಿರ್ವಹಿಸಿದ ಅವಧಿಗೆ ಮಾತ್ರ ಪಾವತಿಸಬೇಕು. ಅನುಮೋದನಗೊಂಡಿಲ್ಲದ ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸಿದ್ದಲ್ಲಿ ಸಂಬಂಧಪಟ್ಟ ಪ್ರಾಂಶುಪಾಲರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ.
2) ಈ ಕಛೇರಿಯ ವಬ್ ಸೈಟ್ನಲ್ಲಿ ಪ್ರಕಟಿಸಿರುವ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ವಿಭಾಗಿಸಿ 15/19 ಗಂಟೆಗಳ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರಿಗೆ ನೇಮಕಗೊಂಡಿರಬೇಕು.
3) ಬಿಡುಗಡೆಯಾಗಿರುವ ಅನುದಾನಕ್ಕೆ ಕಡ್ಡಾಯವಾಗಿ ಬಳಕೆ ಪ್ರಮಾಣಪತ್ರವನ್ನು ಸಲ್ಲಿಸಬೇಕು.
4) ಬಿಡುಗಡೆ ಆಗಿರುವ ಅನುದಾನದಲ್ಲಿ ಅಥವಾ ಈಗಾಗಲೇ ಬಿಡುಗಡೆ ಮಾಡಿರುವ ಅನುದಾನದಲ್ಲಿ ಕಾಲೇಜಿನ ಹಂತದಲ್ಲಿ ಉಳಿಕೆ ಇದ್ದಲ್ಲಿ ಹಿಂದಿನ ತಿಂಗಳ ಗೌರವಧನ ಪಾವತಿಸಲು ಕೊರತೆಯಾಗಿರುವ ಅನುದಾನದೊಂದಿಗೆ ಹೊಂದಾಣಿಕೆ ಮಾಡಿಕೊಂಡು ನಿಯಮಾನುಸಾರ ಗೌರವಧನ ಪಾವತಿಸಲು ಅನುಮತಿಯನ್ನು ನೀಡಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ