Site icon Vistara News

Book Release: ಎಸ್. ಧೀರೇಂದ್ರ ರಚನೆಯ ʼಹವ್ಯಾಸಿರಂಗದ ಮುತ್ತು ರತ್ನಗಳುʼ ಕೃತಿ ಲೋಕಾರ್ಪಣೆ

book Released in Bengaluru by Actor Srinath

ಬೆಂಗಳೂರು: ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನ ಬಿಪಿ ವಾಡಿಯಾ ಹಾಲ್ ಭಾನುವಾರ ಅಪರೂಪದ ಸಮಾರಂಭಕ್ಕೆ ಸಾಕ್ಷಿಯಾಯಿತು. ನಟ, ನಿವೃತ್ತ ಬ್ಯಾಂಕರ್ ಎಸ್. ಧೀರೇಂದ್ರ ಅವರ ಹವ್ಯಾಸಿರಂಗದ ಮುತ್ತು ರತ್ನಗಳು-40 ಕನ್ನಡ ಕಲಾವಿದರ ರಂಗ ಸಂಕಥನ ಕೃತಿಯನ್ನು (Book Release) ಹಿರಿಯ ನಟ ‘ಪ್ರಣಯ ರಾಜ’ ಶ್ರೀನಾಥ್ ಅವರು ಲೋಕಾರ್ಪಣೆ ಮಾಡಿದರು.

ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದಿಂದ ಆಯೋಜಿಸಿದ್ದ ಕಾರ್ಯಕ್ರಮದದ ಭಾಗವಾಗಿ ನಟರಂಗದ ಹಲವು ಸದಸ್ಯರು ಪ್ರಸ್ತುತ ಪಡಿಸಿದ ರಂಗಗೀತೆಗಳು, ಕನ್ನಡ ಹವ್ಯಾಸಿ ರಂಗಭೂಮಿಯ ಸುವರ್ಣಯುಗಕ್ಕೆ ಸಭಿಕರನ್ನು ಕೊಂಡೊಯ್ದವು. ಕೃತಿಕಾರ ಎಸ್‌. ಧೀರೇಂದ್ರ ಅವರು ಕೃತಿರಚನೆಯ ಹಿನ್ನೆಲೆಯನ್ನು ವಿವರಿಸಿದರೆ, ಕನ್ನಡ ಗಣಕ ಪರಿಷತ್ತಿನ ಕಾರ್ಯದರ್ಶಿ ಜಿ.ಎನ್ ನರಸಿಂಹಮೂರ್ತಿ ಅವರು ಕೃತಿಯ ವಿಶಿಷ್ಟತೆಯ ಪರಿಚಯ ಮಾಡಿಕೊಟ್ಟರು.

ಪ್ರತಿಷ್ಠಾನದ ಸಂಚಾಲಕ ಬೆಂ.ಶ್ರೀ ರವೀಂದ್ರ ಅವರು ಮಾತನಾಡಿ, 1970 ರಿಂದ 90 ದಶಕ ಕನ್ನಡ ಹವ್ಯಾಸಿ ರಂಗಭೂಮಿ ಪರ್ವ ಕಾಲವಾಗಿದೆ. ಧೀರೇಂದ್ರ ಅವರು ಕನ್ನಡದ ಮೇರು ನಟರಾದ ಸಿ.ಆರ್ ಸಿಂಹ, ಲೋಕೇಶ್‌, ಗಿರಿಜಾ ಲೋಕೇಶ್‌, ಅಶ್ವಥ್‌‌, ಟಿ.ಎಸ್‌ ನಾಗಾಭರಣ, ನಾಟಕರರಾದ ಗಿರೀಶ್‌ ಕಾರ್ನಾಡ್‌, ಚಂದ್ರಶೇಖರ ಕಂಬಾರ, ಬಿ.ವಿ ಕಾರಂತರು ಸೇರಿದಂತೆ ಹಲವರ ಜತೆ ಕೆಲಸ ಮಾಡಿದ್ದು, ಅವರ ಕುರಿತಂತೆ ಬರೆದಿರುವ ಈ ಪುಸ್ತಕ ಬಹಳ ವಿಶೇಷ ಎಂದು ಹೇಳಿದರು.

ಇದನ್ನೂ ಓದಿ | ಆದಿಕವಿ, ವಾಗ್ದೇವಿ ಪ್ರಶಸ್ತಿ ಪ್ರದಾನ : ಜನಸಾಮಾನ್ಯರನ್ನು ತಲುಪುವ ಸಾಹಿತ್ಯ ರಚನೆಯಾಗಲಿ: ನ್ಯಾ. ಎನ್. ಕುಮಾರ್

ಪುಸ್ತಕದ ಲೇಖಕ ಎಸ್‌. ಧೀರೇಂದ್ರ ಅವರು ಮಾತನಾಡಿ, ನಾನು ಮೂಲತಃ ಬರಹಗಾರನಲ್ಲ, ಆದರೂ ಇದು ನನ್ನ ಮೊದಲ ಪುಸ್ತಕ. ನಮ್ಮ ವೇದಿಕೆಯಲ್ಲಿ ನನಗೆ ಸಿಕ್ಕಂತಹ ಪ್ರೋತ್ಸಾಹ ನೋಡಿ ಬರೆಯಲು ಆರಂಭಿಸಿದೆ. ನಾನು ಕೆಲಸ ಮಾಡಿದ ಮಹನೀಯರ ಜತೆಗಿನ ಒಡನಾಟ ಹಾಗೂ ಅವರ ಸಾಧನೆಗಳನ್ನು ಪುಸ್ತಕದ ಮೂಲಕ ಬಿಚ್ಚಿಡುವ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಮುಖ್ಯ ಅತಿಥಿ ನಾಟಕ, ಕಿರುತೆರೆ ಮತ್ತು ಚಲನಚಿತ್ರ ರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಹಳೆಯ ಸಹ ರಂಗಕರ್ಮಿಗಳ ಒಡನಾಟದ ಸವಿ ನೆನಪುಗಳನ್ನು ಹಂಚಿಕೊಂಡರು. ನಂತರ ನಟರಂಗದ ಹಿರಿಯ ನಟರಾದ ಬಿ.ಆರ್.ಜಯರಾಂ, ಎಂ.ಪಿ.ವೆಂಕಟರಾವ್ ಮತ್ತು ಟಿ. ಎಸ್. ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.

ಕೃತಿಯನ್ನು ಪ್ರಕಟಿಸಿರುವ ಸ್ನೇಹ ಬುಕ್ ಹೌಸ್‌ನ ಪರಶಿವಪ್ಪ ಮಾತನಾಡಿ, ಸಮನ್ವಯ ಸಮಿತಿ ಕನ್ನಡವೇ ಸತ್ಯ ಪ್ರತಿಷ್ಠಾನದ ಜತೆಗೆ ತಮ್ಮ ಸಂಸ್ಥೆಯ ಉತ್ತಮ ಬಾಂಧವ್ಯ ಇದೇ ರೀತಿ ಮುಂದುವರಿಯಲಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಸಮನ್ವಯ ಸಮಿತಿ, ಕನ್ನಡವೇ ಸತ್ಯ ಪ್ರತಿಷ್ಠಾನದ ಅಧ್ಯಕ್ಷರಾದ
ಬೆಂ. ಶ್ರೀ. ರವೀಂದ್ರ ವಹಿಸಿ ಸಮಾರಂಭ ಅತ್ಯಂತ ಯಶಸ್ವಿಯಾದ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ | Raja Marga Column: ‘ದ ಲಾಸ್ಟ್ ಲೆಕ್ಚರ್’ ಪುಸ್ತಕ ಬರೆದ ರಾಂಡಿ ಪಾಷ್ ಕಣ್ಣೀರ ಕತೆ!

ಸಮಾರಂಭಕ್ಕೆ ಆಗಮಿಸಿದವರನ್ನು ಗುರುರಾಜ ಶಾಸ್ತ್ರಿ ಸ್ವಾಗತಿಸಿದರೆ, ರವಿ ಕುಸಬಿ ವಂದನಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀರಂಗರಾಜನ್ ನೆರವೇರಿಸಿದರು.

Exit mobile version