Site icon Vistara News

Health Camp: ಈ ವರ್ಷ 4 ಸಾವಿರ ಯುವಜನರಿಗೆ ಉದ್ಯೋಗ ಕಲ್ಪಿಸುವ ಗುರಿ: ನಂಜೇಗೌಡ ನಂಜುಂಡ

Health Camp

ಬೆಂಗಳೂರು: ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್ ವತಿಯಿಂದ ನಗರದ ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿರುವ ಪ್ರತಿಷ್ಠಿತ ಬಿಲ್ವ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್‌ನಲ್ಲಿ ಭಾನುವಾರ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ (Health Camp) ಹಮ್ಮಿಕೊಳ್ಳಲಾಗಿತ್ತು. ಶಿಬಿರವನ್ನು ಹಿರಿಯ ಪತ್ರಕರ್ತರು ಹಾಗೂ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕರಾದ ರವೀಂದ್ರ ಭಟ್ ಉದ್ಘಾಟಿಸಿದರು.

ಆದಿಚುಂಚನಗಿರಿ ಮಹಾಸಂಸ್ಥಾನದ ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿಯವರು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ರಾಜ್ಯ ಸರ್ಕಾರದ ಮುಖ್ಯ ಎಂಜಿನಿಯರ್‌ ಬಿ. ಕೆ ಪವಿತ್ರ, ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಟಿ.ಆರ್. ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲರು ಹಾಗೂ ಮಾಜಿ ಸಿಂಡಿಕೇಟ್ ಸದಸ್ಯ ನಂಜುಂಡಯ್ಯ, ಬಿಲ್ವ ಮಲ್ಟ ಸ್ಪೆಷಾಲಿಟಿ ಹಾಸ್ಪಿಟಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಕೇಶವಮೂರ್ತಿ, ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ಗೋಪಿನಾಥ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಒಕ್ಕಲಿಗರ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷರಾದ ನಂಜೇಗೌಡ ನಂಜುಂಡ ಅವರು, ತಮ್ಮ ಸಂಸ್ಥೆಯ ಮೂಲಕ ಕಳೆದ ವರ್ಷ ಸುಮಾರು 3 ಸಾವಿರ ಯುವಜನರಿಗೆ ಉಚಿತ ಉದ್ಯೋಗಾವಕಾಶ ಕಲ್ಪಿಸಿದ್ದು, ಸುಮಾರು 150 ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ದಾರಿ ಮಾಡಿಕೊಡಲಾಗಿದೆ. ಬೆಂಗಳೂರು, ಮೈಸೂರಿನಲ್ಲಿ ಉಚಿತ ಆರೋಗ್ಯ ಮೇಳವನ್ನು ಹಮ್ಮಿಕೊಂಡು ಗ್ರಾಮೀಣ ಜನರಿಗೆ ಸೇವೆ ಒದಗಿಸಲು ಸಹಕಾರ ನೀಡಿದ್ದೇವೆ ಎಂದರು.

ಇದನ್ನೂ ಓದಿ | Job News: 10 ಸಾವಿರ ಮಂದಿಗೆ ಉದ್ಯೋಗದ ಆಫರ್ ನೀಡಿದ ಟಿಸಿಎಸ್!

ಈ ವರ್ಷ 4 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಈಗಾಗಲೇ ತುಮಕೂರಿನಲ್ಲಿ ಉದ್ಯೋಗ ಮೇಳ ಆಯೋಜಿಸಿ 750 ಯುವಕರಿಗೆ ಉದ್ಯೋಗ ದೊರಕಿಸಲಾಗಿದೆ. ಮುಂದಿನ ಉದ್ಯೋಗ ಮೇಳವನ್ನು ಮೈಸೂರಿನ ಪಿರಿಯಾಪಟ್ಟಣದಲ್ಲಿ ಜುಲೈ ತಿಂಗಳಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಈ ವರ್ಷವೂಸುಮಾರು 200 ಬಡ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಗುರಿ ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ಕಲುಷಿತ ಆಹಾರದ ಬಗ್ಗೆ ಎಚ್ಚರ

ಕಾರ್ಯಕ್ರಮ ಉದ್ಘಾಟಿಸಿದ ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಅವರು, ಹಿಂದೆಲ್ಲ ಆಹಾರ ಮತ್ತು ಔಷಧ ಬೇರೆ ಬೇರೆ ಆಗಿರಲಿಲ್ಲ. ಈಗ ನಾವೆಲ್ಲರೂ ಸೇವಿಸುವ ಆಹಾರ ವಿಷಯುಕ್ತವಾಗಿದೆ. ಹಾಗಾಗಿ, ದೈನಂದಿನ ಆಹಾರ ಬಗ್ಗೆ ಎಚ್ಚರ ವಹಿಸುವ ಕಾಲವಾಗಿದೆ. ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಂಡು ಜೀವನಶೈಲಿ ಸಾಧ್ಯವಾದಷ್ಟು ಬದಲಾವಣೆ ಮಾಡಿಕೊಳ್ಳುವುದು ಉತ್ತಮ ಅವರು ಸಲಹೆ ನೀಡಿದರು.

ಒಕ್ಕಲಿಗರ ಯುವ ಬ್ರಿಗೇಡ್ ಮುಖ್ಯಸ್ಥರಾದ ನಂಜೇಗೌಡ ಅವರ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ ಅವರು, ಸಾಮಾನ್ಯ ಜನರಿಗೆ ಉಚಿತ ಆರೋಗ್ಯ ಸೇವೆ ಮತ್ತು ಉದ್ಯೋಗ ಕಲ್ಪಿಸುತ್ತಿರುವುದು ಅತ್ಯುತ್ತಮವಾದುದು. ಮುಖ್ಯವಾಗಿ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ವಿಶೇಷಚೇತನರು, ದಿವ್ಯಾಂಗರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಗಮನಹರಿಸಿದರೆ ತಾವು ಕೂಡ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

ಉತ್ತಮ ಆಹಾರ ಪದ್ಧತಿ ಅಳವಡಿಕೆಗೆ ಸಲಹೆ

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನದ ಬೆಂಗಳೂರು ವಿಜಯನಗರ ಶಾಖಾ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಇತ್ತೀಚಿನ ದಿನಗಳಲ್ಲಿ ಮನುಷ್ಯನಿಗೆ ಆರೋಗ್ಯ ಮುಖ್ಯ. ಹಿಂದೆಲ ಆರೋಗ್ಯ ಚೆನ್ನಾಗಿತ್ತು, ಆರೋಗ್ಯವೂ ಉತ್ತಮವಾಗಿರುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ ಉತ್ತಮ ಆಹಾರ ಪದ್ಧತಿ ಅಳವಡಿಸಿಕೊಳ್ಳುವುದರ ಜತೆಗೆ ದಿನನಿತ್ಯ ಒಂದಿಲ್ಲೊಂ ದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಇದಕ್ಕೂ ಮುನ್ನ ರಾಜ್ಯ ಸರ್ಕಾರದ ಮುಖ್ಯ ಎಂಜಿನಿಯರ್ ಬಿ. ಕೆ ಪವಿತ್ರ ಮಾತನಾಡಿ, ಒಕ್ಕಲಿಗರ ಯುವ ಬ್ರಿಗೇಡ್‌ನ ಸಮಾಜಮುಖಿ ಕಾರ್ಯಗಳು ಮುಂದುವರೆಯಲಿ, ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ತಿಳಿಸಿದರು.

ಸಮಾಜಮುಖಿ ನಂಜೇಗೌಡರ ಸಾರ್ಥಕ ಸೇವೆ

ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಟಿ.ಆರ್. ಚಂದ್ರಶೇಖರ್ ಮಾತನಾಡಿ, ಕಳೆದ 12 ವರ್ಷಗಳಿಂದ ಮೈಸೂರು, ತುಮಕೂರು, ಹಾಸನ ಸೇರಿದಂತೆ ರಾಜ್ಯದ ಹಲವೆಡೆ ಸಮಾಜಸೇವೆಗಳನ್ನು ನಂಜೇಗೌಡರು ಮಾಡಿಕೊಂಡು ಬರುತ್ತಿದ್ದಾರೆ. ಅವರ ಸಾರ್ಥಕ ಸೇವೆಯನ್ನು ಸಮಾಜ ಗುರುತಿಸಬೇಕಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬೃಹತ್ ಆರೋಗ್ಯ ಮೇಳ

ಬಿಲ್ವ ಮಲ್ಟ ಸ್ಪೆಷಾಲಿಟಿ ಹಾಸ್ಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಕೇಶವಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ಬಡವರು ಮತ್ತು ಮಧ್ಯಮ ವರ್ಗದ ಜನರಿಗೂ ಗುಣಮಟ್ಟ ಆರೋಗ್ಯ ಸೇವೆ ಕಲ್ಪಿಸಲಾಗುವುದು. ದೊಡ್ಡ ಮಟ್ಟದಲ್ಲಿ ಉಚಿತ ಆರೋಗ್ಯ ಮೇಳವನ್ನು ನಡೆಸುವ ಮೂಲಕ ವೈದ್ಯಕೀಯ ಸೇವೆ ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಖ್ಯಾತ ಸ್ತ್ರೀರೋಗ ತಜ್ಞರಾದ ಡಾ. ಗೋಪಿನಾಥ್ ಮಾತನಾಡಿ, ಒಕ್ಕಲಿಗರ ಯುವ ಬ್ರಿಗೇಡ್ ನಂಜೇಗೌಡರ ಸಾರ್ಥಕ ಸಮಾಜ ಸೇವೆಯು ಇತರರಿಗೂ ಪ್ರೇರಣೆಯಾಗಲಿ ಎಂದರು.

ಶ್ರಮದಿಂದ ಬದುಕು ಕಟ್ಟಿಕೊಂಡವರು

ನಿವೃತ್ತ ಪ್ರಾಂಶುಪಾಲರು ಹಾಗೂ ಮಾಜಿ ಸಿಂಡಿಕೇಟ್ ಸದಸ್ಯರಾದ ನಂಜುಂಡಯ್ಯ ಮಾತನಾಡಿ, ಶ್ರಮದಿಂದ ಬದುಕು ಕಟ್ಟಿಕೊಂಡವರಿಗೆ ಬಡವರ, ಮಧ್ಯಮ ವರ್ಗದ ಜನರ ಜೀವನ ಅರಿವಿರುತ್ತದೆ. ಸಾಮಾಜಿಕವಾಗಿ ವಿವಿಧ ಉಚಿತ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವರ ಸಾಮಾಜಿಕ ಕಳಕಳಿಯನ್ನು ಸೂಚಿಸುತ್ತದೆ ಎಂದು ಹೇಳಿದರು.

ಇದೇ ವೇಳೆ ಒಕ್ಕಲಿಗರ ಯುವ ಬ್ರಿಗೇಡ್ ಹಾಗೂ ಎನ್‌ಆರ್‌ಐ ಒಕ್ಕಲಿಗರ ಬ್ರಿಗೇಡ್‌ನ ಸಂಸ್ಥಾಪಕ ಅಧ್ಯಕ್ಷರಾದ ನಂಜೇಗೌಡ ನಂಜುಂಡ ಅವರನ್ನು ಸ್ವಾಮೀಜಿಯವರು ಗೌರವಿಸಿದರು.

ಇದನ್ನೂ ಓದಿ | Job Alert: ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿ; ವಿವಿಧ ಹುದ್ದೆಗಳಿಗೆ ಏ. 25ರೊಳಗೆ ಅರ್ಜಿ ಸಲ್ಲಿಸಿ

ನೂರಾರು ಮಂದಿಗೆ ಉಚಿತ ಆರೋಗ್ಯ ತಪಾಸಣೆ

ನಂತರ, ಸಾಮಾನ್ಯ ವೈದ್ಯಕೀಯ ಪರೀಕ್ಷೆ, ದಂತ, ನರ ಮತ್ತು ಮಾನಸಿಕ ಪರೀಕ್ಷೆ, ಮಕ್ಕಳ ತಜ್ಞರು, ಚರ್ಮರೋಗ, ಸ್ತ್ರೀರೋಗ, ಮೂಳೆ ತಜ್ಞರಿಂದ ನೂರಾರು ಮಂದಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಉಚಿತ ಔಷಧಿಗಳನ್ನೂ ವಿತರಿಸಲಾಯಿತು.

Exit mobile version