ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ(Rain News) ನಗರದ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿ, ರಸ್ತೆಗಳು ಜಲಾವೃತವಾಗಿ ಜನರು ಪರದಾಡುವಂತಾಗಿದೆ.
ಶಿವಾನಂದ ಸರ್ಕಲ್, ಮೆಜೆಸ್ಟಿಕ್, ರೇಸ್ ಕೋರ್ಸ್ ರಸ್ತೆ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಶಿವಾಜಿನಗರ, ಎಂ.ಜಿ.ರೋಡ್, ಬನಶಂಕರಿಯಲ್ಲಿ ರಸ್ತೆಗಳು ಜಲಾವೃತವಾಗಿ ವಾಹನ ಸವಾರರು ಪರದಾಡಿದರು. ಮಲ್ಲೇಶ್ವರದಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸುವಂತಾಯಿತು.
ಅದೇ ರೀತಿ ಅನುಗ್ರಹ ಲೇಔಟ್ ಇಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟ ಎದುರಿಸುವಂತಾಯಿತು. ಎರಡು ರಸ್ತೆ ಪೂರ್ತಿ ಜಲಾವೃತವಾಗಿ ಮನೆಗಳ ಮೆಟ್ಟಿಲಿನ ಮೇಲ್ಭಾಗದವರೆಗೂ ನೀರು ನಿಂತಿದ್ದರಿಂದ ಅಗ್ನಿಶಾಮಕ ಸಿಬ್ಬಂದಿಯಿಂದ ಮಳೆ ನೀರು ಹೊರ ಹಾಕುವ ಕಾರ್ಯ ನಡೆಯಿತು. ಇದಕ್ಕೆ ಸ್ಥಳೀಯ ಬಿಬಿಎಂಪಿ ಸಿಬ್ಬಂದಿ ಸಾಥ್ ನೀಡಿದರು. ಮನೆ ಸಾಮಗ್ರಿಗಳು ನೀರು ಪಾಲಾಗಿದ್ದರಿಂದ ಬೇಸರಗೊಂಡ ನಿವಾಸಿಗಳು, ಪ್ರತಿನಿತ್ಯ ಮಳೆ ಬಂದರೆ ಇದೆ ರೀತಿ ತೊಂದರೆಯಾಗುತ್ತಿದೆ. ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ಕಳೆದ ಬಂದು ವಾರದಿಂದ ಸಿಟಿ ಜನರಿಗೆ ಬಿಟ್ಟು ಬಿಡದೆ ವರುಣರಾಯ ಕಾಡುತ್ತಿದ್ದಾನೆ. ಇನ್ನೂ ಮೂರು ದಿನ ಸಿಟಿಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಇದನ್ನೂ ಓದಿ | Rain News | ಮಳೆ ಹಿನ್ನೆಲೆ ಆ.30ರಂದು ಬೆಂಗಳೂರು ನಗರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ