ಬೆಂಗಳೂರು: ರಾಜ್ಯದ ಶಾಲೆ ಕಾಲೇಜುಗಳಲ್ಲಿ ಮತ್ತೆ ಹಿಜಾಬ್‌ಗೆ (Hijab Row) ಅವಕಾಶ ನೀಡಲಾಗುವುದು ಎಂಬ ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿಕೆಗೆ ಬಗ್ಗೆ ಹಿಂದುಪರ ಸಂಘಟನೆಗಳು ಹಾಗೂ ವಿದ್ಯಾರ್ಥಿಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದು ಮತ್ತೊಂದು ಸುತ್ತಿನ ಧರ್ಮ ದಂಗಲ್‌ಗೆ ನಾಂದಿ ಹಾಡಿದೆ. ಒಂದು ವೇಳೆ ರಾಜ್ಯ ಸರ್ಕಾರ ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗೆ ಬರಲು ಹಿಜಾಬ್ ಅನ್ನು ಧರಿಸಿ ಬರುವುದು ಕಡ್ಡಾಯ ಎಂದು ಆದೇಶ ಹೊರಡಿಸಿದರೆ ರಾಜ್ಯಾದ್ಯಂತ ಹಿಂದು ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಕೇಸರಿ ಶಾಲನ್ನು ಧರಿಸಿ ಬರುತ್ತಾರೆ. ಇದರಿಂದಾಗಿ ಮುಂದಾಗುವ ಸಮಸ್ಯೆಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂಬ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.
ಶಾಲಾ – ಕಾಲೇಜನ್ನು ಕೇಸರಿಮಯ ಮಾಡ್ತೇವೆ: ವಿಎಚ್‌ಪಿ ಎಚ್ಚರಿಕೆ
ರಾಜ್ಯ ಸರ್ಕಾರವು ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಹಿಜಾಬ್ ಧರಿಸಿ ಬರಲು ಅವಕಾಶ ಕೊಡಬಾರದು. ಒಂದು ವೇಳೆ ಅವಕಾಶ ಕೊಟ್ಟರೆ ಶಾಲಾ – ಕಾಲೇಜುಗಳನ್ನು ಕೇಸರಿಮಯ ಮಾಡಲಾಗುವುದು ಎಂದು ವಿಶ್ವ ಹಿಂದು ಪರಿಷತ್‌ನ ರಾಜ್ಯ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ಎಚ್ಚರಿಕೆ ನೀಡಿದರು.
ಇದು ಮತಾಂಧತೆಯ ಹಾಗೂ ವಿಷಬೀಜ ಬಿತ್ತುವ ಕೆಲಸವಾಗಿದೆ. ಮುಖ್ಯಮಂತ್ರಿಗಳೇ ಈ ಕೆಲಸ ಮಾಡುತ್ತಿದ್ದಾರೆ. ಎರಡು ವರ್ಷದ ಹಿಂದೆ ಹಿಜಾಬ್ ಗಲಾಟೆ ಆರಂಭವಾಗಿತ್ತು. ಕೇವಲ ಐದು ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದ್ದರು. ಪಿಎಫ್ಐ ಮತ್ತು ಎಸ್‌ಡಿಪಿಐ ಬೆಂಬಲದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿ ಆಗಿತ್ತು. ಸದ್ಯ ಪಿಎಫ್ಐ ಬ್ಯಾನ್ ಆಗಿದ್ದು ಅವರ ಕೆಲಸ ಮುಂದುವರಿದಿದೆ. ಈಗ ಸಿಎಂ ಹೇಳಿಕೆಯಿಂದ ಪಿಎಫ್ಐಗೆ ಬೆಂಬಲ ಸಿಗುತ್ತಿದೆ. ಪಿಎಫ್ಐಗೆ ಪೂರಕವಾಗಿ ಕಾಂಗ್ರೆಸ್ ಈ ಕೆಲಸ ಮಾಡುತ್ತಿದೆ ಎಂದು ಶರಣ್ ಪಂಪ್ವೆಲ್ ಮಂಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಈಚೆಗೆ ಮುಸಲ್ಮಾನರಿಗೆ ಕೊಡುಗೆಗಳನ್ನು ಘೋಷಣೆ ಮಾಡಿದರು. ಈಗ ತುಷ್ಟೀಕರಣಕ್ಕಾಗಿ ಈ ರೀತಿಯ ನಿರ್ಧಾರ ಸರಿಯಲ್ಲ. ಮುಂದಿನ ದಿನದಲ್ಲಿ ಸಂಘರ್ಷವಾದರೆ ಕಾಂಗ್ರೆಸ್ ಸರ್ಕಾರವೇ ಅದಕ್ಕೆ ಕಾರಣ ಎಂದು ಶರಣ್ ಪಂಪ್ವೆಲ್ ಆಕ್ರೋಶವನ್ನು ಹೊರಹಾಕಿದ್ದಾರೆ.
ನಾವು ಕೇಸರಿ ಶಾಲ್ ಹಾಕಬೇಕಾಗುತ್ತದೆ; ಕಾನೂನು ವಿದ್ಯಾರ್ಥಿಗಳ ಖಡಕ್ ಎಚ್ಚರಿಕೆ
ಸಿಎಂ ಸಿದ್ದರಾಮಯ್ಯ ಅವರೇ ಲೋಕಸಭಾ ಚುನಾವಣೆ ಬಂತು ಎಂದು ಓಲೈಕೆ ಮಾಡಬೇಡಿ. ಅವರು ಹಿಜಾಬ್ ಹಾಕಿಕೊಂಡು ಬಂದರೆ ನಾವು ಕೇಸರಿ ಶಾಲನ್ನು ಹಾಕಬೇಕಾಗುತ್ತದೆ ಎಂದು ಬೆಳಗಾವಿಯಲ್ಲಿ ಕಾನೂನು ವಿಭಾಗದ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
ಬಿವಿ ಬೆಲ್ಲದ್ ಕಾಲೇಜಿನ ವಿದ್ಯಾರ್ಥಿಗಳು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಹಿಜಾಬ್ ವಾಪಸ್ ತರುವಂಥ ಜರೂರು ಏನಿದೆ? ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಇರುತ್ತದೆ, ಎಲ್ಲರೂ ಒಂದಾಗಿರುತ್ತಾರೆ. ಹಿಂದು ಮುಸ್ಲಿಂ ಕ್ರಿಶ್ಚಿಯನ್ ಎಲ್ಲರೂ ಒಂದೇ ಆಗಿರುತ್ತಾರೆ. ಆದರೆ, ನೀವು ನಮ್ಮಲ್ಲಿ ಒಡಕು ಹುಟ್ಟಿಸುವ ಕೆಲಸವನ್ನು ಮಾಡುತ್ತಿದ್ದೀರಿ. ಹಿಜಾಬ್ ಮತ್ತೆ ತಂದು ಕಾಲೇಜಿನ ವಾತಾವರಣವನ್ನು ಹಾಳುಗೆಡವಬೇಡಿ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.
ಧರ್ಮ ದಂಗಲ್‌ಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ: ಮೋಹನ್ ಗೌಡ
ಮುಸ್ಲಿಂ ಸಮುದಾಯದ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ನ್ಯಾಯಾಲಯದಲ್ಲಿ ಹಿಜಾಬ್ ಪ್ರಕರಣ ಬಾಕಿ ಇರುವಾಗಲೇ ಕೋರ್ಟ್‌ಗೆ ಅಗೌರವ ತೋರುವ ಕೆಲಸ ಮಾಡಿದೆ. ಶಾಲೆಗಳಲ್ಲಿ ಮತ್ತೆ ಧರ್ಮ ದಂಗಲ್‌ಗೆ ಕಾಂಗ್ರೆಸ್ ಸರ್ಕಾರ ಕಾರಣವಾಗಿದೆ. ಕಾಂಗ್ರೆಸ್ ಧೋರಣೆ ಮುಸ್ಲಿಂ ಓಲೈಕೆಗೆ ಅನ್ನೋದು ಗ್ಯಾರಂಟಿ ಅನ್ನುವಂತಾಗಿದೆ. ಕರ್ನಾಟಕ ರಾಜ್ಯವನ್ನು ಕಾಂಗ್ರೆಸ್ ಪಕ್ಷದವರು ಮತಾಂಧ ಟಿಪ್ಪು ಸುಲ್ತಾನ್ ರಾಜ್ಯವನ್ನಾಗಿ ಮಾಡುತ್ತಿದ್ದಾರೆ. ಹಿಜಾಬ್ ಹಾಕುವುದಕ್ಕೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಇನ್ನು ಮುಂದೆ ಶಾಲೆಗಳಲ್ಲಿ ಕೇಸರಿ ಶಾಲು ಹಾಕಿಕೊಂಡು ಹೋಗಲು ಅವಕಾಶ ಕೊಡುತ್ತಾರಾ ಎಂದು ಹಿಂದು ಜನಜಾಗೃತಿ ಸಮಿತಿ ಸಂಚಾಲಕ ಮೋಹನ್ ಗೌಡ ಪ್ರಶ್ನೆ ಮಾಡಿದ್ದಾರೆ.
ಪಿಎಫ್‌ಐ, ಸಿಎಫ್‌ಐ ಸಂಘಟನೆಗಳ ಓಲೈಕೆಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಸಂಘಟನೆಗಳಿಗೆ ಕಾಂಗ್ರೆಸ್ ಸರ್ಕಾರ ಶರಣಾಗಿದೆ. ಇದು ಅತ್ಯಂತ ಖಂಡನೀಯ ಕೆಲಸ. ಒಂದು ಕಡೆ 10 ಸಾವಿರ ಕೋಟಿ ರೂಪಾಯಿ ಘೋಷಣೆಯನ್ನು ಮಾಡುವುದು, ಈಗ ಹಿಜಾಬ್‌ಗೆ ಅವಕಾಶ ಕೊಟ್ಟಿರುವುದಾಗಿ ಹೇಳುವುದರ ಹಿಂದಿನ ಅರ್ಥವೇನು? ಇದು ಮುಸಲ್ಮಾನರ ತುಷ್ಟೀಕರಣ ಅಲ್ಲವೇ? ಎಂದು ಮೋಹನ್ ಗೌಡ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Veerashaiva Lingayat: ಮರು ಜಾತಿಗಣತಿ ಮಾಡಿ; ಸರ್ಕಾರಕ್ಕೆ ವೀರಶೈವ ಮಹಾಸಭಾ ಒಕ್ಕೊರಲ ಆಗ್ರಹ
ಸೌದಿ ಅರೇಬಿಯಾ ಸೇರಿದಂತೆ ಮುಸ್ಲಿಂ ರಾಷ್ಟ್ರಗಳಲ್ಲಿ ಯೂನಿಫಾರಂಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಕರ್ನಾಟಕದಲ್ಲಿ ಹಿಜಾಬ್‌ಗೆ ಅವಕಾಶ ಕೊಡಲಾಗುತ್ತಿದೆ ಎಂದು ಮೋಹನ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.