ನವ ದೆಹಲಿ: ಪವಿತ್ರ ಗಂಗಾ ನದಿಯ ಸ್ನಾನಘಟ್ಟಗಳಲ್ಲಿ (River Ganga) ಮಹಿಳೆಯರ ಸ್ನಾನದ ವಿಡಿಯೊ ಚಿತ್ರೀಕರಣ ನಿಷೇಧಿಸಲು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಉತ್ತರಾಖಂಡ ರಾಜ್ಯ ಮಹಿಳಾ ಆಯೋಗಕ್ಕೆ ಹಿಂದು ಜನಜಾಗೃತಿ ಸಮಿತಿ ಮನವಿ ಮಾಡಿದೆ.
ಮಹಿಳೆಯರು ಮತ್ತು ಅಪ್ರಾಪ್ತ ವಯಸ್ಸಿನ ಹುಡುಗಿಯರ ಅಶ್ಲೀಲ ವಿಡಿಯೊ, ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಹೀರೋ ಸಿಟಿ ಬ್ಲಾಗ್, ಹರಿದ್ವಾರ್ ಬ್ಲಾಗ್, ಗೋವಿಂದ ಯುಕೆ ಬ್ಲಾಗ್, ಅದ್ಭುತ ಬ್ಲಾಗ್, ಶಾಂತಿ ಕೂಂಜ ಹರಿದ್ವಾರ ಬ್ಲಾಗ್ ಮತ್ತು ಇತರ ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುವವರ ವಿರುದ್ಧ ಐಪಿಸಿ ಕಲಂ 354c /509, ಮಾಹಿತಿ ತಂತ್ರಜ್ಞಾನ ಕಾನೂನಿನ ಕಲಂ 66E /67/67A ಮತ್ತು ಪೋಕ್ಸೊ ಕಾನೂನಿನ ಅಂತರ್ಗತ ಕಲಂ 14 ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಂಜಾಬ್‌ನ ಮೊಗಾದ ವಕೀಲರಾದ ಅಜಯ್ ಗುಲಾಟಿ ಮತ್ತು ಹಿಂದು ಜನಜಾಗೃತಿ ಸಮಿತಿಯ ದೆಹಲಿಯ ನ್ಯಾಯವಾದಿ ಅಮಿತಾ ಸಚ್ದೇವ ಅವರು ಒತ್ತಾಯಿಸಿದ್ದಾರೆ.
ಡಿಜಿಟಲ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸದ್ಯ ದೊಡ್ಡ ಪ್ರಮಾಣದಲ್ಲಿ ಆಘಾತಕಾರಿ ಮತ್ತು ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡಲಾಗುತ್ತಿದೆ. ಇದರಲ್ಲಿ ಈಗ ಪ್ರಮುಖವಾಗಿ ಬೇರೆ ಬೇರೆ ಬ್ಲಾಗರ್ಸ್ ಗಳಿಂದ ಹಣದ ಆಸೆಗಾಗಿ ಪವಿತ್ರ ಗಂಗಾ ನದಿಯಲ್ಲಿ ಸ್ನಾನ ಮಾಡುವ ಮಹಿಳೆಯರ ವಿಡಿಯೊ, ರೀಲ್ಸ್, ಶಾರ್ಟ್ಸ್ ತಯಾರಿಸುವುದು, ಛಾಯಾಚಿತ್ರಗಳನ್ನು ತೆಗೆಯುವುದು ಮತ್ತು ಅವರ ಅನುಮತಿ ಇಲ್ಲದೆ ವಿವಿಧ ಇಂಟರ್ನೆಟ್, ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ನಡೆಯುತ್ತಿದೆ.
ಈ ಘಟನೆಗಳಿಂದ ಸಮಾಜದಲ್ಲಿನ ಅನೇಕ ಮಹಿಳೆಯರಿಗೆ ಅವರ ಕುಟುಂಬ, ಸಂಬಂಧಿಕರು ಮತ್ತು ಸ್ನೇಹಿತರ ಎದುರು ಅವಮಾನ ಎದುರಿಸಬೇಕಾಗುತ್ತದೆ. ಹಾಗೂ ಈ ವಿಡಿಯೊ ಛಾಯಾಚಿತ್ರಗಳ ಕೆಳಗೆ ಬರೆದಿರುವ ಅಶ್ಲೀಲ ಮತ್ತು ಆಕ್ಷೇಪಾರ್ಹ ಪ್ರತಿಕ್ರಿಯೆಗಳಿಂದ ಅವರ ಗೌರವಕ್ಕೆ ಧಕ್ಕೆ ಬರುತ್ತಿದೆ. ಇಂತಹ ಅಸಂಖ್ಯ ಅಪರಿಚಿತ ವ್ಯಕ್ತಿಗಳಿಂದ ನಡೆಯುವ ಕಿರುಕುಳ ಮತ್ತು ಅವಮಾನ ಯಾವುದೇ ಸಭ್ಯ ಮಹಿಳೆ ಸಹಿಸಲು ಸಾಧ್ಯವಿಲ್ಲ. ಇಂತಹ ವಿಡಿಯೋ ಛಾಯಾಚಿತ್ರಗಳು ಸುಸಂಸ್ಕೃತ ಸಮಾಜಕ್ಕೆ ಕಳಂಕವಾಗಿವೆ. ಆದ್ದರಿಂದ ಗಂಗಾ ನದಿಯ ಉಗಮದಿಂದ ಗಂಗಾ ಸಾಗರದವರೆಗೆ ವಿಭಿನ್ನ ಪವಿತ್ರಘಟ್ಟಗಳಲ್ಲಿ ಫೋಟೊ ತೆಗೆಯುವುದು, ವಿಡಿಯೊ ಚಿತ್ರೀಕರಣಕ್ಕೆ ತಕ್ಷಣ ನಿಷೇಧ ಹೇರುವ ಆವಶ್ಯಕತೆ ಇದೆ. ಹಾಗೂ ಇಂತಹ ಕೃತ್ಯ ಮಾಡುವ ತಪ್ಪಿತಸ್ಥರ ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿನ ಎಲ್ಲಾ ಆಕ್ಷೇಪಾರ್ಹ ವಿಡಿಯೊ, ಛಾಯಾಚಿತ್ರಗಳನ್ನು ತಕ್ಷಣ ತೆಗೆಯಲು ಮಾಡಲು ಸರ್ಕಾರ ಸೂಚನೆ ನೀಡಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.
ಮಹಿಳೆ ಅಥವಾ ಹುಡುಗಿಯರ ಅಪಪ್ರಚಾರ ಮಾಡುವ ವಿಡಿಯೊ, ಛಾಯಾಚಿತ್ರಗಳನನು ಯಾರೆಲ್ಲ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೋ, ಅವರಿಗೆ ಕೇವಲ ಆರ್ಥಿಕ ದಂಡವಷ್ಟೇ ಅಲ್ಲ, ಅವರ ಮೇಲೆ ಗಂಭೀರ ಅಪರಾಧಕ್ಕಾಗಿ ದೂರು ದಾಖಲಿಸಿ ಮತ್ತು ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಹಿಂದು ಜನಜಾಗೃತಿ ಸಮಿತಿ ಒತ್ತಾಯಿಸಿದೆ.