Site icon Vistara News

Hosur International Airport: ಹೊಸೂರು ವಿಮಾನ ನಿಲ್ದಾಣದಿಂದ ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ?

Hosur International Airport

ಬೆಂಗಳೂರಿಗೆ ಸಮೀಪದಲ್ಲೇ ಇರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Hosur International Airport) ನಿರ್ಮಾಣದ ಕುರಿತು ತಮಿಳುನಾಡು (tamilnadu) ಮುಖ್ಯಮಂತ್ರಿ (cm) ಎಂ.ಕೆ. ಸ್ಟಾಲಿನ್ (m.k. stalin) ಅವರ ಘೋಷಣೆಯು ಇದರ ಪರಿಣಾಮದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ. ಸ್ಟಾಲಿನ್ ಘೋಷಣೆಗೆ ಕೆಲವೇ ದಿನಗಳ ಮೊದಲು ಕರ್ನಾಟಕದ (karnataka) ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ (m.b. patil) ಅವರು ಬೆಂಗಳೂರಿನೊಳಗೆ (bengaluru) ಉದ್ದೇಶಿತ ಎರಡನೇ ವಿಮಾನ ನಿಲ್ದಾಣದ ಅಭಿವೃದ್ಧಿ ಕುರಿತಾಗಿ ಅಧ್ಯಯನವನ್ನು ಪ್ರಾರಂಭಿಸಿದ್ದರು.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಿಂದ ಕೇವಲ 40 ಕಿ.ಮೀ ದೂರದಲ್ಲಿರುವ ಹೊಸೂರು ಐಟಿ ಮತ್ತು ಎಲೆಕ್ಟ್ರಿಕಲ್ ಇಂಡಸ್ಟ್ರಿಯಲ್ ಪಾರ್ಕ್‌ಗಳಿಗೆ ನೆಲೆಯಾಗಿದೆ. ಇದು ಪೂರ್ವ ಮತ್ತು ದಕ್ಷಿಣ ಬೆಂಗಳೂರಿಗೆ ಹತ್ತಿರವಾಗಿರುವುದರಿಂದ ಸ್ಥಳೀಯ ವ್ಯವಹಾರಗಳಿಗೆ ಆಯಕಟ್ಟಿನ ದೃಷ್ಟಿಯಿಂದ ಅನುಕೂಲಕರವಾಗಿದೆ.

ಕೈಗಾರಿಕಾ ಅಭಿವೃದ್ಧಿಯ ಮೇಲೆ ಏನು ಪರಿಣಾಮ?

ಉತ್ತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಹೊಸೂರು ವಿಮಾನ ನಿಲ್ದಾಣದ ಅಭಿವೃದ್ಧಿಯು ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿ, ಮಹದೇವಪುರ ಮತ್ತು ದಕ್ಷಿಣ ಮತ್ತು ಪೂರ್ವ ಬೆಂಗಳೂರಿನ ಇತರ ಪ್ರದೇಶಗಳಲ್ಲಿನ ಕಂಪನಿಗಳಿಗೆ ಸುಲಭವಾಗಿ ಪ್ರವೇಶಿಸಲು ಅನುಕೂಲವಾಗುತ್ತದೆ ಎನ್ನುತ್ತಾರೆ ಕೈಗಾರಿಕೋದ್ಯಮಿಗಳು. ಆದರೂ ಇದು ಬೆಂಗಳೂರಿನ ಒಟ್ಟಾರೆ ವ್ಯಾಪಾರ ಪರಿಸರದ ಮೇಲೆ ಗಮನಾರ್ಹ ಪರಿಣಾಮವನ್ನೂ ಬೀರಬಲ್ಲದು ಎನ್ನಲಾಗುತ್ತದೆ.

ಹೊಸೂರು ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸುವುದು ಒಳ್ಳೆಯದೇ. ಈ ವಿಮಾನ ನಿಲ್ದಾಣವು ಉತ್ತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಲಿಸಿದರೆ ಎಲೆಕ್ಟ್ರಾನಿಕ್ ಸಿಟಿ, ಮಹದೇವಪುರ ಮತ್ತು ದಕ್ಷಿಣ ಮತ್ತು ಪೂರ್ವ ಬೆಂಗಳೂರಿನ ಇತರ ಜಿಲ್ಲೆಗಳಲ್ಲಿ ನೆಲೆಸಿರುವ ವ್ಯಾಪಾರಗಳಿಗೆ ಹೆಚ್ಚು ಲಾಭವನ್ನು ತರಲಿದೆ. ಇದು ಬೆಂಗಳೂರಿನ ವಾಣಿಜ್ಯ ಚಟುವಟಿಕೆ ಮೇಲೆ ಬೀರುವ ಪರಿಣಾಮವನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಹೊಸೂರು ವಿಮಾನ ನಿಲ್ದಾಣವು ಕರ್ನಾಟಕದ ವ್ಯಾಪಾರ ಹಿತಾಸಕ್ತಿಗಳಿಗೆ ಧಕ್ಕೆ ತರುವುದಿಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) ಹಿರಿಯ ಉಪಾಧ್ಯಕ್ಷ ರಮೇಶ್ ಚಂದ್ರ ಲಹೋಟಿ ಅಭಿಪ್ರಾಯಪಟ್ಟಿದ್ದಾರೆ.

ಆದರೆ ತಮಿಳುನಾಡು ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಿದರೆ, ಹಲವು ಕೈಗಾರಿಕೆಗಳು ಬೆಂಗಳೂರಿನಿಂದ ತಮಿಳುನಾಡಿಗೆ ವಲಸೆ ಹೋಗುವ ಸಾಧ್ಯತೆ ಇದೆ. ಹೊಸೂರು ಬೆಂಗಳೂರಿನಿಂದ ಕೆಲವೇ ಕಿ.ಮೀ ದೂರದಲ್ಲಿ ಇರುವುದರಿಂದ ಮತ್ತು ತಮಿಳುನಾಡು ಕರ್ನಾಟಕಕ್ಕಿಂತ ಹೆಚ್ಚು ಕೊಡುಗೆ ನೀಡುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ಕರ್ನಾಟಕದಿಂದ ವಲಸೆ ಹೋಗುವ ಅಪಾಯವೂ ಇದೆ. ಬೆಂಗಳೂರು ಈಗ ಆರೋಗ್ಯ ಮತ್ತು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಜಾಗತಿಕವಾಗಿ ಪ್ರತಿಷ್ಠಿತ ನಗರವಾಗಿ ಹೊರ ಹೊಮ್ಮಿದೆ. ಆದರೆ ಮುಂದೆ ಹೊಸೂರು ವಿಮಾನ ನಿಲ್ದಾಣ ಶುರುವಾದರೆ ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ಬರುವ ಸಾಧ್ಯತೆ ಇದೆ.

ಹೊಸೂರಿನಲ್ಲಿ ವಿಮಾನ ನಿಲ್ದಾಣ ಆಗುವುದರಿಂದ ಬೆಂಗಳೂರಿಗೇ ಹೆಚ್ಚು ಪ್ರಯೋಜನವಿದೆ. ಈಗ ಐಟಿ ಕಂಪನಿಗಳು ಹೆಚ್ಚಿರುವ ಎಲೆಕ್ಟ್ರಾನಿಕ್‌ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಸುಲಭವಾಗಿ ಬಂದು ಹೋಗಲು ಉದ್ಯಮಿಗಳಿಗೆ ಮತ್ತು ಸಿಬ್ಬಂದಿಗೆ ಅನುಕೂಲವಾಗಿದೆ ಎಂಬ ಲೆಕ್ಕಾಚಾರವೂ ಇದೆ.

ಈ ವಿಮಾನ ನಿಲ್ದಾಣವೇ ಏಕೆ?

ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ನಡುವಿನ ರಿಯಾಯಿತಿ ಒಪ್ಪಂದವು ಅದರ 25ನೇ ವಾರ್ಷಿಕೋತ್ಸವದ ಮೊದಲು ಪ್ರಸ್ತುತ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯೊಳಗೆ ಯಾವುದೇ ಹೊಸ ಅಥವಾ ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು, ಸುಧಾರಿಸಲು ಅಥವಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಅಪ್‌ಗ್ರೇಡ್ ಮಾಡಬಾರದು ಎಂಬ ಷರತ್ತು ವಿಧಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ತನ್ನ 25ನೇ ವಾರ್ಷಿಕೋತ್ಸವವನ್ನು 2033ರಲ್ಲಿ ಆಚರಿಸಲಿದೆ.

2033ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಗರಿಷ್ಠ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯವನ್ನು ತಲುಪುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಬೆಂಗಳೂರಿನಲ್ಲಿ ವಿಮಾನ ಪ್ರಯಾಣದ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಕಾಳಜಿಯು ಹೆಚ್ಚುತ್ತಿರುವ ವಿಮಾನ ಪ್ರಯಾಣಿಕರ ದಟ್ಟಣೆಯನ್ನು ಸರಿಹೊಂದಿಸಲು ಎರಡನೇ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಆದ್ಯತೆ ನೀಡಲು ರಾಜ್ಯ ಸರ್ಕಾರ ಮತ್ತು ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಎರಡನ್ನೂ ಪ್ರೇರೇಪಿಸುತ್ತದೆ.

ಬೆಂಗಳೂರು ಇಂಟರ್ ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಟರ್ಮಿನಲ್ 2 ರ ಹಂತ 2 ಅನ್ನು ಪೂರ್ಣಗೊಳಿಸಲು ಮತ್ತು ಟರ್ಮಿನಲ್ 3 ಅನ್ನು ನಿರ್ಮಾಣಕ್ಕೆ ಯೋಚಿಸುತ್ತಿದ್ದರೆ ಸರ್ಕಾರವು ಎರಡನೇ ವಿಮಾನ ನಿಲ್ದಾಣಕ್ಕಾಗಿ ಭೂಮಿಯನ್ನು ಹುಡುಕುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರವು ಟೆಂಡರ್‌ಗಳನ್ನು ನೀಡಿದರೆ ಈ ಹೊಸ ವಿಮಾನ ನಿಲ್ದಾಣದ ನಿರ್ವಹಣೆಗೆ ಬಿಡ್ಡಿಂಗ್‌ಗೆ ಬಿಐಎಎಲ್ ಆಸಕ್ತಿ ತೋರಿಸಿದೆ.

ವಿಳಂಬದಿಂದ ಆತಂಕ ಏಕೆ?

ಹೊಸೂರು ವಿಮಾನ ನಿಲ್ದಾಣ ಘೋಷಣೆಗೆ ಕೆಲವು ಮಂದಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಕರ್ನಾಟಕವು ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಆದ್ಯತೆ ನೀಡಬೇಕು. ಇದಕ್ಕಾಗಿ ಆನೇಕಲ್ ಅಥವಾ ಬಿಡದಿ ಬಳಿ ಅನುಕೂಲಕರ ವಾತಾವರಣ ಇದೆ. ಪ್ರಸ್ತುತ ನೆರೆಯ ರಾಜ್ಯವು ಹೊಸ ವಿಮಾನ ನಿಲ್ದಾಣವನ್ನು ಯೋಜಿಸುತ್ತಿದೆ. ಎರಡನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ನಾವು ನಮ್ಮ ಪ್ರಯತ್ನಗಳನ್ನು ತ್ವರಿತವಾಗಿ ಮಾಡಬೇಕಾಗಿದೆ. ಬೆಂಗಳೂರು ಈಗಾಗಲೇ ತನ್ನ ಉತ್ಪಾದನಾ ಘಟಕಗಳಲ್ಲಿ ಸಾಕಷ್ಟು ಭಾಗವನ್ನು ತಮಿಳುನಾಡಿಗೆ ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Bangalore–Mysore Expressway: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಾಳೆಯಿಂದ ಸ್ಮಾರ್ಟ್‌ ಟ್ರಾಫಿಕ್‌ ಸಿಸ್ಟಂ

ಹೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಉತ್ತಮ ಸಂಪರ್ಕವಿದ್ದರೆ ಮಾತ್ರ ಅದರ ಸುತ್ತಮುತ್ತಲಿನ ಪ್ರದೇಶಗಳಿಗೆ ಅನುಕೂಲವಾಗಲಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದು, ವ್ಯಾಪಾರ ಹೂಡಿಕೆಗಳ ವಿಷಯದಲ್ಲಿ ಇಲ್ಲಿ ಕಠಿಣ ಸವಾಲುಗಳು ಇದೆ ಎಂದು ತಿಳಿಸಿದ್ದಾರೆ. ಹೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಬೆಂಗಳೂರು ಇಂಟರ್ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (BIAL) ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Exit mobile version