ಬೆಂಗಳೂರು: ಪೋಕ್ಸೊ ಪ್ರಕರಣದಲ್ಲಿ ಬಂಧನವಾಗಿರುವ ಮುರುಘಾಶ್ರೀಗೆ ಜಾಮೀನು ಸಿಕ್ಕರೆ ಚಿತ್ರದುರ್ಗದ ಮುರುಘಾ ಮಠದ ಆಡಳಿತ ನೀಡುತ್ತೀರಾ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಪ್ರಶ್ನಿಸಿದೆ. ಮುರುಘಾಮಠಕ್ಕೆ (Murugha mutt) ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ವೇಳೆ ಹೈಕೋರ್ಟ್ ಈ ಪ್ರಶ್ನೆಯನ್ನು ಕೇಳಿದೆ.
ಮುರುಘಾಮಠಕ್ಕೆ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ನೇಮಕ ರದ್ದುಪಡಿಸಲು ಕೋರಿ ಡಿ.ಎಸ್.ಮಲ್ಲಿಕಾರ್ಜುನ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಈ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಸರ್ಕಾರದ ಪರ ವಕೀಲ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಸ್ಪಂದಿಸಿ, ಶ್ರೀಗಳು ಬಿಡುಗಡೆಯಾದ ಸಂದರ್ಭದಲ್ಲಿ ಆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಆ ವಿಚಾರವನ್ನು ಪರಿಗಣಿಸಲಾಗುವುದು. ಈಗ ಮುರುಘಾ ಶ್ರೀಗಳು ಜೈಲಿನಲ್ಲಿರುವುದರಿಂದ ಆಡಳಿತಾಧಿಕಾರಿ ನೇಮಿಸಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಂತರ ಮಠದ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ನ್ಯಾಯಮೂರ್ತಿ ಮಾಹಿತಿ ಕೇಳಿದರು. ಇದಕ್ಕೆ ಅರ್ಜಿದಾರರ ಪರ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ಸ್ಪಂದಿಸಿ, ಸುಮಾರು 1600 ಕೋಟಿ ರೂಪಾಯಿ ಮೌಲ್ಯದ ಸ್ವತ್ತು ಮಠಕ್ಕಿದೆ. ಮಠದ ಆಡಳಿತದಲ್ಲಿ 106 ಶಿಕ್ಷಣ ಸಂಸ್ಥೆಗಳಿವೆ. ಪ್ರತಿ ವರ್ಷ ಮಠದ ವ್ಯವಹಾರಗಳ ಆಡಿಟ್ ಮಾಡಲಾಗಿದೆ. ಮಠಗಳನ್ನು ಉದ್ದೇಶಪೂರ್ವಕವಾಗಿಯೇ ಶಾಸನಗಳಿಂದ ಹೊರಗಿಡಲಾಗಿದೆ. ಹೀಗಾಗಿ ಸಂವಿಧಾನದ ಆರ್ಟಿಕಲ್ 162 ಬಳಸಬಾರದಿತ್ತು. ಆಡಳಿತಾಧಿಕಾರಿ ನೇಮಕ ಕಾನೂನು ಬಾಹಿರ ಎಂದು ವಾದ ಮಂಡಿಸಿದ್ದಾರೆ.
ಇದನ್ನೂ ಓದಿ | Losing the land | ಸಾಗುವಳಿ ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿ ಬೆಳಲಕಟ್ಟೆಯ ಗ್ರಾಮಸ್ಥರು, ಉಗ್ರ ಹೋರಾಟಕ್ಕೆ ಸಿದ್ಧತೆ