Site icon Vistara News

India Energy Week 2023 | ನಾವೀನ್ಯಕಾರರಿಗೆ ಇಂಧನ ಸಪ್ತಾಹದಿಂದ ಅಭೂತಪೂರ್ವ ಅವಕಾಶ: ಹರ್ದೀಪ್ ಎಸ್‌ ಪುರಿ

India Energy Week 2023

ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಇಂಧನ ಕಾರ್ಯಕ್ರಮದ ಮೊದಲ ಆವೃತ್ತಿ “ಭಾರತ ಇಂಧನ ಸಪ್ತಾಹ-2023” (India Energy Week 2023) ಹಿನ್ನೆಲೆಯಲ್ಲಿ ನಗರದ ಅರಮನೆಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್‌ ಪುರಿ ನೇತೃತ್ವದಲ್ಲಿ ಶುಕ್ರವಾರ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಜಾಗತಿಕ ಇಂಧನ ವಲಯದ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು, ಇಂಧನ, ಮಾಹಿತಿ ತಂತ್ರಜ್ಞಾನ ಹಣಕಾಸು ಕಂಪನಿಗಳು ಸೇರಿ ಕರ್ನಾಟಕದಲ್ಲಿನ ಪ್ರಮುಖ ಭಾರತೀಯ ಕಂಪನಿಗಳ ಪ್ರತಿನಿಧಿಗಳು, ಅಂತಾರಾಷ್ಟ್ರೀಯ ರಾಜತಾಂತ್ರಿಕ ಸಮುದಾಯದ ಸದಸ್ಯರು ಮತ್ತಿತರರು ಭಾಗವಹಿಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

ಭಾರತ ಇಂಧನ ಸಪ್ತಾಹ-2023ರಲ್ಲಿ ಡಿಸೆಂಬರ್ 23ರಂದು ನವ ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ “ಡ್ಯಾನ್ಸಿಂಗ್ ಚಾರ್ಜ್ ಎಲೆಕ್ಟ್ರಿಕ್ ವಾಹನಗಳು”, 2023ರ ಜನವರಿ 8ರಂದು ನವ ದೆಹಲಿಯಿಂದ ಮಾನೆಸರ್‌ವರೆಗೆ ನಡೆಯಲಿರುವ ಸುಸ್ಥಿರ ಇಂಧನ ವಾಹನಗಳಿಗಾಗಿ ಕಾರ್ ರ್‍ಯಾಲಿ ಸೇರಿ ಹಲವು ಕಾರ್ಯಕ್ರಮಗಳು ಒಳಗೊಂಡಿದ್ದು, ಇವುಗಳ ಮೂಲಕ ಭವಿಷ್ಯದ ಶುದ್ಧ ಹಾಗೂ ಹಸಿರು ಇಂಧನಕ್ಕಾಗಿ ಭಾರತ ಕೈಗೊಂಡಿರುವ ಹಲವು ಹಾದಿಗಳನ್ನು ಬಿಂಬಿಸಲಾಗುತ್ತದೆ.

ಪೂರ್ವಭಾವಿ ಸಭೆಯಲ್ಲಿ ಸಚಿವ ಹರ್ದೀಪ್ ಸಿಂಗ್‌ ಪುರಿ ಮಾತನಾಡಿ, ಇಂಧನ ಮೂಲಸೌಕರ್ಯ, ಉತ್ಪಾದನಾ ವಲಯ ಮತ್ತು ಶೋಧನೆಯಲ್ಲಿ ಭಾರತವನ್ನು ಹೂಡಿಕೆ ಸ್ನೇಹಿಯಾಗಿ ಮಾಡಿರುವುದು ಸೇರಿ ಇಂಧನ ವಲಯದಲ್ಲಿ ಭಾರತ ಅದ್ಭುತ ಸಾಧನೆಯನ್ನು ಪ್ರದರ್ಶಿಸಿದ್ದು, ದೇಶವನ್ನು ಉತ್ಪಾದನಾ ತಾಣವನ್ನಾಗಿ ಪರಿವರ್ತಿಸುವ ಕಾರ್ಯ ನಡೆದಿದೆ ಎಂದರು.

ನೊ ಗೋ ಪ್ರದೇಶಗಳನ್ನು (ಯಾರೂ ಹೋಗಲಾದತಂಹ ಪ್ರದೇಶ) ಶೇಕಡ 99 ತಗ್ಗಿಸುವುದು, ರಾಷ್ಟ್ರೀಯ ದತ್ತಾಂಶ ಭಂಡಾರ (ಎನ್‌ಡಿಆರ್) ಯೋಜನೆ ಮೂಲಕ ಸುಲಭವಾಗಿ ದತ್ತಾಂಶ ಲಭ್ಯವಾಗುವಂತೆ ಮಾಡುವುದು. ಹೈಡ್ರೋಜನ್ ಸಂಪನ್ಮೂಲ ಮೌಲ್ಯಮಾಪನ (ಎಚ್ಆರ್‌ಎ) ಯೋಜನೆ, ಶ್ರೇಣಿ ವ್ಯವಸ್ಥೆಯ ಬಾವಿಗಳ ಉಪಕ್ರಮ ಆರಂಭ, ಉತ್ಕೃಷ್ಟ ನಗರ ಅನಿಲ ವಿತರಣಾ ಯೋಜನೆ, ಅನಿಲ ಮೂಲಸೌಕರ್ಯಕ್ಕೆ ಗಣನೀಯ ಒತ್ತು ಮತ್ತಿತರ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ ಎಂದರು.

ಪ್ರತಿ ದಿನ ಸರಾಸರಿ 60 ಮಿಲಿಯನ್ ಗ್ರಾಹಕರು ಪೆಟ್ರೋಲ್ ಪಂಪ್‌ಗಳಿಗೆ ಭೇಟಿ ನೀಡುತ್ತಿದ್ದು, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಕಂಡುಬರುವ ತೀವ್ರ ಚಂಚಲತೆಯಿಂದ ರಕ್ಷಿಸಲ್ಪಡುತ್ತಾರೆ ಎಂಬುದನ್ನು ಖಾತ್ರಿಪಡಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಸಚಿವರು ಪುನರುಚ್ಛರಿಸಿದರು.

ಭಾರತ-ಜಿ20 ಅಧ್ಯಕ್ಷತೆ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ “ಭಾರತ ಇಂಧನ ಸಪ್ತಾಹ-2023” ಅನ್ನು ಬೆಂಗಳೂರಿನಲ್ಲಿ 2023ರ ಫೆಬ್ರವರಿ 6 ರಿಂದ 8ರ ವರೆಗೆ ಆಯೋಜಿಸಲಾಗಿದೆ. ಈ ಸಪ್ತಾಹಕ್ಕೆ “ಪ್ರಗತಿ, ಸಹಭಾಗಿತ್ವ ಮತ್ತು ಪರಿವರ್ತನೆ” ಎಂಬುದು ಘೋಷವಾಕ್ಯವಾಗಿದೆ. “ಭಾರತ ಇಂಧನ ಸಪ್ತಾಹ-2023” ರಲ್ಲಿ 30ಕ್ಕೂ ಅಧಿಕ ಇಂಧನ ಸಚಿವರು, ಜಾಗತಿಕ ಕಂಪನಿಗಳ 50ಕ್ಕೂ ಅಧಿಕ ಸಿಇಒಗಳು, 30 ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದು ಜಾಗತಿಕ ಆರ್ಥಿಕ ಪ್ರಗತಿಯ ಎಂಜಿನ್ ಮತ್ತು ಜಾಗತಿಕ ಬಳಕೆಯ ಚಾಲಕಶಕ್ತಿ ಎರಡೂ ಆಗಿರುವ ಭಾರತದ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಅನನ್ಯ ಅವಕಾಶ ಒದಗಿಸುತ್ತದೆ ಎಂದು ತಿಳಿಸಿದರು.

ಬೇಡಿಕೆಯ ಪ್ರಮಾಣ, ತಾಂತ್ರಿಕ ಬದಲಾವಣೆಗಳು ಮತ್ತು ಡಿಜಿಟಲ್ ನಾವಿನ್ಯತೆಯಿಂದಾಗಿ ಇಂಧನ, ಭಾರತದ ಅತ್ಯಂತ ಪ್ರಮುಖ ಕ್ರಿಯಾಶೀಲ ವಲಯವಾಗಿ ಮಾರ್ಪಟ್ಟಿದೆ. ಐಇಡಬ್ಲ್ಯು-2023 ಪ್ರಾದೇಶಿಕ, ಅಂತಾರಾಷ್ಟ್ರೀಯ ನಾಯಕರಿಗೆ ಮತ್ತು ಸಿಇಒಗಳಿಗೆ ಒಗ್ಗೂಡಿ ಕಾರ್ಯತಂತ್ರ, ನೀತಿ ನಿರೂಪಣೆ ಮತ್ತು ತಾಂತ್ರಿಕ ಜ್ಞಾನ ಹಂಚಿಕೆಗೆ ಅಭೂತಪೂರ್ವ ಅವಕಾಶಗಳನ್ನು ಒದಗಿಸಲಿದೆ ಎಂದು ಹೇಳಿದರು.

ಇಂಧನ ಸುರಕ್ಷತೆ, ಇಂಗಾಲ ಪ್ರಮಾಣ ತಗ್ಗಿಸುವ ಮಾರ್ಗೋಪಾಯಗಳು, ಸ್ಥಿತಿ ಸ್ಥಾಪಕತ್ವ ಇಂಧನ ಪೂರೈಕೆ ಸರಣಿ, ಜೈವಿಕ ಇಂಧನ ಮತ್ತು ಹೈಡ್ರೋಜನ್ ಸೇರಿ ಹೊಸ ಬಗೆಯ ಇಂಧನಗಳು, ಮೇಲ್ಮೈ ಮತ್ತು ಮಧ್ಯಮ ವಲಯದ ಹೂಡಿಕೆ ಮತ್ತಿತರ ವಿಷಯಗಳು ಕಾರ್ಯತಾಂತ್ರಿಕ ಸಮಾವೇಶದ ಕಾರ್ಯಸೂಚಿಯಲ್ಲಿ ಸೇರಿವೆ. ಕಾರ್ಯತಾಂತ್ರಿಕ ಸಮಾವೇಶ ಮಾತ್ರವಲ್ಲದೆ, ಸಮಾವೇಶದಲ್ಲಿ ತಾಂತ್ರಿಕ ಮತ್ತು ವಾಣಿಜ್ಯ ಸಮಾವೇಶ ಗೋಷ್ಠಿಗಳು ನಡೆಯಲಿದ್ದು, ಅಲ್ಲಿ ಇಂಧನ ಮಾರುಕಟ್ಟೆಯ ಚಿತ್ರಣದ ಕುರಿತಂತೆ ಸದ್ಯದ ಮತ್ತು ಭವಿಷ್ಯದ ಆಯಾಮಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Tata Motors | ಬಿಎಂಟಿಸಿಗೆ 921 ಎಲೆಕ್ಟ್ರಿಕ್​ ಬಸ್​ ಸರಬರಾಜು ಮಾಡುವ ಒಪ್ಪಂದ ಮಾಡಿಕೊಂಡ ಟಾಟಾ ಮೋಟಾರ್ಸ್​

Exit mobile version