Site icon Vistara News

Vertical Transportation: ಭಾರತದ ಮೊಟ್ಟ ಮೊದಲ ವರ್ಟಿಕಲ್​ ಟ್ರಾನ್ಸ್​ಪೋರ್ಟೇಷನ್​ ತರಬೇತಿ ಕೇಂದ್ರ ಬೆಂಗಳೂರಿನಲ್ಲಿ ಆರಂಭ

vertical transportation

ಬೆಂಗಳೂರು: ಗಗನಚುಂಬಿ ಕಟ್ಟಡಗಳ (high rise building) ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಲಿಫ್ಟ್​ ಮತ್ತು ಎಲಿವೇಟರ್​ಗಳಿಗೆ (ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್​) ಬೇಡಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿನ ಪರಿಣತರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ತರಬೇತಿ ಪಡೆದ ವೃತ್ತಿಪರರನ್ನು ಸೃಷ್ಟಿಮಾಡುವ ಉದ್ದೇಶದಿಂದ ಬೆಂಗಳೂರಿನಲ್ಲಿ ದೇಶದ ಮೊಟ್ಟ ಮೊದಲ ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್ (Vertical Transportation) ತರಬೇತಿ ಕೇಂದ್ರ ಶುಭಾರಂಭಗೊಂಡಿದೆ. ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್​’ (BSVT) ಈ ಕೇಂದ್ರ ನೀಡುವ ವಿವಿಧ ಕೊರ್ಸ್​ಗಳಿಗೆ ಬೆಂಗಳೂರಿನಲ್ಲಿ ಬುಧವಾರ (ಜುಲೈ 10ರಂದು) ಚಾಲನೆ ಸಿಕ್ಕಿತು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ವರ್ಟಿಕಲ್ ಟ್ರಾನ್ಸ್‌ಪೋರ್ಟೇಷನ್‌ನಲ್ಲಿ ಡಿಪ್ಲೋಮಾ ಕೋರ್ಸ್ ಒದಗಿಸುತ್ತಿರುವುದು ದೇಶದಲ್ಲಿ ಇದೇ ಮೊದಲು. ಈ ನಿಟ್ಟಿನಲ್ಲಿ ಬಿಎಸ್‌ವಿಟಿ ಪ್ರಮುಖ ಹೆಜ್ಜೆಯಿಟ್ಟಿರುವುದು ಸಂತೋಷದ ಸಂಗತಿ. ಈ ಉದ್ಯಮದೊಳಗಿನ ಕೌಶಲ್ಯದ ಕೊರತೆಯನ್ನು ನೀಗಿಸುವ ಕೆಲಸ ಆಗಬೇಕು. ರಾಜ್ಯದಲ್ಲಿ ಪ್ರತಿ ವರ್ಷ 10 ಲಕ್ಷ ಮಕ್ಕಳು ಎಸ್ಸೆಸ್ಸೆಲ್ಸಿ ಮುಗಿಸಿ ಹೊರಬರುತ್ತಾರೆ. ಈ ಪೈಕಿ 5 ಲಕ್ಷ ಮಂದಿ ಪಿಯುಸಿಗೆ ಹೋಗುತ್ತಾರೆ. ಅದರಲ್ಲಿ 3 ಲಕ್ಷ ಮಂದಿ ಮಾತ್ರ ಪದವಿ, ಸ್ನಾತಕೋತ್ತರದಂಥ ಉನ್ನತ ಶಿಕ್ಷಣದತ್ತ ಮುಖ ಮಾಡುತ್ತಾರೆ. ಎಸ್ಸೆಸ್ಸೆಲ್ಸಿ ಮುಗಿಸಿದ ಉಳಿದ 7 ಲಕ್ಷ ಮಂದಿಗೆ ಅತ್ಯುತ್ತಮ ತರಬೇತಿ ನೀಡಿ, ಅವರನ್ನು ಕೌಶಲ್ಯಯುತರನ್ನಾಗಿಸುವತ್ತ ಗಮನ ಹರಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಮುಂದುವರಿದ ಅವರು ಬಿಎಸ್‌ವಿಟಿಯಂಥ ಸಂಸ್ಥೆಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಇಂಥ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದರು. ಅಲ್ಲದೆ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೂ ಈ ಸಂಸ್ಥೆಯಲ್ಲಿ ಕೌಶಲ್ಯ ತರಬೇತಿ ನೀಡಿದರೆ, ಅಂಥ ವಿದ್ಯಾರ್ಥಿಗಳನ್ನು ಸರ್ಕಾರದ “ಆಶಾದೀಪ ಯೋಜನೆ”(ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ)ಯ ವ್ಯಾಪ್ತಿಗೆ ತಂದು, ಅವರಿಗೆ ಸರ್ಕಾರದ ವತಿಯಿಂದಲೇ ಸ್ಟೈಪಂಡ್ ಒದಗಿಸುತ್ತೇವೆ ಎಂಬ ಭರವಸೆಯನ್ನೂ ಅವರು ನೀಡಿದರು.

ಬಿಎಸ್​ವಿಟಿಯ ಸಿಒಒ ಸಂತೋಷ್ ಕುಮಾರ್ ಮಾತನಾಡಿ “ವರ್ಷಕ್ಕೆ ಕನಿಷ್ಠ ಒಂದು ಲಕ್ಷ ಮಂದಿಗೆ ತರಬೇತಿ ನೀಡಿ, ಅವರಿಗೆ ಉದ್ಯೋಗಾವಕಾಶ ಕಲ್ಪಿಸಿ ವಿದೇಶಕ್ಕೆ ಕಳುಹಿಸುವುದು ನಮ್ಮ ಪ್ರಮುಖ ಗುರಿಯಾಗಿದೆ. ಶಿಕ್ಷಣ ಮತ್ತು ತರಬೇತಿಯ ಮೂಲಕ ವರ್ಟಿಕಲ್​ ಟ್ರಾನ್ಸ್​ಪೋರ್ಟೇಷನ್​ ಉದ್ಯಮದಲ್ಲಿ ಕ್ರಾಂತಿಯನ್ನುಂಟು ಮಾಡುವುದು ಬಿಎಸ್​ವಿಟಿ ಸ್ಥಾಪನೆಯ ಮೂಲ ಉದ್ದೇಶ. ನಮ್ಮ ವಿದ್ಯಾರ್ಥಿಗಳಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ಮತ್ತು ಸಾಧ್ಯವಾದಷ್ಟು ಉತ್ತಮ ವೃತ್ತಿ ಅವಕಾಶಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ನಮ್ಮ ವಿಶಿಷ್ಟ ಪಠ್ಯಕ್ರಮ ಮತ್ತು ಬಲವಾದ ಉದ್ಯಮ ಸಂಬಂಧಗಳೊಂದಿಗೆ, ವರ್ಟಿಕಲ್​ ಟ್ರಾನ್​​ಪೋರ್ಟೇಷನ್​ನಲ್ಲಿ ಮುಂದಿನ ಪೀಳಿಗೆಯ ನಾಯಕರು ಮತ್ತು ಪರಿಣತರನ್ನು ಸೃಷ್ಟಿಸುವುದು ನಮ್ಮ ಧ್ಯೇಯ ಎಂದು ಹೇಳಿದರು.

ವರ್ಟಿಕಲ್​ ಟ್ರಾನ್ಸ್​ಪೋರ್ಟೇಷನ್​ (ಎಲಿವೇಟರ್​ಗಳು) ಉದ್ಯಮದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ವಿಶೇಷ ಕೋರ್ಸ್​ಗಳನ್ನು ಈ ಕೇಂದ್ರದಲ್ಲಿ ನೀಡಲಾಗುತ್ತದೆ. ಇದರೊಂದಿಗೆ ಬಿಎಸ್ ವಿಟಿ ಈ ಕ್ಷೇತ್ರದಲ್ಲಿ ಹೊಸ ಮಾನದಂಡ ಸ್ಥಾಪಿಸುವ ಗುರಿ ಹೊಂದಿದೆ ಎಂದು ಅವರು ನುಡಿದರು.

ಇದನ್ನೂ ಓದಿ: Bengaluru News: ಎಐ ತಂತ್ರಜ್ಞಾನ ಬಳಕೆಯಿಂದ ಸಮಾಜದ ಸಮಸ್ಯೆಗಳಿಗೆ ಪರಿಹಾರ: ಅಶೋಕ್ ಚತುರ್ವೇದುಲಾ

ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ.ಹ್ಯಾರಿಸ್, ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಕರ್ನಾಟಕ ರಾಜ್ಯ, ಖಾತರಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಎಸ್.ಆರ್.ಮೆಹ್ರೋಜ್ ಖಾನ್ ಉಪಸ್ಥಿತರಿದ್ದರು. ಭಾರತ್ ಸ್ಕೂಲ್ ಆಫ್ ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್​ ಟ್ರೈನಿಂಗ್ ಪ್ರೈವೇಟ್ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಮುಷ್ತಾಕ್ ಅತಿಥಿಗಳನ್ನು ಸ್ವಾಗತಿಸಿದರು.

ಬಿಎಸ್​ವಿಟಿ ನೀಡುವ ಕೋರ್ಸ್‌ಗಳು ಇವು

ಬಿಎಸ್​ವಿಟಿ ವರ್ಟಿಕಲ್​ ಟ್ರಾನ್ಸ್​ಪೋರ್ಟ್​ ಉದ್ಯಮಕ್ಕೆ ಅನುಗುಣವಾಗಿ ಹಲವು ಬಗೆಯ ಕೋರ್ಸ್​ಗಳನ್ನು ನೀಡುತ್ತಿದೆ. ಅವುಗಳೆಂದರೆ, ಡಿಪ್ಲೊಮಾ ಇನ್ ವರ್ಟಿಕಲ್ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜಿ, ಅಪ್​ಸ್ಕಿಲಿಂಗ್ ಪ್ರೋಗ್ರಾಂ ಇನ್​ ವರ್ಟಿಕಲ್​ ಟ್ರಾನ್ಸ್​​ಪೋರ್ಟೇಷನ್​ – ಮೆಂಟೇನೆನ್ಸ್​, ಅಪ್​ಸ್ಕಿಲಿಂಗ್ ಪ್ರೋಗ್ರಾಂ ಇನ್​ ವರ್ಟಿಕಲ್​ ಟ್ರಾನ್ಸ್‌​ಪೋರ್ಟೇಷನ್- ಟೆಸ್ಟಿಂಗ್ ಕಮಿಷನಿಂಗ್​, ಅಡ್ವಾನ್ಸ್​ಡ್​ ಕೋರ್ಸ್​ ಇನ್​ ಲಿಫ್ಟ್ ಇನ್​​ಸ್ಟಾಲೇಷನ್​, ವರ್ಟಿಕಲ್ ಟ್ರಾನ್ಸ್​ಪೋರ್ಟೇಷನ್​- ಮಾಡರ್ನನೈಸೇಷನ್​ ಪ್ರೋಗ್ರಾಂ, ಸೇಫ್ಟಿ ಕಾಂಪ್ಲೈಯನ್ಸ್​​ ಇನ್​ ವರ್ಟಿಕಲ್​ ಟ್ರಾನ್ಸ್​ಪೋರ್ಟೇಷನ್​, ರೆಸ್ಕ್ಯೂ ಆಪರೇಷನ್ ಟ್ರೈನಿಂಗ್ ಪ್ರೋಗ್ರಾಂ.

Exit mobile version