Site icon Vistara News

Agritech India 2024: ಬೆಂಗಳೂರಿನಲ್ಲಿ ʼಅಗ್ರಿಟೆಕ್ ಇಂಡಿಯಾ 2024ʼಕ್ಕೆ ಆ. 22ರಂದು ಚಾಲನೆ

Agritech India 2024

ಬೆಂಗಳೂರು: ದೇಶದ ಅತಿದೊಡ್ಡ ಕೃಷಿ ಮತ್ತು ಆಹಾರ ಉದ್ಯಮ ಮೇಳ ʼಅಗ್ರಿಟೆಕ್ ಇಂಡಿಯಾ 2024ʼ ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆರಂಭಗೊಳ್ಳಲಿದ್ದು, 3 ದಿನಗಳ ಕಾಲ ನಡೆಯಲಿರುವ ಈ ಬೃಹತ್ ಮೇಳವು (Agritech India 2024) ಆಗಸ್ಟ್‌ ‌22ರಂದು ಉದ್ಘಾಟನೆಗೊಳ್ಳಲಿದೆ. ಕೃಷಿ ಮತ್ತು ಆಹಾರ ಉದ್ಯಮ ಮೇಳವು 350 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡಿರುತ್ತದೆ. ಮೇಳಕ್ಕೆ ಅಂದಾಜು 25,000 ವ್ಯಾಪಾರ ಸಂದರ್ಶಕರು ಆಗಮಿಸುವ ನಿರೀಕ್ಷೆಯಿದೆ.

ಈ ಕುರಿತು ನಗರದ ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಮುಖ್ಯಸ್ಥರು ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಮಾತನಾಡಿ, “ಅಗ್ರಿಟೆಕ್ ಈವೆಂಟ್‌ ಮಹಿಳಾ ಉದ್ಯಮಿಗಳಿಗೆ ಉತ್ತಮ ವೇದಿಕೆಯನ್ನು ನೀಡುತ್ತಿದೆ. ಮಹಿಳೆಯರು ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಅವಕಾಶವನ್ನು ಈ ಬೃಹತ್‌ ಮೇಳವು ಒದಗಿಸಲಿದೆ. ಈ ಮೇಳದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಖರೀದಿದಾರರೊಂದಿಗೆ ಬಿ2ಬಿ ಸಭೆಗಳನ್ನು ಆಯೋಜಿಸಲಾಗುತ್ತದೆ. ಈ ಮೂಲಕ ಕರ್ನಾಟಕದ ಮಹಿಳಾ ಉದ್ಯಮಿಗಳಿಗೆ ತಮ್ಮ ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಮತ್ತು ನಿಗದಿತ ಗ್ರಾಹಕರೊಂದಿಗೆ ಸಂಪರ್ಕ ಸಾಧಿಸಲು ಅವಕಾಶವನ್ನು ಒದಗಿಸುತ್ತದೆ. ವಿಶೇಷವಾಗಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದು ನಮ್ಮ ಉದ್ದೇಶವಾಗಿದ್ದು, 11 ರಾಜ್ಯಗಳಾದ್ಯಂತ 52 ಸಂಘಗಳು ಸೇರಿದಂತೆ 20,000 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳ ಸಹಭಾಗಿತ್ವದಲ್ಲಿ ಈ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದರು.

ಇದನ್ನೂ ಓದಿ: World Senior Citizens Day: ವಿಶ್ವ ಹಿರಿಯ ನಾಗರಿಕರ ದಿನದ ಪ್ರಯುಕ್ತ ವೈದ್ಯರಿಂದ ಉಚಿತ ಸಮಾಲೋಚನೆ

ಉಬುಂಟು ಕನ್ಸೋರ್ಟಿಯಂ (ಒಕ್ಕೂಟ) ಕೃಷಿಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವಲ್ಲಿ ನಿರತವಾಗಿದೆ. ಅಲ್ಲದೆ ಮಹಿಳೆಯರಿಗೆ ಉದ್ಯಮದಲ್ಲಿ ತೊಡಗಿಕೊಳ್ಳಲು ಅಗತ್ಯ ತರಬೇತಿಯನ್ನು ನೀಡುತ್ತಾ ಬಂದಿದೆ ಎಂದು ಅವರು ವಿವರಿಸಿದರು.

ಈ ವೇಳೆ ಮೀಡಿಯಾ ಟುಡೇ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಎನ್‌.ಬಿ. ನಖ್ವಿ ಮಾತನಾಡಿ, “ವಿವಿಧ ಕ್ಷೇತ್ರದಲ್ಲಿ ಮಹಿಳೆಯರು ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಭಾರತದಾದ್ಯಂತ ಮಹಿಳೆಯರು ಹೂವು ಕೃಷಿ, ಹಸಿರುಮನೆ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರೆಲ್ಲರಿಗೂ ಈ ಅಗ್ರಿಟೆಕ್‌ ವೇದಿಕೆ ಉತ್ತಮ ಅವಕಾಶವನ್ನು ನೀಡುತ್ತಿದೆ. ಟರ್ಕಿ, ಚೀನಾ, ಜರ್ಮನಿ, ಥೈಲ್ಯಾಂಡ್, ಸ್ಪೇನ್, ನೆದರ್ಲ್ಯಾಂಡ್, ನೇಪಾಳ, ಶ್ರೀಲಂಕಾ, ಕುವೈತ್, ರಷ್ಯಾ, ತೈವಾನ್, ಫ್ರಾನ್ಸ್, ಇಟಲಿ, ಕೆನಡಾ, ಯುಎಇ, ಇಂಡೋನೇಷಿಯಾ, ಬಹ್ರೇನ್, ಸಿಂಗಾಪುರ್, ಇರಾನ್, ಆಸ್ಟ್ರೇಲಿಯಾ, ಭೂತಾನ್, ಮಲೇಷ್ಯಾ, ವಿಯೆಟ್ನಾಂ ಮತ್ತು ನ್ಯೂಜಿಲೆಂಡ್ ಸೇರಿದಂತೆ 25 ದೇಶಗಳ ಪ್ರತಿನಿಧಿಗಳು ಈ ಮೇಳದಲ್ಲಿ ಭಾಗವಹಿಸಲಿದ್ದಾರೆ. ಈ ಮೂರು ದಿನಗಳ ಮೇಳವು ವ್ಯವಹಾರಗಳಿಗೆ ಸಂಪರ್ಕ ಸಾಧಿಸಲು ಮತ್ತು ಹೊಸ ಅವಕಾಶಗಳನ್ನು ಅನ್ವೇಷಿಸಲು, ವಲಯದಲ್ಲಿ ಬೆಳವಣಿಗೆ ಮತ್ತು ನಾವೀನ್ಯತೆಗೆ ಒಗ್ಗಿಕೊಳ್ಳಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ ಎಂದರು.

ಮೀಡಿಯಾ ಟುಡೇ ಮುಖ್ಯ ಸಂಪಾದಕ ಜಾಫರ್ ನಖ್ವಿ ಮಾತನಾಡಿ, “ರೈತರನ್ನು ನೇರವಾಗಿ ಖರೀದಿದಾರರೊಂದಿಗೆ ಸಂಪರ್ಕಿಸಲು, ಮಧ್ಯವರ್ತಿಗಳ ಅಗತ್ಯವನ್ನು ನಿವಾರಿಸಲು ಅಗ್ರಿಟೆಕ್ ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತಿದೆ. ಅಗ್ರಿಟೆಕ್ ಇಂಡಿಯಾ 2024 ಕೃಷಿ ಮತ್ತು ಆಹಾರ ಪ್ರದರ್ಶನ ಮೇಳವು ಇಂಡಿಯಾ ಫುಡೆಕ್ಸ್ ಮತ್ತು ಗ್ರೇನ್ ಟೆಕ್ ಇಂಡಿಯಾ ಸಹಯೋಗದೊಂದಿಗೆ ನಡೆಯಲಿದ್ದು, ಕೃಷಿ ಮತ್ತು ಆಹಾರ ಉದ್ಯಮದ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ. ಈ ಪ್ರದರ್ಶನವು ಆಹಾರ ಉತ್ಪನ್ನಗಳು, ಫ್ರೋಜನ್ ಆಹಾರಗಳು, ತಿಂಡಿಗಳು, ಬೇಕರಿ ವಸ್ತುಗಳು, ಅನುಕೂಲಕರ ಆಹಾರಗಳು, ಸಾವಯವ ಉತ್ಪನ್ನಗಳು, ತಾಜಾ ಹಣ್ಣುಗಳು, ಆಹಾರ ಚಿಲ್ಲರೆ ವ್ಯಾಪಾರ, ಡೈರಿ ಉತ್ಪನ್ನಗಳು, ಚಹಾ, ಕಾಫಿ ಮತ್ತು ಹಣ್ಣು ಆಧಾರಿತ ಪಾನೀಯಗಳನ್ನು ಒಳಗೊಂಡಂತೆ ವೈವಿಧ್ಯಮಯ ಆಹಾರ ವಲಯದ ವಿಭಾಗಗಳು ಪ್ರದರ್ಶನದಲ್ಲಿ ಇರಲಿವೆ. ಅದಲ್ಲದೆ ಈವೆಂಟ್ 13ನೇ ಡೈರಿಟೆಕ್ ಇಂಡಿಯಾ, ಪೌಲ್ಟ್ರಿ ಮತ್ತು ಜಾನುವಾರು ಎಕ್ಸ್ಪೋ ಮತ್ತು ಬೇಕರಿಟೆಕ್ ಇಂಡಿಯಾದೊಂದಿಗೆ ಏಕಕಾಲದಲ್ಲಿ ನಡೆಯಲಿದೆ. ಇದು ಫಾರ್ಮ್‌ನಿಂದ ಫೋರ್ಕ್‌ವರೆಗಿನ ಆಹಾರ ಉದ್ಯಮದ ಸಂಪೂರ್ಣ ಅವಲೋಕನವನ್ನು ನೀಡಲಿದೆ ಎಂದು ವಿವರಿಸಿದರು.

ಇದನ್ನೂ ಓದಿ: Kannada New Movie: ʼಲಂಗೋಟಿ ಮ್ಯಾನ್ʼ ಚಿತ್ರದ ಟೀಸರ್ ಬಿಡುಗಡೆಗೊಳಿಸಿದ ನಟ ಶರಣ್

ಆಗಸ್ಟ್ 22ರ (ಎರಡನೇ ದಿನ) ಕಾರ್ಯಕ್ರಮದಲ್ಲಿ “ವುಮೆನ್ ಇನ್ ಅಗ್ರಿಬಿಸಿನೆಸ್” – ಜಾಗತಿಕ ಸಮ್ಮೇಳನ, ಪ್ರದರ್ಶನ, ನೆಟ್ವರ್ಕಿಂಗ್ ಶೃಂಗಸಭೆ ಮತ್ತು ಪ್ರಶಸ್ತಿ ಸಮಾರಂಭವು ಕೃಷಿ ಮತ್ತು ಆಹಾರ ಕ್ಷೇತ್ರಗಳಲ್ಲಿನ ಮಹಿಳೆಯರ ಕೊಡುಗೆಗಳನ್ನು ಗೌರವಿಸಲಾಗುತ್ತದೆ. ಈ ಕಾರ್ಯಕ್ರಮವು ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರಿಗೆ ಹೊಸ ಪರಿಚಯಗಳು ಮತ್ತು ಅವರ ವೈಯಕ್ತಿಕ ಸಾಧನೆಗಳನ್ನು ಪ್ರದರ್ಶಿಸಲು ಅಮೂಲ್ಯವಾದ ವೇದಿಕೆಯನ್ನು ನೀಡುತ್ತದೆ. ಆಗಸ್ಟ್ 23ರ ಅಂತಿಮ ದಿನದ ಮೇಳದಲ್ಲಿ ಧಾನ್ಯಗಳು ಮತ್ತು ಹಿಟ್ಟು ಮಿಲ್ಲಿಂಗ್ ಉದ್ಯಮದ ನೆಟ್ವರ್ಕಿಂಗ್ ಶೃಂಗಸಭೆಯನ್ನು ಏರ್ಪಡಿಸಲಾಗುತ್ತಿದೆ. ಧಾನ್ಯಗಳು ಮತ್ತು ಹಿಟ್ಟು ಮಿಲ್ಲಿಂಗ್ ಉದ್ಯಮದ ನಿರ್ದಿಷ್ಟ ಅಗತ್ಯಗಳನ್ನು ಈ ಮೇಳದಲ್ಲಿ ತಿಳಿಸಲಾಗುತ್ತದೆ. ಈ ಸಮ್ಮೇಳನದ ಅಧಿವೇಶನವು ಉದ್ಯಮದ ಮಧ್ಯಸ್ಥಗಾರರಿಗೆ ಎದುರಾಗುವ ಸವಾಲುಗಳು, ಅವಕಾಶಗಳು ಮತ್ತು ಹೊಸ ಸಾಧ್ಯತೆಗಳನ್ನು ಚರ್ಚಿಸಲು ವೇದಿಕೆಯನ್ನು ಒದಗಿಸುತ್ತದೆ.

ಆಗಸ್ಟ್ 22 ರಿಂದ 24, 2024ರವರೆಗೆ ಈ ಮೇಳವು ನಡೆಯಲಿದೆ. ಈ ವರ್ಷದ ಅಗ್ರಿಟೆಕ್ ಇಂಡಿಯಾ ಮೇಳವು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಗುರುವಾರ ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಬೃಹತ್ ಮೇಳವು ಆಗಸ್ಟ್‌‌22ರಂದು ಉದ್ಘಾಟನೆಗೊಳ್ಳಲಿದೆ. ಕೆನಡಾ, ಟರ್ಕಿ, ಚೀನಾ, ಜರ್ಮನಿ, ಇಟಲಿ, ಸ್ಪೇನ್, ಹಾಲೆಂಡ್, ರಷ್ಯಾ, ತೈವಾನ್, ಥೈಲ್ಯಾಂಡ್, ಸಿಂಗಾಪುರ್, ಇಂಡೋನೇಷ್ಯಾ, ನೇಪಾಳ ಮತ್ತು ಬ್ರೆಜಿಲ್ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳ ಉತ್ಪನ್ನಗಳು ಮತ್ತು ಸೇವೆಗಳ ಪ್ರದರ್ಶನವನ್ನು ನೀಡುವ ಮೂಲಕ ಹಿಂದಿನ ಎಲ್ಲಾ ಆವೃತ್ತಿಗಳನ್ನು ಮೀರಿಸುವ ಭರವಸೆ ಇದೆ.

ಇದನ್ನೂ ಓದಿ: Kannada New Movie: ಮಧುಸೂದನ್ ಹವಾಲ್ದಾರ್ ನಿರ್ದೇಶನದ ʼಕಾಖಂಡಕಿ ಶ್ರೀ ಮಹಿಪತಿದಾಸರುʼ ಚಿತ್ರದ ಹಾಡುಗಳ ಅನಾವರಣ

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು APEDA ನ ಜನರಲ್ ಮ್ಯಾನೇಜರ್ ವಿನಿತಾ ಸುಧಾಂಶು, ಬೆಂಗಳೂರಿನ ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕಿ ಪಿ.ಐ. ಶ್ರೀವಿದ್ಯಾ, ಗ್ಲೋಬಲ್ ಅಗ್ರಿಸಿಸ್ಟಮ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಗೋಕುಲ್ ಪಟ್ನಾಯಕ್, ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ (CFTRI) ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್ ಮತ್ತು FSSAI ಸಲಹೆಗಾರ ಮತ್ತು ಕೋಡೆಕ್ಸ್ನ ಮಾಜಿ ಅಧ್ಯಕ್ಷ ಸಂಜಯ್ ದವೆ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ಅವರು ನೀಡಿದರು.

Exit mobile version