ಬೆಂಗಳೂರು: ಬೆಂಗಳೂರು ಅರ್ಬನ್ ಡಿಸ್ಟ್ರಿಕ್ಟ್ ಚೆಸ್ ಅಸೋಸಿಯೇಷನ್ (ಬಿಯುಡಿಸಿಎ) ತನ್ನ ಮಹತ್ವಾಕಾಂಕ್ಷೆಯ ಯೋಜನೆಯಾದ ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್‌ಮಾಸ್ಟರ್ಸ್ (Chess Grandmaster) ಓಪನ್ ಚೆಸ್ ಪಂದ್ಯಾವಳಿಯ 2024ರ ದಿನಾಂಕವನ್ನು ಪ್ರಕಟಿಸಿದೆ. ಜನವರಿ 18 ರಿಂದ 26ರವರೆಗೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿವೆ. 40ಕ್ಕೂ ಹೆಚ್ಚು ಗ್ರ್ಯಾಂಡ್‌ಮಾಸ್ಟರ್‌ಗಳು ಸೇರಿದಂತೆ ಭಾರತ ಮತ್ತು 20 ಇತರ ದೇಶಗಳ 2000ಕ್ಕೂ ಹೆಚ್ಚು ಆಟಗಾರರ ಭಾಗವಹಿಸಲಿದ್ದಾರೆ.
ಪಂದ್ಯಾವಳಿಯು ಕರ್ನಾಟಕ ರಾಜ್ಯ ಚೆಸ್ ಅಸೋಸಿಯೇಷನ್ ( ಕೆಎಸ್‌ಸಿಎ), ಅಖಿಲ ಭಾರತ ಚೆಸ್ ಫೆಡರೇಶನ್ (ಎಐಸಿಎಫ್), ಮತ್ತು ಇಂಟರ್ ನ್ಯಾಷನಲ್ ಚೆಸ್ ಫೆಡರೇಶನ್ (ಎಫ್ಐಡಿಇ) ಸಹಯೋಗದಲ್ಲಿ ನಡೆಯಲಿದೆ. ಈ ಪಂದ್ಯಾವಳಿಯು ಜಾಗತಿಕವಾಗಿ ಚೆಸ್ ಆಟದ ಸಂಭ್ರಮಾಚರಣೆಯಾಗಿರಲಿದೆ ಬಿಯುಡಿಸಿ ಪೋಷಕರು ಹಾಗೂ ಕೆಓಎ ಅಧ್ಯಕ್ಷರಾದ ಕೆ.ಗೋವಿಂದರಾಜ್ ಹೇಳಿದ್ದಾರೆ. ಕೆಎಸ್‌ಸಿಎ ಅಧ್ಯಕ್ಷರಾದ ಡಿಪಿ ಅನಂತ, ಬಿಯುಡಿಸಿಎ ಅಧ್ಯಕ್ಷೆ ಶ್ರೀಮತಿ ಸೌಮ್ಯ ಎಂ ಯು, ಕರ್ನಾಟಕದ ಮೊದಲನೇ ಗ್ರ್ಯಾಂಡ್ ಮಾಸ್ಟರ್ ಶ್ರೀ ತೇಜಕುಮಾರ್ ಅವರು ಟೂರ್ನಿಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಕೆ.ಗೋವಿಂದರಾಜ್ ಮಾತನಾಡಿ, ಈ 42 ವರ್ಷಗಳ ಚೆಸ್ ಇತಿಹಾಸದಲ್ಲಿ ಬೆಂಗಳೂರಿನಲ್ಲಿ ಮೊದಲನೇ ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಚೆಸ್ ಪಂದ್ಯಾವಳಿಯನ್ನು ಆಯೋಜಿಸುತ್ತಿದ್ದೇವೆ. ಈ ಕಾರ್ಯಕ್ರಮದ ಯಶಸ್ಸಿಗೆ ನನ್ನ ಶುಭ ಹಾರೈಕೆಗಳನ್ನು ಸಲ್ಲಿಸುತ್ತೇನೆ. ಇದು ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ನಡೆಯುವ ಬಿಯುಡಿಸಿಎಯ ಮಹತ್ವಾಕಾಂಕ್ಷೆಯ ಉಪಕ್ರಮವಾಗಿದೆ. ಜನವರಿ 18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಅವರೊಂದಿಗೆ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಬೆಂಗಳೂರು ಜಾಗತಿಕ ಚೆಸ್ ಹಬ್ ಆಗಲು ಸಜ್ಜಾಗಿದ್ದು, ಹೊಸ ಪೀಳಿಗೆಯ ಚೆಸ್ ಪಟುಗಳಿಗೆ ಸ್ಫೂರ್ತಿ ನೀಡಲಿದೆ. ಈ ಪಂದ್ಯಾವಳಿಯು ಬೆಂಗಳೂರು ನಗರ ಮತ್ತು ಕರ್ನಾಟಕದ ಕ್ರೀಡಾ ಶ್ರೇಷ್ಠತೆಯನ್ನು ಎತ್ತಿ ಹಿಡಿಯಲಿದೆ ಎಂದು ಹೇಳಿದರು.
ಮೂರು ವಿಭಾಗಗಳಲ್ಲಿ ಪಂದ್ಯ
ಪಂದ್ಯಾವಳಿಯು ಎ, ಬಿ ಮತ್ತು ಸಿ ಎಂಬ ಮೂರು ವಿಭಾಗಗಳಲ್ಲಿ ನಡೆಯಲಿದೆ. 50 ಗ್ರ್ಯಾಂಡ್‌ಮಾಸ್ಟರ್‌ಗಳು ಮತ್ತು 2250 ಆಯ್ದ ಆಟಗಾರರು ಪಾಲ್ಗೊಳ್ಳಲಿದ್ದಾರೆ. ಪಂದ್ಯಾವಳಿಯು 50 ಲಕ್ಷ ರೂಪಾಯಿ ಬಹುಮಾನ ಹೊಂದಿದೆ. ಎಲ್ಲಾ ವಯಸ್ಸಿನ ಆಟಗಾರರು ಸ್ಪರ್ಧಿಸಬಹುದಾದ ಬ್ಲಿಟ್ಜ್ ಟೂರ್ನಮೆಂಟ್ ಅನ್ನು ಜನವರಿ 22ರಂದು ನಿಗದಿಯಾಗಲಿದೆ.
ಇದನ್ನೂ ಓದಿ : ಮಲೇಷ್ಯಾ ಓಪನ್ ಫೈನಲ್; ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಚಿರಾಗ್-ಸಾತ್ವಿಕ್ ಜೋಡಿ
ಬಿಯುಡಿಸಿಎ ಅಧ್ಯಕ್ಷೆ ಶ್ರೀಮತಿ ಸೌಮ್ಯಾ ಎಂಯು ಮಾತನಾಡಿ “ಬೆಂಗಳೂರು ಅಂತಾರಾಷ್ಟ್ರೀಯ ಗ್ರ್ಯಾಂಡ್ ಮಾಸ್ಟರ್ಸ್ ಓಪನ್ ಚೆಸ್ ಎಲ್ಲರ ಒಳಗೊಳ್ಳುವಿಕೆಯನ್ನು ಉತ್ತೇಜಿಸಲಿದೆ. ಬೆಂಗಳೂರಿಗೆ ಜಾಗತಿಕ ಚೆಸ್ ಹಬ್ ಸ್ಥಾನವನ್ನು ನೀಡಲಿದೆ. ಎಂದು ಹೇಳಿದರು.
ಕಾರ್ಯಕ್ರಮದ ಆಕರ್ಷಣೆಯನ್ನು ಹೆಚ್ಚಿಸಲು ಚೆಸ್ ದಂತಕಥೆ ಶ್ರೀ ವಿಶ್ವನಾಥನ್ ಆನಂದ್ ಅವರು ಮುಖ್ಯ ಅತಿಥಿಯಾಗಿ ಉಪಸ್ಥಿತರಿರುತ್ತಾರೆ. ಪ್ರದರ್ಶನ ಪಂದ್ಯದಲ್ಲಿನ ಅವರು ಪಾಲ್ಗೊಳ್ಳಲಿದ್ದಾರೆ. ಈ ಹತ್ತು ದಿನಗಳಲ್ಲಿ ಪ್ರತಿ ದಿನ 5000 ಪ್ರೇಕ್ಷಕರನ್ನು ನಿರೀಕ್ಷಿಸಲಾಗಿದೆ.