Site icon Vistara News

IPL 2024: ಐಪಿಎಲ್‌ ಪಂದ್ಯಕ್ಕೆ ಬೆಂಗಳೂರಿನಲ್ಲಿ ಬಿಎಂಟಿಸಿ ವಿಶೇಷ ಕಾರ್ಯಾಚರಣೆ; ಮೆಟ್ರೋ ರೈಲು ಓಡಾಟ ವಿಸ್ತರಣೆ

IPL 2024 BMTC And Namma Metro

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ ಪಂದ್ಯಾವಳಿಗಳಿಗಾಗಿ (IPL 2024) ಬಿಎಂಟಿಸಿ ವಿಶೇಷ ಬಸ್‌ (BMTC) ವ್ಯವಸ್ಥೆ ಮಾಡಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಏಪ್ರಿಲ್‌ 15 ಹಾಗೂ ಮೇ 4, 12 ಹಾಗೂ 18ರಂದು ಐಪಿಎಲ್‌ ಕ್ರಿಕೆಟ್‌ ನಡೆಯಲಿದೆ. ಹೀಗಾಗಿ ಕ್ರಿಕೆಟ್ ಪಂದ್ಯಾವಳಿಗೆ ಬಂದು-ಹೋಗುವ ವೀಕ್ಷಕರಿಗೆ ಬೇಡಿಕೆಗನುಗುಣವಾಗಿ ಬಿಎಂಟಿಸಿ ವಿಶೇಷ ವ್ಯವಸ್ಥೆ ಮಾಡಿದೆ.

ಬೆಂಗಳೂರು ನಗರದ ವಿವಿಧ ಭಾಗಗಳಿಂದ ಚಿನ್ನಸ್ವಾಮಿ ಕ್ರೀಡಾಂಗಣ ನಡುವೆ ಬಿಎಂಟಿಸಿ ಕಾರ್ಯಾಚರಿಸಲಾಗುತ್ತದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ ಬಸ್ ನಿಲ್ದಾಣ (ಹೆಚ್.ಎ.ಎಲ್ ರಸ್ತೆ), ಜನಪ್ರಿಯ ಟೌನ್ಷಿಪ್ (ಮಾಗಡಿ ರಸ್ತೆ) ಹಾಗೂ ಕಾಡುಗೋಡಿ ಬಸ್ ನಿಲ್ದಾಣ (ಹೂಡಿ ರಸ್ತೆ), ನೆಲಮಂಗಲ, ಸರ್ಜಾಪುರ ಸೇರಿದಂತೆ ಯಲಹಂಕ 5ನೇ ಹಂತ, ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ), ಆರ್.ಕೆ. ಹೆಗಡೆ ನಗರ, ಬನ್ನೇರುಘಟ್ಟ ಮೃಗಾಲಯ ಮತ್ತು ಬಾಗಲೂರು (ಹೆಣ್ಣೂರು ರಸ್ತೆ), ಕೆಂಗೇರಿ ಕೆ.ಹೆಚ್.ಬಿ. ಕ್ವಾರ್ಟರ್ಸ್ (ಎಂ.ಸಿ.ಟಿ.ಸಿ-ನಾಯಂಡಹಳ್ಳಿ), ಹೊಸಕೋಟೆಯಿಂದಲೂ ಬಸ್‌ ಕಾರ್ಯಾಚರಣೆ ಇರಲಿದೆ.

ಇದನ್ನೂ ಓದಿ: Lok Sabha Election 2024 : ಮಾವಿನ ಹಣ್ಣಿನ ಬ್ಯಾಗ್‌ ಬಿಡ್ರೀ ಎಂದವರ ಬಳಿ ಗರಿ ಗರಿ ನೋಟು; ಜಯನಗರದಲ್ಲಿ 4 ಕೋಟಿ ರೂ. ಸೀಜ್‌

ಐಪಿಎಲ್‌ ಪಂದ್ಯದಂದು ಕೊನೆ ಮೆಟ್ರೋ ರೈಲು ರಾತ್ರಿ 11.30ಕ್ಕೆ ವಿಸ್ತರಣೆ

ಟಾಟಾ ಐಪಿಎಲ್‌ ಟಿ-20 (TATA IPL T-20) ಕ್ರಿಕೆಟ್ ಪಂದ್ಯ ಹಿನ್ನೆಲೆಯಲ್ಲಿ ನಾಲ್ಕು ದಿನದಂದು ಪಂದ್ಯ ವೀಕ್ಷಣೆಗಾಗಿ ಬರುವ ಪ್ರಯಾಣಿಕರ ಅನುಕೂಲಕ್ಕಾಗಿ ಎಲ್ಲಾ ನಾಲ್ಕು ಟರ್ಮಿನಲ್ ಮೆಟ್ರೋ ನಿಲ್ದಾಣಗಳಿಂದ ಕೊನೆಯ ರೈಲು ಸೇವೆಗಳನ್ನು ರಾತ್ರಿ 11.30ಕ್ಕೆ ವಿಸ್ತರಿಸಲಾಗಿದೆ.

ಈ ಪಂದ್ಯದ ದಿನಗಳಂದು ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳನ್ನು 50 ರೂ. ಮಾರಾಟ ಮಾಡಲಾಗುತ್ತಿದೆ. ಇದು ಕಬ್ಬನ್ ಪಾರ್ಕ್ ಮತ್ತು ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಯಾವುದೇ ಇತರ ಮೆಟ್ರೋ ನಿಲ್ದಾಣಕ್ಕೆ ಒಂದೇ ಪ್ರಯಾಣಕ್ಕೆ ವಿತರಣೆಯ ದಿನದಂದು ರಾತ್ರಿ 8.00 ರಿಂದ ದಿನದ ಸೇವೆಗಳು ಕೊನೆಗೊಳ್ಳುವವರೆಗೆ ಮಾನ್ಯವಾಗಿರುತ್ತದೆ. ಈ ನಿಲ್ದಾಣಗಳಲ್ಲಿ ಟೋಕನ್ ಲಭ್ಯವಿರುವುದಿಲ್ಲ.

ಎಂದಿನಂತೆ, ಕ್ಯೂಆರ್‌ ( QR) ಕೋಡ್ ಟಿಕೆಟ್‌ಗಳು, ಸ್ಮಾರ್ಟ್ ಕಾರ್ಡ್‌ಗಳು ಮತ್ತು ಎನ್‌ಸಿಎಂಸಿ (NCMC) ಕಾರ್ಡ್‌ಗಳನ್ನು ಸಹ ಬಳಸಬಹುದು. ವಾಟ್ಸ್ ಆಪ್/ನಮ್ಮ ಮೆಟ್ರೋ ಆ್ಯಪ್/ಪೇ ಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ QR ಟಿಕೆಟ್‌ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಕಬ್ಬನ್ ಪಾರ್ಕ್ ಮತ್ತು ಎಂಜಿ ರೋಡ್ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಖರೀದಿಸಲು ಟಿಕೆಟ್ ಕೌಂಟರ್‌ಗಳಲ್ಲಿ ಜನಸಂದಣಿಯನ್ನು ತಪ್ಪಿಸಲು ಈ ವ್ಯವಸ್ಥೆ ಮಾಡಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version