Site icon Vistara News

Judicial System | ಪ್ರಾಚೀನ ನ್ಯಾಯದಾನ ವ್ಯವಸ್ಥೆಯಲ್ಲಿ ಮಾನವೀಯ ವಿಚಾರಗಳಿಗೆ ಹೆಚ್ಚು ಮೌಲ್ಯವಿತ್ತು: ಸಿಎಂ ಬೊಮ್ಮಾಯಿ

Judicial System

ಬೆಂಗಳೂರು: ಹಿಂದಿನ ನ್ಯಾಯದಾನ ವ್ಯವಸ್ಥೆಯಲ್ಲಿ (Judicial System) ಮಾನವೀಯ ಗುಣಗಳಿರುವ ವಿಚಾರಗಳಿಗೆ ಹೆಚ್ಚು ಮೌಲ್ಯ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕಾನೂನು ಮತ್ತು ಸಂಸದೀಯ ಸುಧಾರಣಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಹೊರತಂದಿರುವ ಶಾಸ್ತ್ರೀಯ ಭಾಷಾ ಯೋಜನೆಯ ನಾಲ್ಕು ಪುಸ್ತಕಗಳನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದರು.

ಮಾನವ ಸಂಘ ಜೀವಿ, ಈ ವಿಚಾರ ಇತಿಹಾಸದಲ್ಲಿ ಕಂಡುಬಂದಿದೆ. ಹೀಗಾಗಿ ನಾಗರಿಕತೆ ಬೆಳೆಸಿಕೊಂಡು ಬರಲಾಗಿದೆ. ಎಲ್ಲಿ ನಾಗರಿಕತೆ ಇದೆ ಅಲ್ಲಿ ನ್ಯಾಯದಾನದ ಅವಶ್ಯಕತೆ ಇದೆ. ನ್ಯಾಯದಾನಕ್ಕೆ ತನ್ನದೇ ಇತಿಹಾಸ ಪರಂಪರೆ ಇದೆ. ಅನಾದಿಕಾಲದಿಂದ ಹಿಡಿದು, ಮಧ್ಯ ಕಾಲ ಹಾಗೂ ಕಲಿಯುಗದಲ್ಲಿಯೂ ನ್ಯಾಯದಾನದ ವ್ಯವಸ್ಥೆ ಇದೆ ಎಂದರು.

ಇದನ್ನೂ ಓದಿ | Gujarat Election results | ಗುಜರಾತ್‌ನಲ್ಲಿ ಬಿಜೆಪಿಯ ಐತಿಹಾಸಿಕ ವಿಜಯಕ್ಕೆ ಆಪ್‌ ಕಾರಣವಾಯಿತೇ?

ಪ್ರಜಾಪ್ರಭುತ್ವದಲ್ಲಿ ಈಗ ಕ್ರೋಡೀಕರಿಸಿದ ಶಾಸನ ರಚನೆ ಹಾಗೂ ನ್ಯಾಯದಾನದ ವ್ಯವಸ್ಥೆ ಇದೆ. ಹಿಂದಿನ ಕಾಲದಲ್ಲಿ ಕ್ರೋಡೀಕರಣ ಆಗದಿದ್ದರೂ ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿದ್ದರು. ರಾಜರ ಕಾಲದಲ್ಲಿ ನ್ಯಾಯದಾನ ಹೇಗಿತ್ತು, ರಾಣಿಯರ ಆಡಳಿತದಲ್ಲಿಯೂ ಕರ್ನಾಟಕದಲ್ಲಿ ಹೇಗಿತ್ತು ಎಂಬ ಪರಂಪರೆಯ ವಿಚಾರಗಳು ಪುಸ್ತಕದಲ್ಲಿ ಬಂದಿರುವುದು ಕಾನೂನು ಆಸಕ್ತಿ ಇರುವವರಿಗೆ ಮಾರ್ಗದರ್ಶಿಯಾಗಲಿದೆ ಎಂದರು.

ಗ್ರಂಥಾಲಯಗಳಿಗೆ ವಿತರಣೆ
ಪಿಎಚ್.ಡಿ ಮಾಡಿರುವ ವ್ಯಕ್ತಿಯೊಬ್ಬರು ಕಲ್ಯಾಣ ಚಾಲುಕ್ಯರ ಆಡಳಿತದಲ್ಲಿ ನ್ಯಾಯದಾನ ವ್ಯವಸ್ಥೆ ಹೇಗಿತ್ತು, ಪ್ರಜಾಪ್ರಭುತ್ವ ಹೇಗಿತ್ತು ಎಂದು 11 ನೇ ಶತಮಾನದ ಶಿಲಾಶಾಸನಗಳನ್ನು ಅಭ್ಯಾಸ ಮಾಡಿ ತಿಳಿಸಿದ್ದಾರೆ. ಆಳುವುದು ಬೇರೆ, ಆಡಳಿತ ಮಾಡುವುದು ಬೇರೆ ಎನ್ನುವ ವ್ಯತ್ಯಾಸವನ್ನು 11 ನೇ ಶತಮಾನದಲ್ಲಿಯೇ ಗುರುತಿಸಿರುವುದು ಗಮನಾರ್ಹ. ಅಂಥದ್ದೇ ವಿಚಾರಗಳು ಇಲ್ಲಿಯೂ ಇವೆ. ಈ ಪುಸ್ತಕಗಳನ್ನು ಗ್ರಂಥಾಲಯಗಳಿಗೆ ನೀಡಿದರೆ, ಯುವ ಜನತೆ ಓದಿ ನ್ಯಾಯ, ನ್ಯಾಯಾಂಗ ಹಾಗೂ ನ್ಯಾಯದಾನ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯುವಂತಾಗಲಿ ಎಂದು ತಿಳಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ, ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಡಿಎಲ್ ಪಿಎ ನಿವೃತ್ತ ಕಾರ್ಯದರ್ಶಿ ದ್ವಾರಕಾನಾಥ್ ಬಾಬು ಮೊದಲಾದವರು ಉಪಸ್ಥಿತರಿದ್ದರು.

ಇದನ್ನೂ ಓದಿ | Gujarat Election Results | ಕರ್ನಾಟಕದಲ್ಲೂ ಪ್ರಭಾವ ಎಂದ ಬಿಜೆಪಿ; ದಿಕ್ಸೂಚಿ ಅಲ್ಲ ಎಂದ ಕಾಂಗ್ರೆಸ್‌

Exit mobile version