ಬೆಂಗಳೂರು: ಕಲಾ ದರ್ಪಣ- ಆರ್ಟ್ ರಿಫ್ಲೆಕ್ಟ್ಸ್ (Kaladarpana-Art Reflects) ವತಿಯಿಂದ ಮೇ 5ರಂದು ಪ್ರತಿಭಾ ವೇದಿಕೆ ಸೀಜನ್-4 ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ನಗರದ ನಾಗರಬಾವಿ 2ನೇ ಹಂತದ ಎನ್‌ಜಿಇಎಫ್ ಲೇಔಟ್‌ನ ಬೆಂಗಳೂರು ವಿಶ್ವವಿದ್ಯಾಲಯದ ಕಲಾಗ್ರಾಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಭಾನುವಾರ (ಮೇ 5ರಂದು) ಬೆಳಗ್ಗೆ 8.30ಕ್ಕೆ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, 9ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 11 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಅಂತರಾಷ್ಟ್ರೀಯ ಖ್ಯಾತಿಯ ತಬಲ ವಾದಕ ಪಂಡಿತ್ ಡಾ. ಸತೀಶ್ ಹಂಪಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಪ್ರಜಾವಾಣಿ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮತ್ತು ಮಾರುತಿ ಮೆಡಿಕಲ್ಸ್ ಮಾಲೀಕರು ಮಹೇಂದ್ರ ಮುಣೋತ್ ಜೈನ್ ಅವರು ಭಾಗವಹಿಸಲಿದ್ದಾರೆ. ಈ ಮೂವರು ಗಣ್ಯರು, ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಲಾದರ್ಪಣ ಪ್ರಶಸ್ತಿ ಪುರಸ್ಕೃತರು
- ಗೋ.ನಾ. ಸ್ವಾಮಿ, ಅಂತಾರಾಷ್ಟ್ರೀಯ ಖ್ಯಾತಿಯ ಜನಪದ ಗಾಯಕರು
- ವಿದುಷಿ ಅನಸೂಯ ದ್ವಾರಕನಾಥ, ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತಗಾರರು
ಇದನ್ನೂ ಓದಿ | Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್‌ನ ಪ್ರಾಧ್ಯಾಪಕ ಪ್ರೊ. ವಿ.ಎಸ್. ನಾಯಕ ಬಳಕೂರು, ಎಸ್.ಎಸ್.ವಿ.ಎಸ್.ಪಿ.ಎಸ್. ಶಾಲೆ ಪ್ರಾಂಶುಪಾಲೆ ಲತಾ ಎಸ್. ಅವರು ಆಗಮಿಸಲಿದ್ದಾರೆ. ಕಲಾ ದರ್ಪಣ- ಆರ್ಟ್ ರಿಫ್ಲೆಕ್ಟ್ಸ್ ಸಂಸ್ಥೆಯ ಹೇಮಾ ವಿನಾಯಕ್ ಪಾಟೀಲ್ ಹಾಗೂ ವಿನಾಯಕ್ ಪಾಟೀಲ್ ಅವರು ಉಪಸ್ಥಿತರಿರಲಿದ್ದಾರೆ. ಖ್ಯಾತ ನಿರೂಪಕಿ ಭವಾನಿ ಲೋಕೇಶ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.