Site icon Vistara News

ಕನ್ನಡ ಅನುಷ್ಠಾನದಲ್ಲಿ ಹಿಂದೆ ಬಿದ್ದ BDA: ಟಿ.ಎಸ್‌. ನಾಗಾಭರಣ ಅಸಮಾಧಾನ

ನಾಗಾಭರಣ

ಬೆಂಗಳೂರು: ಆಂಗ್ಲಭಾಷೆಯಲ್ಲಿ ಜಾಹಿರಾತು ನೀಡಿರುವ ಬಗ್ಗೆ ಸೂಚನೆ ನೀಡಿದ್ದರೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ(BDA) ಅಧಿಕಾರಿಗಳು ಪುನಃ ಕನ್ನಡ ದೈನಿಕಗಳಲ್ಲಿ ಆಂಗ್ಲ ಭಾಷೆಯಲ್ಲಿ ಜಾಹಿರಾತು ನೀಡುತ್ತಿರುವುದು ಬೇಜವಾಬ್ದಾರಿ ನಡೆಯಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಸಮಾಧಾನ ವ್ಯಕ್ತಪಡಿಸಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಕಚೇರಿಯಲ್ಲಿ ಗುರುವಾರ ನಡೆಸಿದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್‌. ನಾಗಾಭರಣ ಆಕ್ರೋಶ ಹೊರಹಾಕಿದ್ದಾರೆ.

ಜಾಹಿರಾತುಗಳು, ನಾಮಫಲಕಗಳು, ನಕ್ಷೆಗಳು, ರಶೀದಿಗಳು, ನಿವೇಶನ ಹಂಚಿಕೆಯ ಆದೇಶಗಳು, ಸೇವಾ ಸಿಂಧು ಸಕಾಲ ಅರ್ಜಿ ನಮೂನೆಗಳು, ಬಿಡಿಎ ನೀತಿಗಳು ಆಂಗ್ಲ ಭಾಷೆಯಲ್ಲಿಯೇ ಇವೆ. ಕಾಲಕಾಲಕ್ಕೆ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಮಾಡಿ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದರೂ ತಂತ್ರಾಂಶದ ಬಳಕೆ ಕನ್ನಡ ಅನುಷ್ಠಾನದಲ್ಲಿ ಹಿನ್ನಡೆಯಾಗಿರುವುದು ಕಂಡುಬಂದಿದೆ.

ಇದನ್ನೂ ಓದಿ| ಆಡಳಿತದ ಎಲ್ಲ ಹಂತಗಳಲ್ಲೂ ಕನ್ನಡ ಅನುಷ್ಟಾನವಾಗಲಿ: ಬೆಂಗಳೂರು ಸಂಚಾರ ಪೊಲೀಸರಿಗೆ ನಾಗಾಭರಣ ಸೂಚನೆ

ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡನೆಯಾಗಿರುವುದು ಆಯಾ ಸ್ಥಳೀಯ ಭಾಷೆಯ ಸಾರ್ವಭಾಮತ್ವವನ್ನು ಸ್ಥಾಪಿಸುವುದಕ್ಕಾಗಿಯೇ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಾಮಾಜಿಕ ಜಾಲತಾಣ, ಆ್ಯಪ್‌ಗಳು ಮತ್ತು ಸಂದೇಶಗಳು ಕಡ್ಡಾಯವಾಗಿ ಕನ್ನಡದಲ್ಲಿರುವಂತೆ ರೂಪಿಸಬೇಕು.

ಇಂಜಿನಿಯರಿಂಗ್ ವಿಭಾಗ ಮತ್ತು ನಗರ ಯೋಜನೆ ವಿಭಾಗದಲ್ಲಿ ಕೆಲವು ಟಿಪ್ಪಣಿಗಳು, ಪತ್ರ ವ್ಯವಹಾರಗಳು, ದರಪಟ್ಟಿ, ಅಂದಾಜುಪಟ್ಟಿಗಳು ಆಂಗ್ಲ ಭಾಷೆಯಲ್ಲಿರುವುದು ಕಂಡು ಬಂದಿದೆ. ಇವುಗಳನ್ನು ಶೀಘ್ರವಾಗಿ ಕನ್ನಡಕ್ಕೆ ಅನುವಾದ ಮಾಡಿ, ಇನ್ನು ಮುಂದೆ ಇವುಗಳನ್ನು ಕನ್ನಡದಲ್ಲಿ ಇರುವಂತೆ ಸಂಬಂಧಪಟ್ಟವರಿಗೆ ಆದೇಶಿಸಬೇಕು ಎಂದು ನಾಗಾಭರಣ ಸೂಚಿಸಿದರು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಅನುಷ್ಠಾನ ಸಭೆಯಲ್ಲಿ ಟಿ.ಎಸ್.ನಾಗಾಭರಣ

ಕರ್ನಾಟಕದ ರಾಜಧಾನಿ ಬೆಂಗಳೂರು ರಾಜ್ಯದ ಆಡಳಿತ ಭಾಷೆ ಕನ್ನಡ. ಭವಿಷ್ಯದ ಪೀಳಿಗೆಗೆ ಅನುಕೂಲವಾಗುವ ಪರಿಷ್ಕೃತ ನಗರ ಮಹಾ ಯೋಜನೆಯ ಕರಡು ಕನ್ನಡದಲ್ಲಿಯೇ ಇರಬೇಕು. ಬೆಂಗಳೂರು ನಗರಾಭಿವೃದ್ಧಿಗೆ ಸಂಬಂಧಪಟ್ಟ ವಿಚಾರಗಳನ್ನು ಆಡಳಿತ ಭಾಷೆಯಲ್ಲಿ ತಿಳಿದುಕೊಳ್ಳುವುದು ಪ್ರತಿಯೊಬ್ಬ ಕನ್ನಡಿಗನ ಹಕ್ಕಾಗಿರುತ್ತದೆ. ಹೀಗಾಗಿ ಇದನ್ನು ಕನ್ನಡದಲ್ಲಿ ಸಿದ್ಧಪಡಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಡಾ. ಸಂತೋಷ ಹಾನಗಲ್ಲ, ಆಪ್ತ ಕಾರ್ಯದರ್ಶಿಗಳಾದ ಮಹೇಶ, ಕನ್ನಡ ಗಣಕ ಪರಿಷತ್ತಿನ ನರಸಿಂಹಮೂರ್ತಿ, ಬಿಡಿಎ ಆಯುಕ್ತರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

ಇದನ್ನೂ ಓದಿ | ಕೆನಡಾ ಸಂಸತ್ತಲ್ಲಿ ಕನ್ನಡದ ಕಂಪು ಸೂಸಿದ ಚಂದ್ರ ಆರ್ಯ ಯಾರು?-ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ

Exit mobile version