Site icon Vistara News

ಫೆ.28ರಂದು ಕನ್ನಡದ ನಾಳೆಗಳಿಗಾಗಿ ಮಾತುಕತೆ: ಮಾಲಿಕೆ-೩ ಮತ್ತು ಪುಸ್ತಕ ಬಿಡುಗಡೆ

Kannada Nalegaligagi Mathukate programme in Bangalore on Feb 28

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಫೆ.28ರಂದು ಸಂಜೆ 5.30ಕ್ಕೆ ‘ಕನ್ನಡದ ನಾಳೆಗಳಿಗಾಗಿ ಮಾತುಕತೆ: ಮಾಲಿಕೆ-೩’ ಮತ್ತು ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ) ಅವರ ‘ಕನ್ನಡ ವಿಚಾರ-ವಿಸ್ತಾರ-ಅಸ್ಮಿತೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ನಗರದ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನ ಆವರಣದ ಶತಮಾನೋತ್ಸವ ಭವನದ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್‌ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ತಿಳಿಸಿದ್ದಾರೆ.

ಕನ್ನಡಪರ ಹಿರಿಯ ಹೋರಾಟಗಾರ ಜಿ. ಗುರು ಪ್ರಸಾದ್‌ ಅವರು ಪುಸ್ತಕ ಬಿಡುಗಡೆ ಮಾಡಲಿದ್ದು, ಮಾತುಕತೆಯಲ್ಲಿ ಪುಸ್ತಕದ ಲೇಖಕ, ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ರಾಜಶೇಖರ ಮಠಪತಿ (ರಾಗಂ) ಭಾಗವಹಿಸಲಿದ್ದಾರೆ. ಕನ್ನಡಪರ ಚಿಂತಕ ಹಾಗೂ ಸಮಾಜಸೇವಕ ಪ್ರಶಾಂತ್‌ ಕಲ್ಲೂರ್‌ ಉಪಸ್ಥಿತರಿರಲಿದ್ದು, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಪ್ರಕಾಶಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪ್ರತಿನಿಧಿ ಸದಸ್ಯ ಡಾ.ಎಸ್‌. ತಿಮ್ಮಯ್ಯ ನಾಡಗೀತೆ ಹಾಡಲಿದ್ದು, ಗೌರವ ಕಾರ್ಯದರ್ಶಿ ಎಲ್‌. ಹರ್ಷ ಸ್ವಾಗತಿಸಲಿದ್ದು, ಕಾರ್ಯಕಾರಿ ಸಮಿತಿ ಸದಸ್ಯರಾದ ಇಂದಿರಾ ಶರಣ್‌ ಜಮ್ಮಲದಿನ್ನಿ ನಿರೂಪಣೆ ಮಾಡಲಿದ್ದು, ಸಂಘ ಸಂಸ್ಥೆಗಳ ಪ್ರತಿನಿಧಿ ಡಾ. ಮಾಗಡಿ ಗಿರೀಶ್‌ ವಂದನಾರ್ಪಣೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | H D Deve Gowda: ಎಚ್.ಡಿ.ದೇವೇಗೌಡರಿಗೆ ‘ಮಣ್ಣಿನ ಮಗ’ ಕೃತಿಯ ಪ್ರಥಮ ಪ್ರತಿ; ಫೆ.29ರಂದು ಬಿಡುಗಡೆ

ಕನ್ನಡ ನಾಡು, ನುಡಿ, ಕನ್ನಡಿಗರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಚರ್ಚೆ

ಪ್ರತಿಯೊಬ್ಬ ಕನ್ನಡಿಗನಿಗೂ ಕನ್ನಡದ ಮೇಲೆ ಅಭಿಮಾನ, ಕಾಳಜಿ, ಪ್ರೀತಿ ಇರುತ್ತವೆ. ಭಾವನಾತ್ಮಕವಾಗಿ ಕನ್ನಡದ ಕೆಲಸ ಎಂದು ನಾವು ಹಲವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ಕನ್ನಡನಾಡಿನ ನಾಳೆಗಳ ಬಗ್ಗೆ ಒಂದು ಸ್ಪಷ್ಟವಾದ ಕನಸು-ಗುರಿ ನಮ್ಮೆದುರು ಇದ್ದು, ನಾವು ಮಾಡುತ್ತಿರುವ ಚಟುವಟಿಕೆಗಳು ಆ ಕನಸುಗಳನ್ನು ನನಸಾಗಿಸುವ ನಿಟ್ಟಿನಲ್ಲಿ ಯಾವ ಕೊಡುಗೆ ನೀಡುತ್ತಿವೆ ಎಂಬುದು ನಮಗೆ ಮನವರಿಕೆಯಾದರೆ, ಅದು ನಮ್ಮ ಕೆಲಸದ ವೇಗ, ದಿಕ್ಕುದೆಸೆಗಳನ್ನು ಮಾರ್ಪಡಿಸಿಕೊಳ್ಳಲು ನೆರವಾಗುತ್ತದೆ. ಹಾಗೆಲ್ಲಾ ಮಾಡಲು ಯಾವುದಾದರೂ ಸಿದ್ದ ವಿಧಾನವಿದೆಯೇ? ಕನ್ನಡ ನಾಡು-ನುಡಿ, ಕನ್ನಡಿಗರು ಎದುರಿಸುತ್ತಿರುವ ಸವಾಲುಗಳೇನು? ನಮ್ಮ ಮುಂದಿರುವ ಆಯ್ಕೆಗಳೇನು? ಎಂಬಿತ್ಯಾದಿಗಳನ್ನು ಕುರಿತು ಕನ್ನಡದ ನಾಳೆಗಳಿಗಾಗಿ ಮಾತುಕತೆ : ಮಾಲಿಕೆ ೩ ಕಾರ್ಯಕ್ರಮವನ್ನು, ಏರ್ಪಡಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಹೇಳಿದ್ದಾರೆ.

Exit mobile version