ಬೆಂಗಳೂರು: ಅಡ್ವೆಂಚರಸ್ ಕಾಮಿಡಿ ಕಥಾಹಂದರ ಒಳಗೊಂಡ ಚಿತ್ರ “ಫಾರೆಸ್ಟ್” ತನ್ನ ಟೈಟಲ್, ತಾರಾಗಣ ಹಾಗೂ ಕಾನ್ಸೆಪ್ಟ್ ಕಾರಣದಿಂದಲೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಎನ್.ಎಂ.ಕೆ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಎನ್. ಎಂ. ಕಾಂತರಾಜ್ ಅವರು ಚಿತ್ರವನ್ನು (Kannada New Movie) ನಿರ್ಮಿಸಿದ್ದಾರೆ.
ಇದನ್ನೂ ಓದಿ: Namma Metro : ನಾಳೆಯಿಂದ ಸೆಪ್ಟೆಂಬರ್ 11ರವರೆಗೂ ಪೀಣ್ಯ ಇಂಡಸ್ಟ್ರಿ ಟು ನಾಗಸಂದ್ರ ಮೆಟ್ರೋ ಓಡಾಟ ಬಂದ್!
ಈ ಸಿನಿಮಾ ಬಗ್ಗೆ ತುಂಬಾ ಕಾಳಜಿ ಇಟ್ಟುಕೊಂಡಿರುವ ನಿರ್ಮಾಪಕರು ಕ್ವಾಲಿಟಿ ವಿಷಯದಲ್ಲಿ ಎಲ್ಲೂ ಕಾಂಪ್ರಮೈಸ್ ಆಗದೆ, ಬಜೆಟ್ ಬಗ್ಗೆ ಯೋಚಿಸದೆ ಧಾರಾಳವಾಗಿ ಖರ್ಚು ಮಾಡಿದ್ದಾರೆ, ಡಬಲ್ ಇಂಜಿನ್ , ಬ್ರಹ್ಮಚಾರಿಯಂಥ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಮಾಡಿರುವ ಚಂದ್ರಮೋಹನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ, ಕಾಡಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಸ್ಟೋರಿಯನ್ನು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ.
ಹಾಸ್ಯನಟ ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್ ಹಾಗೂ ರಂಗಾಯಣ ರಘು ಅವರಂತ ಸ್ಟಾರ್ ಕಲಾವಿದರೇ ಅಭಿನಯಿಸಿದ ಮಲ್ಟಿ ಸ್ಟಾರರ್ ಚಿತ್ರ ಇದಾಗಿದೆ. ಫಾರೆಸ್ಟ್‌ನಲ್ಲಿ ನಡೆಯುವ ಅಡ್ವೆಂಚರಸ್ ಕಾಮಿಡಿ ಕಾನ್ಸೆಪ್ಟ್ ಇರುವ ಈ ಚಿತ್ರದ ಬಹುತೇಕ ಕಥೆ ಕಾಡಿನಲ್ಲಿಯೇ ನಡೆಯೋದು ಚಿತ್ರದ ಮತ್ತೊಂದು ವಿಶೇಷ. ಸದ್ಯದಲ್ಲೇ ಈ ಸಿನಿಮಾದ ಮೊದಲಪ್ರತಿ ಹೊರಬರಲಿದೆ. ಅತಿದೊಡ್ಡ ಕಳ್ಳತನವೊಂದರ ಸುತ್ತ ನಡೆಯುವ ಘಟನೆಗಳನ್ನು ಈ ಚಿತ್ರದಲ್ಲಿ ಹೇಳಲಾಗಿದೆ.
ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ಸಂಪಾಜೆ ಫಾರೆಸ್ಟ್ ಹಾಗೂ ಮಲೆ ಮಾದೇಶ್ವರ ಬೆಟ್ಟದ ಸುತ್ತಮುತ್ತ 80 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆದಿದೆ. ಕೆಲವು ಕಡೆ ಡಬಲ್ ಕಾಲ್‌ಶೀಟ್ ಆಗಿದ್ದರಿಂದ ಶೂಟಿಂಗ್ ದಿನಗಳು ಹೆಚ್ಚಾಗಿದೆ ಎಂದು ನಿರ್ಮಾಪಕ ಕಾಂತರಾಜು ತಿಳಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್ ಸಿದ್ದವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ರಿಲೀಸ್ ಮಾಡವುದಾಗಿಯೂ ಹಾಗೂ ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ನಿರ್ಮಾಪಕ ಕಾಂತರಾಜು ಅವರು ಯೋಜನೆ ಹಾಕಿಕೊಂಡಿದ್ದಾರೆ.
ಅಲ್ಲದೆ ಚಿತ್ರದ ಮತ್ತೊಂದು ಹಾಡನ್ನು ಸದ್ಯದಲ್ಲೇ ರಿಲೀಸ್ ಮಾಡುವುದಾಗಿಯೂ ನಿರ್ಮಾಪಕರು ಹೇಳಿದ್ದಾರೆ, ಚೇತನ್ ಕುಮಾರ್ ಅವರ ರಚನೆಯ ಈ ಹಾಡಿಗೆ ಗಾಯಕ ಚಂದನ್ ಶೆಟ್ಟಿ ದನಿಯಾಗಿದ್ದಾರೆ.
ಸತ್ಯಶೌರ್ಯ ಸಾಗರ್ ಹಾಗೂ ಚಂದ್ರಮೋಹನ್ ಕಥೆ, ಚಿತ್ರಕಥೆ ರಚಿಸಿದ್ದಾರೆ. ಅಲ್ಲದೆ ಸತ್ಯಶೌರ್ಯ ಸಾಗರ್ ಸಂಭಾಷಣೆ ರಚಿಸಿದ್ದಾರೆ. ಆನಂದ್‌ರಾಜಾ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ, ಅರ್ಜುನ್ ಕಿಟ್ಟು ಅವರ ಸಂಕಲನ, ಅಮರ್ ಅವರ ಕಲಾ ನಿರ್ದೇಶನ ಹಾಗೂ ಡಾ.ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಚಿಕ್ಕಣ್ಣ, ಅನೀಶ್ ತೇಜೇಶ್ವರ್, ಗುರುನಂದನ್, ಶರಣ್ಯ ಶೆಟ್ಟಿ, ಅರ್ಚನಾ ಕೊಟ್ಟಿಗೆ, ರಂಗಾಯಣ ರಘು, ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಂಜೆ, ಸೂರಜ್ ಪಾಪ್ಸ್, ಸುನೀಲ್‌ಕುಮಾರ್ ಮುಂತಾದ ಹಿರಿಯ ಹಾಗೂ ಕಿರಿಯ ಕಲಾವಿದರು ಫಾರೆಸ್ಟ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.