Site icon Vistara News

Kannada New Movie: ರಕ್ಷಿತ್ ಶೆಟ್ಟಿ ನಿರ್ಮಾಣದ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಟ್ರೇಲರ್ ರಿಲೀಸ್‌; ಸಿನಿಮಾ ಬಿಡುಗಡೆ ಯಾವಾಗ?

Kannada New Movie

ಬೆಂಗಳೂರು: ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್.ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ಅವರು ನಿರ್ಮಿಸಿರುವ, ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶಿಸಿರುವ ಹಾಗೂ ಯುವ ಕಲಾವಿದರಾದ ವಿಹಾನ್, ಅಂಕಿತ ಅಮರ್ ಮತ್ತು ಮಯೂರಿ ನಟರಾಜ ನಟಿಸಿರುವ ಸುಂದರ ದೃಶ್ಯ ಕಾವ್ಯ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಹು ನಿರೀಕ್ಷಿತ ಈ ಚಿತ್ರ (Kannada New Movie) ಸೆಪ್ಟೆಂಬರ್ 5ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಚಿತ್ರದ ಟ್ರೇಲರ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಟ್ರೇಲರ್ ಹಾಗೂ ಹಾಡುಗಳನ್ನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರೇಕ್ಷಕರು ಚಿತ್ರಮಂದಿರಗಳಿಗೂ ಬಂದು ಚಿತ್ರವನ್ನು ನೋಡಿ ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆ ಚಿತ್ರತಂಡಕ್ಕಿದೆ‌. ಟ್ರೇಲರ್ ಬಿಡುಗಡೆ ಸಮಾರಂಭದ ಆದಿಯಲ್ಲಿ ಚಿತ್ರ ತಂಡ ಪವರ್ ಸ್ಟಾರ್ ಅವರಿಗೆ ಗೌರವ ಸಲ್ಲಿಸುವ ಕಾರಣದಿಂದ ಅವರ ಚಿತ್ರಗಳ ಗೀತೆ ಹಾಡಿ ಅಭಿಮಾನ ಮೆರೆದರು.

ನಂತರ ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾತನಾಡಿ, ನಿರ್ದೇಶಕ ಚಂದ್ರಜಿತ್ ಅವರು 9 ವರ್ಷಗಳ ಹಿಂದೆ ಬ್ಲಾಗ್‌ನಲ್ಲಿ ಮೆಸೇಜ್ ಮಾಡಿದ್ದರು. ಲಿಂಕ್ ಓಪನ್ ಮಾಡಿದೆ. ಬರವಣಿಗೆ ವಿಶೇಷ ಅನಿಸಿತು. ನಂತರ ಚಂದ್ರಜಿತ್ ಅವರು ಭೇಟಿಯಾದರು‌‌. ಅವರು ಬರೆದ ಕಥೆ ಸಿನಿಮಾವಾಗಿ ರೂಪಾಂತರವಾಯಿತು. ಕನ್ನಡದಲ್ಲಿ ಈ ಕಥೆಯನ್ನು ಹೋಲುವ ಚಿತ್ರಗಳು ಬಂದಿರಬಹುದು.‌ ಆದರೆ ಈ ರೀತಿಯ ನಿರೂಪಣೆಯಿರುವ ಚಿತ್ರ ಬಂದಿಲ್ಲ. ನಾನು ಈಗಾಗಲೇ ಮೂರು ಸಲ ಚಿತ್ರ ನೋಡಿದ್ದೇನೆ. ಟ್ರೇಲರ್ ಹಾಗೂ ಸಿ‌ನಿಮಾ‌‌ ಎರಡು ಬಹಳ ಇಷ್ಟವಾಗಿದೆ. ವಿಹಾನ್ ಹಾಗು ಅಂಕಿತ ಇಬ್ಬರದು ಪ್ರಶಸ್ತಿ ಬರುವಂತಹ ಅಭಿನಯ. ಜತೆಗೆ ಮಯೂರಿ ಕೆಲವೇ ಸನ್ನಿವೇಶದಲ್ಲಿ ಕಾಣಿಸಿಕೊಂಡರೂ ಎಲ್ಲರ ಗಮನ ಸೆಳೆಯುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸೆಪ್ಟೆಂಬರ್ 5 ಚಿತ್ರ ತೆರೆ ಕಾಣಲಿದೆ. ನಾನು ಯಾವುದಕ್ಕೂ ಬೇಗ ಕಾಂಪ್ರಮೈಸ್ ಆಗುವುದಿಲ್ಲ.‌ ಆದರೆ ನನ್ನ ತಂಡ ಟ್ರೇಲರ್ ಅನ್ನು ಎರಡೇ ದಿನದಲ್ಲಿ‌‌ ಸಿದ್ದ ಮಾಡಿತು. ನನಗೂ ನೋಡಿ ಖುಷಿಯಾಯಿತು. ಇನ್ನು, ನಿರ್ಮಾಪಕ ರಕ್ಷಿತ್ ಶೆಟ್ಟಿ ಸೇರಿದಂತೆ ಇಡೀ ತಂಡದ ಸಹಕಾರದಿಂದ ಚಿತ್ರ ಕೂಡ ಚೆನ್ನಾಗಿ ಮೂಡಿಬಂದಿದೆ. ವಿಹಾನ್, ಅಂಕಿತ ಅಮರ್ ಹಾಗೂ ಮಯೂರಿ ಅವರ ಜತೆಗೆ ಈ ಚಿತದಲ್ಲಿ “ಗೀತಾಂಜಲಿ” ಚಿತ್ರದ ಖ್ಯಾತಿಯ ಗಿರಿಜಾ ಶೆಟ್ಟರ್ ಅಭಿನಯಿಸಿದ್ದಾರೆ. ಇಪ್ಪತ್ತು ವರ್ಷಗಳ ನಂತರ ಅವರು ಮತ್ತೆ ನಮ್ಮ ಚಿತ್ರದಲ್ಲಿ ನಟಿಸಿದ್ದು, ಬಹಳ ಖುಷಿಯಾಗಿದೆ. ನಮ್ಮ ಚಿತ್ರಕ್ಕೆ ನಿಮ್ಮ ಸಹಕಾರ, ಪ್ರೋತ್ಸಾಹ ಇರಲಿ ಎಂದರು ಚಂದ್ರಜಿತ್ ಬೆಳ್ಳಿಯಪ್ಪ.

ನಟ ವಿಹಾನ್ ಮಾತನಾಡಿ, ಹಾಡು ಎಲ್ಲರಿಗೂ ಇಷ್ಟವಾಗಿದೆ ಸಿನಿಮಾ ಕೂಡ ಇಷ್ಟವಾಗಲಿದೆ. ಸಿನಿಮಾ ನೋಡಿದವರು ಇನ್ನಷ್ಟು ಜನರನ್ನು ಚಿತ್ರಮಂದಿರಕ್ಕೆ ಕರೆತರುತ್ತಾರೆ ಎಂಬ ಭರವಸೆ ಇದೆ. ನಿರ್ದೇಶಕ ಚಂದ್ರಜಿತ್ ಹೇಳಿದ ಕಥೆ ಆಸಕ್ತಿಕರವಾಗಿತ್ತು. ಪ್ರತಿಭೆ ನೋಡಿ ಆಯ್ಕೆ ಮಾಡಿಕೊಳ್ಳುವಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ಸಿನಿಮಾಗೆ ಆಯ್ಕೆಯಾದ ಮೇಲೆ ಅವರಿಗೆ ಮೆಸೇಜ್ ಮಾಡಿ ಧನ್ಯವಾದ ಹೇಳಿದ್ದೆ ಎಂದರು.

ಇದನ್ನೂ ಓದಿ: Village Administrative Officer: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಪ್ಲೈ ಮಾಡಿದವರು ಗಮನಿಸಿ; ಅರ್ಜಿ, ಶುಲ್ಕ ಸ್ಥಿತಿ ಪರಿಶೀಲಿಸುವ ವಿಧಾನ ಇಲ್ಲಿದೆ

ನಟಿ ಅಂಕಿತ ಅಮರ್ ಮಾತನಾಡಿ, ಪ್ರತಿಯೊಬ್ಬರಿಗೂ ಸಾಕಷ್ಟು ಕನಸುಗಳಿವೆ. ಕನಸು, ಹೊಂಬಿಸಲಾಗಿ ಬಂದ ಚಿತ್ರ ಇಬ್ಬನಿ‌ ತಬ್ಬಿದ ಇಳೆಯಲಿ ಚಿತ್ರ. ಒಂದು ರೀತಿ ಮ್ಯಾಜಿಕ್ ಕ್ರಿಯೇಟ್ ಮಾಡಿದೆ “ಇಬ್ಬನಿ ತಬ್ಬಿದ ಇಳೆಯಲಿ”. ಈ ಚಿತ್ರದಲ್ಲಿ ಸಂದರ್ಭ ಖಳನಾಯಕ. ಸಂದರ್ಭದ ಅನುಸಾರ ಪಾತ್ರಗಳ ಪರಿಚಯ ಮಾಡಿಸಿದ್ದಾರೆ. ಕಲಾವಿದರಿಗೆ ನಿರ್ದೇಶಕ ಎನ್ನುವ ರೋಲ್ ಬಹು ಮುಖ್ಯ. ಪ್ರತಿಯೊಂದು ನಿರ್ದೇಶಕ ಚಂದ್ರಜಿತ್ ಅವರಿಂದ ಆಗಿರುವುದು. ಪ್ರೀತಿಯ ಆಚರಣೆಯನ್ನು ಸಂಗೀತ ಮತ್ತು ವಿಶ್ಯುಯಲ್ ಮೂಲಕ ಕಟ್ಟಿಕೊಡಲಾಗಿದೆ. ಈ ಆಚರಣೆಗೆ ಮತ್ತಷ್ಟು ಕಳೆ ಬರಬೇಕಾದರೆ ಚಿತ್ರಮಂದಿರಕ್ಕೆ ಬಂದು ಎಲ್ಲರೂ ಸಿನಿಮಾ‌ ನೋಡಿ ಹೊಸ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.

ನಟಿ ಮಯೂರಿ ನಟರಾಜ್ ಮಾತನಾಡಿ, ಟ್ರೇಲರ್ ಬಿಡುಗಡೆಯಾಗಿರುವುದು ಖುಷಿ ಆಗಿದೆ. ಕಣ್ಣಲ್ಲೇ ಅಭಿನಯಿಸಬೇಕು ಎನ್ನುವುದು ಸವಾಲಾಗಿತ್ತು. ಸಿನಿಮಾ ನೋಡಿ ತಿಳಿಸಿ. ಹೊಸಬರು ಇರುವ ಚಿತ್ರವನ್ನು ಈ‌ ಮಟ್ಟವನ್ನು ತೆರೆಗೆ ತರುವುದು ದೊಡ್ಡ ವಿಷಯ. ಹೊಸಬರಿಗೂ ದೊಡ್ಡಮಟ್ಟದಲ್ಲಿ ಸಿನಿಮಾ ಮಾಡಲಿ ಎಂದು ಹಾರೈಸಿದರು.

ಪರಂವಃ ಸಂಸ್ಥೆಯ ಸಿಇಓ ಶ್ರೀನಿಶ್ ಶೆಟ್ಟಿ, ಚಿತ್ರ ಕನ್ನಡದಲ್ಲಿ ಮತ್ತೊಂದು ಬ್ಲಾಕ್ ಬ್ಲಸ್ಟರ್ ಚಿತ್ರವಾಗಲಿದೆ. ಚಿತ್ರ ನೋಡಿದ ತಂಡ ನಿರ್ದೇಶಕ ಚಂದ್ರಜಿತ್ ಅವರನ್ನು ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದೇವೆ ಎಂದರು.

ಚಾರ್ಲಿ 777 ನಿರ್ದೇಶಕ ಕಿರಣ್ ರಾಜ್ ಮಾತನಾಡಿ, ಟ್ರೈಲರ್ ಚೆನ್ನಾಗಿ ಮೂಡಿಬಂದಿದೆ. ನಿರ್ದೇಶಕ ಚಂದ್ರಜಿತ್ ನಾನು ಕಿರಿಕ್ ಪಾರ್ಟಿಯಿಂದ ಜತೆಯಾಗಿ ಕೆಲಸ ಮಾಡಿದ್ದೇವೆ ಎಂದ ಅವರು, ಗೆಲ್ಲಲು ಎಲ್ಲಾ ಅರ್ಹತೆ ಇರುವ ಸಿನಿಮಾ. ಚಿತ್ರದಲ್ಲಿ ನನ್ನಗೊಂದು ಪಾತ್ರ ನೀಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Vande Bharat Express: ಇನ್ನು ಮುಂದೆ ತುಮಕೂರಿನಲ್ಲೂ ನಿಲ್ಲಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು; ಟಿಕೆಟ್‌ ದರ ಎಷ್ಟು?

ಸಂಗೀತ ನಿರ್ದೇಶಕ ಗಗನ್ ಬಡೇರಿಯಾ, ಛಾಯಾಗ್ರಾಹಕ ಶ್ರೀವತ್ಸನ್ ಸೆಲ್ವರಾಜನ್, ಸಂಕಲನಕಾರ ರಕ್ಷಿತ್ ಕಾಪು ಮತ್ತಿತರು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

Exit mobile version