Site icon Vistara News

Kannada Pustaka Habba: ಡಿ. 3ರಂದು ರಾಷ್ಟ್ರೋತ್ಥಾನ ಸಾಹಿತ್ಯದ ʼಕನ್ನಡ ಪುಸ್ತಕ ಹಬ್ಬʼ ಸಮಾರೋಪ

Kannada Pustaka Habba

ಬೆಂಗಳೂರು: ರಾಷ್ಟ್ರೋತ್ಥಾನ ಸಾಹಿತ್ಯ (Rashtrotthana Sahitya) ವತಿಯಿಂದ ಆಯೋಜಿಸಿರುವ 3ನೇ ʼಕನ್ನಡ ಪುಸ್ತಕ ಹಬ್ಬ – 2023ʼರ ಸಮಾರೋಪ ಸಮಾರಂಭವನ್ನು (Kannada Pustaka Habba-2023) ಡಿಸೆಂಬರ್‌ 3 ರಂದು ಸಂಜೆ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಪರಿಷತ್‌ ಆವರಣದ ಕೇಶವಶಿಲ್ಪ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಮೂವತ್ತಮೂರು ದಿನಗಳ ಈ ಪುಸ್ತಕ ಹಬ್ಬದಲ್ಲಿ (ನ.1 ರಿಂದ ಡಿ.3) ಈಗಾಗಲೇ ಇಪ್ಪತ್ತೇಳು ದಿನಗಳು ಕಳೆದಿದ್ದು, ಭಾನುವಾರ ಸಾಯಂಕಾಲ ಪುಸ್ತಕ ಹಬ್ಬ ಮುಕ್ತಾಯಗೊಳ್ಳಲಿದೆ.

ಸಮಾರೋಪಕ್ಕೂ ಮುನ್ನ ಡಿಸೆಂಬರ್ 2ರಂದು ‘ನವೋತ್ಥಾನದ ಅಧ್ವರ್ಯು: ಸ್ವಾಮಿ ದಯಾನಂದ ಸರಸ್ವತಿ’ ವಿಷಯವಾಗಿ ಡಾ. ರೋಹಿಣಾಕ್ಷ ಶಿರ್ಲಾಲು ಅವರು ಮಾತನಾಡಲಿದ್ದಾರೆ. ಅದೇ ದಿನ ‘ಹೊಸಕಾಲದ ಮಾಧ್ಯಮಗಳು : ಸಾಧ್ಯತೆ-ಸವಾಲುಗಳು’ ವಿಷಯವಾಗಿ ಡಿ. ಎಂ. ಘನಶ್ಯಾಮ ಮತ್ತು ರಮೇಶ ದೊಡ್ಡಪುರ ಅವರು ಸಂವಾದ ನಡೆಸಲಿದ್ದಾರೆ.

ಡಿಸೆಂಬರ್ 3ರಂದು ಬೆಳಗ್ಗೆ, ‘ಸನಾತನ ಧರ್ಮ ಮತ್ತು ವಚನ ಸಾಹಿತ್ಯ’ ವಿಷಯವಾಗಿ ಡಾ. ಜ್ಯೋತಿ ಶಂಕರ್ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದದ ಅಧ್ಯಕ್ಷತೆಯನ್ನು ರಾಷ್ಟೋತ್ಥಾನ ಪರಿಷತ್ ಅಧ್ಯಕ್ಷ ಎಂ. ಪಿ. ಕುಮಾರ್ ಅವರು ವಹಿಸಲಿದ್ದು, ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ. ವಿ. ಪರಶಿವಮೂರ್ತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಇದನ್ನೂ ಓದಿ | Raja Marga Column : ಕನ್ನಡ ಶಾಲೆಗಳೆಂಬ ಭೂಲೋಕದ ಸ್ವರ್ಗಗಳು!

ಸ್ಪರ್ಧೆಗಳ ವಿಜೇತರಿಗೆ ಬಹುಮಾನ

ಕಾರ್ಯಕ್ರಮದಲ್ಲಿ, ದಾವಣಗೆರೆಯ ಸಾಹಿತ್ಯ ಪರಿಚಾರಕರಾದ ಉಮೇಶ ಅವರನ್ನು ಗೌರವಿಸಲಾಗುತ್ತದೆ. ಕನ್ನಡ ಪುಸ್ತಕ ಹಬ್ಬದ ನಿಮಿತ್ತ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು, ಆಯ್ದ ಶಾಲೆಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಗುವುದು.

ನವೆಂಬರ್ 1ರಿಂದ ‘ಕನ್ನಡ ಪುಸ್ತಕ ಹಬ್ಬ’ದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು ಈಗಾಗಲೇ ಸಾವಿರಾರು ಜನ ಪುಸ್ತಕಪ್ರಿಯರು ಆಗಮಿಸಿ, ತಮ್ಮ ಆಯ್ಕೆಯ-ಆಸಕ್ತಿಯ ಪುಸ್ತಕಗಳನ್ನು ಖರೀದಿಸಿದ್ದಾರೆ. ಹತ್ತು ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಪುಸ್ತಕ ಹಬ್ಬಕ್ಕೆ ಭೇಟಿ ನೀಡಿ, ಬೆರಗು ಕಂಗಳಿಂದ ಪುಸ್ತಕಗಳನ್ನು ನೋಡಿ, ತಮ್ಮ ಆಯ್ಕೆಯ ಪುಸ್ತಕವನ್ನು ಖರೀದಿಸಿ ಎದೆಗವಚಿಕೊಂಡು ಸಂಭ್ರಮಿಸಿದ್ದು ವಿಶೇಷವಷ್ಟೇ ಅಲ್ಲ, ಪುಸ್ತಕಪ್ರಪಂಚದಲ್ಲಿ ಆಶಾದಾಯಕ ಸಂಗತಿ.

ವಿವಿಧ ಕಾರ್ಯಕ್ರಮಗಳು ಸಂಪನ್ನ

ಕಳೆದ ನಾಲ್ಕು ವಾರಗಳಲ್ಲಿ ಪುಸ್ತಕ ಹಬ್ಬದಲ್ಲಿ ವಿವಿಧ ರೀತಿಯ ಚಟುವಟಿಕೆಗಳು ನಡೆದಿವೆ. ನವೆಂಬರ್ 1ರಂದು ಪ್ರಸಿದ್ಧ ನಟ, ಕಲಾವಿದ ಸುಚೇಂದ್ರ ಪ್ರಸಾದ್ ಅವರು ಪುಸ್ತಕ ಹಬ್ಬವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ‘ವಿಜಯ ಕರ್ನಾಟಕ’ದ ಸಂಪಾದಕರಾದ ಸುದರ್ಶನ್ ಚನ್ನಂಗಿಹಳ್ಳಿ ಮತ್ತು ‘ಪ್ರಜ್ಞಾಪ್ರವಾಹ’ದ ರಾಷ್ಟ್ರೀಯ ಸಹ- ಸಂಯೋಜಕರಾದ ರಘುನಂದನ್ ಅವರು ಆಗಮಿಸಿದ್ದರು. ಅಂದು ಸಂಜೆಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಅವರು ‘ಸಂಸ್ಕೃತಿ’ ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ‘ಕನ್ನಡಪ್ರಭ’ ಮತ್ತು ‘ಸುವರ್ಣ ಸುದ್ದಿವಾಹಿನಿ’ಯ ಪ್ರಧಾನ ಸಂಪಾದಕರಾದ ರವಿ ಹೆಗಡೆಯವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಇನ್ನು ಶನಿವಾರ ಭಾನುವಾರಗಳಂದು ಸಾಹಿತ್ಯ-ಸಂಸ್ಕೃತಿ-ರಾಷ್ಟ್ರೀಯತೆ-ಮಾಧ್ಯಮ ಮೊದಲಾದ ವಿಷಯಗಳನ್ನು ಕುರಿತು ಕಾರ್ಯಕ್ರಮಗಳು ನಡೆದಿದ್ದು, ನವೆಂಬರ್ 4 ರಂದು ‘ಕನ್ನಡ ರಂಗಭೂಮಿ ಮತ್ತು ರಾಷ್ಟ್ರೀಯತೆ’ ವಿಷಯವಾಗಿ ಅಡ್ಡಂಡ ಕಾರ್ಯಪ್ಪ, ‘ಭಾರತೀಯತೆಯ ಸತ್ತ್ವ ‘ ಕುರಿತು ಡಾ. ಅಜಕ್ಕಳ ಗಿರೀಶ್ ಭಟ್ ಮಾತನಾಡಿದರು. ನವೆಂಬರ್ 5ರಂದು ನಿವೃತ್ತ ಭೂವಿಜ್ಞಾನಿ, ಪ್ರಸಿದ್ಧ ವಿಜ್ಞಾನಲೇಖಕರಾದ ಡಾ. ಟಿ. ಆರ್. ಅನಂತರಾಮು ಅವರೊಂದಿಗೆ ಮತ್ತು ಸಂಸ್ಕೃತಿ ಚಿಂತರು, ಅಂಕಣಕಾರರೂ ಆದ ಡಾ. ಆರತಿ ವಿ. ಬಿ. ಅವರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆದವು.

ನವೆಂಬರ್ 11ರಂದು ಅಜಿತ್ ಹನಮಕ್ಕನವರ್ ಅವರು ‘ಪುಟ್ಟ ಇಸ್ರೇಲ್ ಕಲಿಸುವ ದಿಟ್ಟತನದ ಪಾಠಗಳು’ ವಿಷಯವಾಗಿ ಮಾತನಾಡಿದರೆ, ಐವರು ಯುವ ಮಿತ್ರರು (ಪ್ರೊ. ಚೇತನ್, ಸುದೀಪ್, ಸ್ಫೂರ್ತಿ ಮುರಳೀಧರ್, ಚಂದನಾ ವೆಂಕಟೇಶ್, ಕಿರಣಕುಮಾರ್ ವಿವೇಕವಂಶಿ) ‘ನಾನೇಕೆ ಓದುತ್ತೇನೆ?’ ಎಂಬ ಕುರಿತು ಚರ್ಚೆಯನ್ನು ನಡೆಸಿಕೊಟ್ಟರು.

ನವೆಂಬರ್ 12ರಂದು ಬೆಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂ. ಸ್ವಾಮಿ ನಿತ್ಯಸ್ಥಾನಂದಜಿ ಮಹಾರಾಜ್ ಅವರು ‘ಸಾಹಿತ್ಯ ಸಾನ್ನಿಹಿತ್ಯ’ ಪುಸ್ತಕ ಲೋಕಾರ್ಪಣೆ ಮಾಡಿದರು; ದಿವಾಕರ ಹೆಗಡೆ ಅವರು ಪುಸ್ತಕವನ್ನು ಪರಿಚಯಿಸಿದರು. ಅಂದು ಸಾಯಂಕಾಲ ‘ಕನ್ನಡ ಕವಿಗಳು ಕಂಡ ಭಾರತ’ ವಿಷಯವಾಗಿ ಡಾ. ಬಿ. ವಿ. ವಸಂತಕುಮಾರ್ ವಿಶೇಷ ಉಪನ್ಯಾಸ ನೀಡಿದರು, ವಿಜಯವಾಣಿ ಪತ್ರಿಕೆಯ ಸಂಪಾದಕರಾದ ಕೆ. ಎನ್. ಚನ್ನೇಗೌಡರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ನವೆಂಬರ್ 18 ರಂದು ‘ಏಕರೂಪ ನಾಗರಿಕ ಸಂಹಿತೆ: ಸಾಧ್ಯತೆ-ಸವಾಲುಗಳು’ ವಿಷಯವಾಗಿ ಪ್ರೊ ಎ. ಷಣ್ಮುಖ ಅವರು ವಿಶೇಷ ಉಪನ್ಯಾಸ ನೀಡಿದರು. ಬಹುಶ್ರುತ ವಿದ್ವಾಂಸರಾದ ಡಾ. ಶತಾವಧಾನಿ ಆರ್. ಗಣೇಶ್ ಅವರೊಂದಿಗೆ ‘ವ್ಯಾಸಂಗದ ಹವ್ಯಾಸ’ ವಿಷಯವಾಗಿ ಸಂವಾದ ನಡೆಯಿತು. ನವೆಂಬರ್ 19ರಂದು ‘ಕನ್ನಡ ಚಳವಳಿ: ನಡೆದುಬಂದ ದಾರಿ’ ವಿಷಯವಾಗಿ ಚಲುವಾದಿ ಜಗನ್ನಾಥ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.

ನವೆಂಬರ್ 24, 25 ಎರಡು ದಿಗಳ ಕಾಲ ನಾಲ್ಕು ವಿಶೇಷ ಉಪನ್ಯಾಸಗಳು ನಡೆದಿದ್ದು, ಪೂಜ್ಯ ಸಿದ್ದೇಶ್ವರ ಸ್ವಾಮಿಗಳನ್ನು ಕುರಿತು ಸಂಗಮೇಶ್ ಪೂಜಾರ್, ಸ್ವ, ರಂಗಾ ಹರಿ ಅವರನ್ನು ಕುರಿತು ವಿ. ನಾಗರಾಜ್, ‘ಕನ್ನಡದ ವಿಶಿಷ್ಟ ಕೃತಿ – ಶಾಸನ ಪದ್ಯಮಂಜರಿ’ ಕುರಿತು ಡಾ. ಕೆ. ಆರ್. ಗಣೇಶ್, ‘ಕುವೆಂಪು ಕನ್ನಡಕ್ಕೆ ಒಲಿದು ಒಂದು ಶತಮಾನ’ ಕುರಿತು ಡಾ. ಜಿ. ಬಿ. ಹರೀಶ್ ಮಾತನಾಡಿದರು.

(ಈ ಎಲ್ಲ ಉಪನ್ಯಾಸಗಳೂ ಈಗ ರಾಷ್ಟೋತ್ಥಾನ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯ ಇವೆ)

ವಾರದ ದಿನಗಳಲ್ಲಿ, ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದಿದ್ದು, ಬೆಂಗಳೂರಿನಲ್ಲಿರುವ ಮೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳು ಮತ್ತು ರಾಷ್ಟ್ರೋತ್ಥಾನ ಸಂಗೀತ ನೃತ್ಯ ಕಲಾಕೇಂದ್ರದ ವಿದ್ಯಾರ್ಥಿಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಕೆಂಪೇಗೌಡ ನಗರದಲ್ಲಿರುವ ಸದ್ಗುರು ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದಲೂ ‘ದಾಸರಪದ ಗಾಯನ’ ಕಾರ್ಯಕ್ರಮ ನಡೆದಿದೆ.

ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ

ಪುಸ್ತಕಗಳ ಮಾರಾಟದ ದೃಷ್ಟಿಯಿಂದಲೂ ಓದುಗರಿಂದ ಉತ್ತಮ ಸ್ಪಂದನೆ ದೊರೆತಿದೆ. ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಕಟನೆಗಳಲ್ಲದೆ ಡಿವಿಜಿ, ಎಸ್. ಎಲ್. ಭೈರಪ್ಪ, ಶಿವರಾಮ ಕಾರಂತ, ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಅನಕೃ, ದೇವುಡು, ತರಾಸು, ಕೆ. ಎನ್. ಗಣೇಶಯ್ಯ, ಜೋಗಿ, ವಸುಧೇಂದ್ರ, ಕೆ. ಎಸ್. ನಾರಾಯಣಾಚಾರ್ಯ, ಸುಧಾ ಮೂರ್ತಿ ಸೇರಿದಂತೆ ಹಲವರು ಪ್ರಸಿದ್ಧ ಲೇಖಕರ ಪುಸ್ತಕಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ರಾಷ್ಟ್ರೋತ್ಥಾನ ಸಾಹಿತ್ಯದ ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ – ಲೇಖಕರ ಪುಸ್ತಕಗಳಿಗೂ ವಿಶೇಷ ರಿಯಾಯಿತಿ ನೀಡುತ್ತಿರುವುದಕ್ಕೆ ಓದುಗರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ, ‘ಮೂಲ ಪ್ರಕಾಶಕರೂ ನೀಡದ ರಿಯಾಯಿತಿ ನೀಡುತ್ತಿದ್ದೀರಿ’ ಎಂದು ನಮ್ಮ ಬೆನ್ನು ತಟ್ಟಿದ್ದಾರೆ.

ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದಂತೆ ದೊಡ್ಡ ಪ್ರಮಾಣದಲ್ಲಿ ಪುಸ್ತಕಗಳಿವೆ. ‘ಭಾರತ-ಭಾರತಿ ಪುಸ್ತಕ ಸಂಪದ’ದ ಎಂಟುನೂರಕ್ಕೂ ಹೆಚ್ಚು ಪುಸ್ತಕಗಳಲ್ಲದೆ, ಬೇರೆ ಬೇರೆ ಪ್ರಕಾಶಕರ ನೂರಾರು ವೈವಿಧ್ಯಮಯ ಪುಸ್ತಕಗಳನ್ನು ಪ್ರದರ್ಶಿಸಲಾಗಿದೆ. ಅಲ್ಲಿಯ ವೈವಿಧ್ಯವನ್ನು ಕಂಡು ಮಕ್ಕಳೂ ಸಂಭ್ರಮಿಸುತ್ತಿದ್ದಾರೆ.

ಇದನ್ನೂ ಓದಿ | Yellapur News: ಯಲ್ಲಾಪುರದಲ್ಲಿ ಡಿ. 9, 10 ರಂದು ಜಿಲ್ಲಾ ಮಟ್ಟದ ಸಾಹಿತ್ಯ ಮತ್ತು ಗಮಕ ಅಧಿವೇಶನ

ಪ್ರತಿದಿನ ಪುಸ್ತಕ ಹಬ್ಬಕ್ಕೆ ಭೇಟಿ ನೀಡುವವರಿಗಾಗಿ ‘ಲಕ್ಕಿ ಡ್ರಾ’ದ ವ್ಯವಸ್ಥೆ ಮಾಡಿದ್ದು, ವಿಜೇತರಿಗೆ ‘ಪುಸ್ತಕ ಬಹುಮಾನ’ ನೀಡಲಾಗುತ್ತಿದೆ. ಪುಸ್ತಕ ಹಬ್ಬದ ಪ್ರಯುಕ್ತ ಮಕ್ಕಳಿಗೆ ಗಾಯನ ಸ್ಪರ್ಧೆಯನ್ನೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ನಡೆಸಲಾಗಿದೆ

Exit mobile version