Site icon Vistara News

ಮಾತೃಭಾಷೆಯಲ್ಲಿ ವ್ಯವಹರಿಸುವ ಸಮಾಜವೇ ಉತ್ಕೃಷ್ಟ ಸಮಾಜ: ವಾಸವಿ ಸಂಸ್ಥೆಯ ಕನ್ನಡ ರಾಜ್ಯೋತ್ಸವದಲ್ಲಿ ಟಿ.ಎಸ್‌. ನಾಗಾಭರಣ

T S nagabharana

ಬೆಂಗಳೂರು: ಮಾತೃಭಾಷೆಯಲ್ಲಿ ವ್ಯವಹರಿಸುವ ಸಮಾಜ ಮಾತ್ರವೇ ಉತ್ಕೃಷ್ಟ ಸಮಾಜವಾಗಬಲ್ಲದು. ಅಲ್ಲಿಂದ ವಿಜ್ಞಾನಿಗಳು, ಚಿಂತಕರು ಹೊರಹೊಮ್ಮುತ್ತಾರೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಟಿ.ಎಸ್‌. ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.

ವಿ.ವಿ. ಪುರಂನ ವಾಸವಿ ವಿದ್ಯಾನಿಕೇತನ್‌ ಸಮೂಹ ಸಂಸ್ಥೆಯ ವತಿಯಿಂದ ಮಂಗಳವಾರ ಆಯೋಜಿಸಿದ್ದ ʼವಾಸವಿ ಕನ್ನಡ ಹಬ್ಬ ಹಾಗೂ ಕರುನಾಡ ಸಂಸ್ಕೃತಿಯ ಸೌರಭʼ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕನ್ನಡವನ್ನು ಇಂದು ಎಲ್ಲೆಡೆ ಕಾಣುವ ಹಾಗೂ ಕೇಳುವ ಹಾಗೆ ಮಾಡಬೇಕು. ಎಲ್ಲರೂ ನೃತ್ಯಕ್ಕೆ ನರ್ತನ ಮಾಡುವಂತೆ ನಮ್ಮ ಕನ್ನಡವನ್ನು ನಮ್ಮ ಲಯಕ್ಕೆ ಹೊಂದಿಸಬೇಕು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕವನ್ನು ಏಕೀಕರಣ ಮಾಡಿದ ನಂತರ ಕರ್ನಾಟಕ ಎಂದು ಮರುನಾಮಕರಣವಾಯಿತು. 67 ವರ್ಷದಿಂದ ಈ ಸಂಭ್ರಮವನ್ನು ಆಚರಿಸುತ್ತಿದ್ದೇವೆ ಎಂದರು.

ಇಂದು ಸಂಪರ್ಕ ಭಾಷೆಯಾಗಿ ಇಂಗ್ಲಿಷ್‌ ಬೇಕಾಗುತ್ತದೆ ಎಂದು ತಿಳಿಸಿದ ನಾಗಾಭರಣ ಅವರು, ಆದರೆ ಮಾತೃಭಾಷೆ, ಪರಿಸರ ಭಾಷೆಯಾಗಿ ಕನ್ನಡ ಬೇಕಾಗುತ್ತದೆ. ಒಂದು ಐವತ್ತು ಕಿಲೋಮೀಟರ್‌ ದೂರ ಸಾಗಿದರೆ ವಿಭಿನ್ನ ಕನ್ನಡ ಕಾಣಿಸುತ್ತದೆ. ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಧಾರವಾಡ, ಹಾವೇರಿ… ಹೀಗೆ ವಿಭಿನ್ನ ರೀತಿಯಲ್ಲಿ ಮಾತನಾಡಲಾಗುತ್ತದೆ. ಬೆಂಗಳೂರೊಂದರಲ್ಲೇ 107 ರೀತಿಯಲ್ಲಿ ಕನ್ನಡವನ್ನು ಮಾತನಾಡಲಾಗುತ್ತದೆ ಎಂದರು.

ಗಾಯಕಿ ಆಕಾಂಕ್ಷ ಬಾದಾಮಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಎಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣವನ್ನು ನೀಡುವುದಿಲ್ಲವೋ, ಎಲ್ಲಿ ಮಾತೃಭಾಷೆಯಲ್ಲಿ ಸಂವಹನ ನಡೆಸುವುದಿಲ್ಲವೋ ಅದು ಮಧ್ಯಮ ಸಮಾಜ ನಿರ್ಮಾಣ ಆಗುತ್ತದೆ ಎಂದು ನಾಗಾಭರಣ ಹೇಳಿದರು. ಮಾತೃಭಾಷೆಯನ್ನು ಬಳಸುವ ಸಮಾಜ ಉತ್ಕೃಷ್ಟವಾಗುತ್ತದೆ. ಭಾರತರತ್ನ ಪ್ರೊ. ಸಿ.ಎನ್‌.ಆರ್‌. ರಾವ್‌ ಸೇರಿ ಕರ್ನಾಟಕದ ಉತ್ಕೃಷ್ಟ ವಿಜ್ಞಾನಿಗಳು ಕನ್ನಡ ಮಾಧ್ಯಮದಲ್ಲೇ ಓದಿದವರು ಎನ್ನುವುದನ್ನು ಎಲ್ಲರೂ ತಿಳಿಯಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವಿಎನ್‌ ಟ್ರಸ್ಟ್‌ ಖಜಾಂಚಿ ಡಾ.ಐ.ಎಸ್‌. ಪ್ರಸಾದ್‌, ಪ್ರಧಾನ ಕಾರ್ಯದರ್ಶಿ ಬಿ.ಎಸ್‌. ಅರುಣ್‌ ಕುಮಾರ್‌, ಕಾಲೇಜಿನ ಅಧ್ಯಕ್ಷರಾದ ಡಾ. ಮಾನಂದಿ ಎನ್‌. ಸುರೇಶ್‌, ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು.

ಇದನ್ನೂ ಓದಿ | Kannada Rajyotsava | ರಾಜ್ಯಾದ್ಯಂತ ವಿಜೃಂಭಣೆಯ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ, ಭುವನೇಶ್ವರಿ ಮೆರವಣಿಗೆ

Exit mobile version