Site icon Vistara News

Bhashavidya Kannada: ಡಿ. 17ರಂದು ʼಕನ್ನಡದಲ್ಲಿ ಮಾತಾಡೋಣʼ ಆನ್‌ಲೈನ್‌ ಕಾರ್ಯಾಗಾರ

KannaDadhalli MaathaaDoNa

ಬೆಂಗಳೂರು: ನಗರದ ಬನಶಂಕರಿಯ ಭಾಷಾವಿದ್ಯಾ ಕನ್ನಡ ಕಲಿಕಾ ಕೇಂದ್ರದ (Bhashavidya Kannada) ವತಿಯಿಂದ ಡಿಸೆಂಬರ್‌ 17ರಂದು ಕನ್ನಡೇತರರು, ವಲಸಿಗರಿಗೆ ʼಕನ್ನಡದಲ್ಲಿ ಮಾತಾಡೋಣʼ (Kannadadhalli Maathaadona) ಆನ್‌ಲೈನ್‌ ಕನ್ನಡ ಕಲಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಡಿಸೆಂಬರ್‌ 17ರಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಜೂಮ್‌ ಆ್ಯಪ್ ಮೂಲಕ ಆನ್‌ಲೈನ್‌ ಕಾರ್ಯಾಗಾರ ನಡೆಯಲಿದೆ. ಬೆಳಗ್ಗೆ 9.15ಕ್ಕೆ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಗಳಾಗಿ ವಿಸ್ತಾರ ನ್ಯೂಸ್‌ ಕಾರ್ಯನಿರ್ವಾಹಕ ನಿರ್ದೇಶಕ ಕಿರಣ್‌ ಕುಮಾರ್‌ ಡಿ.ಕೆ. ಮತ್ತು ನಿವೃತ್ತ ಅಧಿಕಾರಿ ಎ.ಆರ್‌. ವೆಂಕಟರಾಮನ್‌ ಭಾಗಿಯಾಗಲಿದ್ದಾರೆ.

12 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಆಸಕ್ತ ಮಕ್ಕಳು ಮತ್ತು ವಯಸ್ಕರು ಕನ್ನಡ ಕಲಿಕಾ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದ್ದು, ಪದಸಂಪತ್ತು ವೃದ್ಧಿ, ವಾಕ್ಯ ರಚನೆ, ಸಂವಾದ ಸೇರಿ ವಿವಿಧ ಚಟುವಟಿಕೆಗಳು ನಡೆಯಲಿದೆ. ನೋಂದಣಿ ಶುಲ್ಕ 200 ರೂ. ಇರಲಿದ್ದು, ಆಸಕ್ತರು ಹೆಸರು ನೋಂದಣಿ ಮಾಡಿಸಬಹುದು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಉಚಿತ ಕೈಪಿಡಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 9844613467, 9845933246 ಸಂಪರ್ಕಿಸಬಹುದು ಎಂದು ಭಾಷಾವಿದ್ಯಾ ಸಂಸ್ಥೆಯ ವೀಣಾರಾವ್ ಮತ್ತು ವಾಸುಕಿ ಷಣ್ಮುಖಪ್ರಿಯ ತಿಳಿಸಿದ್ದಾರೆ.

ಕಾರ್ಯಾಗಾರಕ್ಕೆ ಹೆಸರು ನೋಂದಣಿ ಮಾಡಿಸಲು ಈ ಲಿಂಕ್‌ ಕ್ಲಿಕ್‌ ಮಾಡಿ

ಸಂಜೆ 5.15ಕ್ಕೆ ಲೇಖಕಿ ವೀಣಾ ರಾವ್‌ ರಚನೆಯ ʼಕನ್ನಡದಲ್ಲಿ ಮಾತನಾಡೋಣʼ ಸ್ವಯಂ ಕನ್ನಡ ಕಲಿಕಾ ಅಭ್ಯಾಸ ಪುಸ್ತಕವನ್ನು ಬಿಡುಗಡೆ ಮಾಡಲಾಗುತ್ತದೆ. ಪ್ರಿಸಮ್‌ ಪುಸ್ತಕಾಲಯದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಾಣೇಶ್‌ ಸಿರಿವರ ಭಾಗವಹಿಸಲಿದ್ದಾರೆ. ಪ್ರಿಸಮ್‌ ಮತ್ತು ಏಜ್ಯಾಸ್ ಫೆಡರಲ್ ಲೈಫ್‌ ಇನ್ಶೂರೆನ್ಸ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಸ್ತಾರ ನ್ಯೂಸ್‌ ಚಾನೆಲ್‌ ಮಾಧ್ಯಮ ಸಹಯೋಗ ನೀಡಿದೆ.

ಇದನ್ನೂ ಓದಿ | CBSE Board Exam: ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ

ಕನ್ನಡ ಭಾಷಾಭಿವೃದ್ಧಿ ಕಾರ್ಯದಲ್ಲಿ ತೊಡಗಿರುವ ʼಭಾಷಾವಿದ್ಯಾʼ

ಬೆಂಗಳೂರಿನಲ್ಲಿ ಬಹುತೇಕ ಅನ್ಯಭಾಷಿಕರು ಕನ್ನಡದಲ್ಲಿ ಮಾತನಾಡುತ್ತಿಲ್ಲ. ಬದಲಾಗಿ ಅವರು ತಮ್ಮ ಭಾಷೆಯನ್ನು ನಮ್ಮ ಮೇಲೆ ಹೇರುತ್ತಿರುವ ವಿಚಾರ ಮತ್ತು ಅದರಿಂದ ಉಂಟಾಗುತ್ತಿರುವ ಪ್ರಮಾದ, ಗೊಂದಲ, ಅಹಿತಕರ ಘಟನೆಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿರುವ ವಿಷಯಗಳು ತಮ್ಮಿಂದಲೇ ಬೆಳಕಿಗೆ ಬರುತ್ತಿವೆ. ಆದರೆ ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಅವರಿಗೆ ಕನ್ನಡ ಕಲಿಸುವ ಪ್ರಯತ್ನಗಳು ನಮ್ಮಿಂದ ಆಗಬೇಕಾದ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದೂ ಅಷ್ಟೇ ಸತ್ಯ. ಅವರಿಗೆ ವಿಭಿನ್ನ ರೀತಿಯಲ್ಲಿ ಕನ್ನಡ ಕಲಿಸುವ ಕೆಲಸಗಳು ಆಗಬೇಕಿವೆ.

ಅನ್ಯಭಾಷಿಕರು ಕನ್ನಡ ಕಲಿತು ಕನ್ನಡ ಭಾಷೆಯನ್ನೂ ಮತ್ತು ಕನ್ನಡ ಭಾಷಿಕರನ್ನು ಪ್ರೀತಿಸುವಂತಾಗಬೇಕು. ನಿಯಮಗಳ ಮೂಲಕ ಸರ್ಕಾರಗಳಿಂದ ಒಂದಿಷ್ಟು ಕೆಲಸಗಳಾದರೂ, ಅವರಿಗೆ ಕನ್ನಡನುಡಿ ಕಲಿಸುವ ಕೆಲಸವನ್ನು ಖಾಸಗೀ ಸಂಸ್ಥೆಗಳೇ ವಹಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ದಿಸೆಯಲ್ಲಿ ಕನ್ನಡ ಕಲಿಕೆ ಮತ್ತು ಭಾಷಾಭಿವೃದ್ಧಿಯ ಕುರಿತಾದ ಕೆಲಸಗಳನ್ನು ಆರಂಭದಿಂದಲೂ ಮಾಡಿಕೊಂಡು ಬರುತ್ತಿರುವ ಭಾಷಾವಿದ್ಯಾ ಕನ್ನಡ ಕಲಿಕಾ ಕೇಂದ್ರದಿಂದ ಈಗ ಕನ್ನಡೇತರರು ಅಥವಾ ವಲಸಿಗರಿಗಾಗಿ ಕನ್ನಡ ಮಾತುಗಾರಿಕೆಯ ಒಂದು ದಿನದ ಆನ್‌ಲೈನ್‌ ಕಾರ್ಯಾಗಾರ ಆಯೋಜಿಸಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version