Site icon Vistara News

Karnataka Election : ಮಾರ್ಚ್‌ 1ರಿಂದ ಬಿಜೆಪಿ ರಥಯಾತ್ರೆ, ಪ್ರತಿ ತಾಲೂಕಿನಲ್ಲಿ ಫಲಾನುಭವಿಗಳ ಸಮಾವೇಶ; ಬೊಮ್ಮಾಯಿ ಹೇಳಿಕೆ

BJP Meeting

#image_title

ಬೆಂಗಳೂರು: ʻʻಮಾರ್ಚ್ 1 ರಿಂದ ರಾಜ್ಯಾದ್ಯಂತ ಬಿಜೆಪಿ ರಥಯಾತ್ರೆ (Karnataka Election) ಆರಂಭವಾಗಲಿದ್ದು, ಮೂರು ತಿಂಗಳು ಎಲ್ಲರೂ ದಣವರಿಯದೇ ಕೆಲಸ ಮಾಡಬೇಕುʼʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪಕ್ಷದ ಪ್ರಭಾರಿಗಳಿಗೆ ಹೇಳಿದ್ದಾರೆ‌. ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಬಿಜೆಪಿಯ ವಿಧಾನಸಭಾ ಕ್ಷೇತ್ರಗಳ ಪ್ರಭಾರಿಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ʻʻಚುನಾವಣಾ ಸಮಯದಲ್ಲಿ ಜನರನ್ನು ಸೆಳೆಯಲು ಪ್ರತಿ ಕ್ಷೇತ್ರದಲ್ಲಿ ಎಸ್ಸಿ, ಎಸ್ಟಿ, ಒಬಿಸಿ, ಮಹಿಳಾ, ಯುವಕ, ರೈತ ಮೋರ್ಚಾಗಳ ವತಿಯಿಂದ ತಾಲೂಕು ಮಟ್ಟದ ಸಮ್ಮೇಳನ ಮಾಡಬೇಕು. ರಾಜ್ಯ ಸರ್ಕಾರದ ಯೋಜನೆಗಳನ್ನು ಕ್ಷೇತ್ರಮಟ್ಟದಲ್ಲಿ ಫಲಾನುಭವಿಗಳ ಸಮ್ಮೇಳನ ಮಾಡಿ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡಬೇಕುʼʼ ಎಂದು ಬೊಮ್ಮಾಯಿ ಸೂಚಿಸಿದರು.

ʻʻಮುಂದಿನ ಮೂರುವರೆ ತಿಂಗಳು ಕರ್ನಾಟಕದ ಚುನಾವಣೆಗೆ ಪ್ರಮುಖ ಪಾತ್ರ ವಹಿಸುವವರೆಲ್ಲರೂ ಒಂದೆಡೆ ಸೇರಿದ್ದೇವೆ. ಒಂದು ವಿಧಾನಸಭಾ ಕ್ಷೇತ್ರ ಗೆಲ್ಲಲು ಯಾವ ರೀತಿ ರಣನೀತಿಯನ್ನು ರೂಪಿಸಬೇಕು ಎನ್ನುವ ಗುರುತರವಾದ ಜವಾಬ್ದಾರಿ ನಿಮ್ಮ ಮೇಲಿದೆʼʼ ಎಂದು ಬೊಮ್ಮಾಯಿ ಹೇಳಿದರು.

ʻʻರಾಜ್ಯದಲ್ಲಿ ಬೇರೆ ಪಕ್ಷಗಳು ನಕಾರಾತ್ಮಕ ರೀತಿಯಲ್ಲಿ ಮತ ಪಡೆಯಲು ಪ್ರಯತ್ನ ಸದಾಕಾಲ ಮಾಡುತ್ತಿರುತ್ತಾರೆ. ಆದರೆ ನಾವು ಜನಪರ ಕೆಲಸ ಮಾಡಿ, ಅವರ ಜೀವನ ಗುಣಮಟ್ಟವನ್ನು ಎತ್ತರಕ್ಕೇರಿಸಲು ಎಲ್ಲ ಸಹಕಾರ ಮಾಡೋಣ. ಅದರ ವರದಿಯನ್ನು ಜನರ ಮುಂದೆ ಇಟ್ಟು ನಾವು ನಮ್ಮ ಪಕ್ಷಕ್ಕೆ ಮತ ಕೇಳುಬೇಕು ಎನ್ನುವುದು ನಮ್ಮ ಪಕ್ಷದ ಧೋರಣೆಯಾಗಿದೆ. ಹೀಗಾಗಿ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಾಗ ಕೇವಲ ಸ್ವಾರ್ಥ, ಸ್ವಜನಪಕ್ಷಪಾತ, ಭ್ರಷ್ಟಾಚಾರ, ಇನ್ನೊಬ್ಬರ ಅವಹೇಳನ ಮಾಡಿಕೊಂಡು ನಕಾರಾತ್ಮಕವಾಗಿ ಮತಗಳನ್ನು ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತವೆʼʼ ಎಂದರು ಬೊಮ್ಮಾಯಿ.

ʻʻಕಾಂಗ್ರೆಸ್‌ ನಮ್ಮ ಸರ್ಕಾರದ ಮೇಲೆ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಮಾನಹಾನಿಗೆ ಪ್ರಯತ್ನಿಸುತ್ತಿದೆ. ಒಂದು ವೇಳೆ ಆರೋಪಕ್ಕೆ ಸಂಬಂಧಿಸಿ ಯಾವುದೇ ಒಂದು ಪುರಾವೆ ಕೊಟ್ಟರೆ, ನಿಷ್ಪಕ್ಷಪಾತವಾಗಿ ನಾವು ತನಿಖೆ ಮಾಡಿಸುತ್ತೇವೆ. ಭ್ರಷ್ಟಾಚಾರ ತಡೆಯಲು ಟೆಂಡರ್ ಪರಿಶೀಲನಾ ಸಮಿತಿ ರಚನೆ ಮಾಡಿದ್ದೇವೆ. ಅಲ್ಲಿ ಅದರ ಪರಿಶೀಲನೆ ಆಗುತ್ತದೆ. ಪಾರದರ್ಶಕವಾಗಿ ನಾವು ವ್ಯವಸ್ಥೆಗಳನ್ನು ನಾವು ರೂಪಿಸಿದ್ದೇವೆʼʼ ಎಂದು ಹೇಳಿದರು.

ʻʻಇದು ಚುನಾವಣೆಯ ಸಮಯ, ದಣಿವರಿಯದೆ ಕೆಲಸ ಮಾಡಬೇಕು. ಮಾರ್ಚ್ 1 ರಿಂದ ನಮ್ಮ ರಥಯಾತ್ರೆ ಆರಂಭವಾಗಲಿದೆ. ಅಲ್ಲಿ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಿ ಮತ್ತೆ ಬಿಜೆಪಿ ಸರ್ಕಾರವನ್ನು ತರುವ ಕೆಲಸ ಮಾಡಬೇಕು. ಈ ಚುನಾವಣೆಯ ಸಾರಥಿಗಳು ನೀವುʼʼ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹಾಗೂ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ : Tender Scam: ಕಾಂಗ್ರೆಸ್‌ ಕಾಲದ ಟೆಂಡರ್‌ ಅಕ್ರಮಗಳಿಗೆ ಉತ್ತರ ಕೊಡಲಿ: ಟೆಂಡರ್‌ ಆರೋಪಕ್ಕೆ ಸಿಎಂ ಬೊಮ್ಮಾಯಿ ಉತ್ತರ

Exit mobile version