ರಾಯಚೂರು: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ವಾಕ್ ಸಮರ ನಡೆಯುತ್ತಿರುವ ಬೆನ್ನಲ್ಲೇ, ರಾಯಚೂರಿನಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ವಾಟ್ಸ್ ಆ್ಯಪ್ ಸ್ಟೇಟಸ್ ವಿಚಾರಕ್ಕೆ ಶುರುವಾದ ಗಲಾಟೆ, ಬಿಜೆಪಿ ಕಾರ್ಯಕರ್ತನ ಬೆರಳು ತುಂಡರಿಸುವ ಮಟ್ಟಕ್ಕೆ ತಲುಪಿದೆ.
ಭಾನುವಾರ ರಾತ್ರಿ ಸುಮಾರು 11 ಗಂಟೆ ಹೊತ್ತಿಗೆ ರಾಯಚೂರು ನಗರದ ಅಂದ್ರೂನ್ ಖಿಲ್ಲಾ ಏರಿಯಾವೇ ರಣಾಂಗಣವಾಗಿತ್ತು. ಅಲ್ಲಿ ರಕ್ತ ಚಿಮ್ಮಿತ್ತು. ಆದರೆ, ಸದರ್ ಬಜಾರ್ ಪೊಲೀಸರು ಅಲರ್ಟ್ ಆಗದೆ ಇರುತ್ತಿದ್ದರೆ ಸಾವೇ ಸಂಭವಿಸುತ್ತಿತ್ತು. ಇಲ್ಲಿ ಬಿಜೆಪಿ ಬೆಂಬಲಿಗ ಆಸಿಫ್‌ನ ಬಲಗೈ ಮೂರು ಬೆರಳುಗಳು ಕಟ್ ಆಗಿದ್ದರೆ ಕಾಂಗ್ರೆಸ್ ಬೆಂಬಲಿಗ ಮೊಹಮ್ಮದ್ ವಾಸಿಮ್ ಮೇಲೂ ಹಲ್ಲೆಯಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾಗಿರೋ ಬಿಜೆಪಿ ಬೆಂಬಲಿಗ ಆಸೀಪ್ ಇದೇ ರಾಯಚೂರು ನಗರದ ಅಂದ್ರೂನ್ ಖಿಲ್ಲಾ ಏರಿಯಾದ ವಾರ್ಡ್ 7ರ ನಿವಾಸಿ. ಮತ್ತೊಬ್ಬ ಗಾಯಾಳು ಮೊಹಮ್ಮದ್ ವಾಸಿಮ್ ಕೂಡ ಇದೇ ಏರಿಯಾದವ. ಅಷ್ಟೇ ಅಲ್ಲ, ಮೊಹಮ್ಮದ್ ವಾಸೀಮ್ ವಾರ್ಡ್ ನಂಬರ್ 7 ರ ಕಾಂಗ್ರೆಸ್ ಕೌನ್ಸಲರ್ ತಿಮ್ಮಾರೆಡ್ಡಿ ಆಪ್ತ. ಇತ್ತ ಬಿಜೆಪಿಯ ಆಸೀಫ್ ಸಹೋದರ ಅಹ್ಮದ್ ಬೇಗ್ ಕಾಂಟ್ರಾಕ್ಟರ್ ಆಗಿದ್ದಾರೆ. ಈತ ರಾಯಚೂರು ನಗರ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಬೆಂಬಲಿಗ.
ಇತ್ತೀಚೆಗೆ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಇದೇ ಕಾಂಟ್ರಾಕ್ಟರ್ ಅಹ್ಮದ್ ಬೇಗ್ ನೇತೃತ್ವದಲ್ಲಿ ಕಾರ್ಯಕ್ರಮವೊಂದನ್ನು ಮಾಡಿದ್ದರು. ಆ ವಿಡಿಯೊವನ್ನು ಕಾಂಗ್ರೆಸ್ ಪಾಳಯದವರು ಟ್ರೋಲ್ ಮಾಡುತ್ತಿದ್ದರು. ಈ ಕಾಂಟ್ರಾಕ್ಟರ್ ಅಹ್ಮದ್ ಬೇಗ್ ಬಿಜೆಪಿಯ ದಲಾಲ್ ಅಂದ್ರೆ ಬಿಜೆಪಿ ಬ್ರೋಕರ್ ಅಂತ ಟ್ರೋಲ್ ಮಾಡುತ್ತಿದ್ದರಂತೆ.
ಇದರಿಂದ ಕಾಂಟ್ರಾಕ್ಟರ್ ಅಹ್ಮದ್ ಬೇಗ್ ಬೆಂಬಲಿಗರು, ಕುಟುಂಬಸ್ಥರು ಬೇಸರಗೊಂಡಿದ್ದರು. ಈ ಮಧ್ಯೆಯೂ ಈ ರೀತಿ ಟ್ರೋಲ್‌ಗಳನ್ನು ಫೇಸ್ಬುಕ್, ವಾಟ್ಸ್ ಆಪ್ ಮೂಲಕ ಹರಿಬಿಡಲಾಗುತ್ತಿತ್ತು. ಇದೇ ವಿಚಾರ ಭಾನುವಾರವೂ ಪ್ರಸ್ತಾಪವಾಗಿದೆ. .ಆಗ ಈ ಬಿಜೆಪಿ-ಕಾಂಗ್ರೆಸ್ ಬೆಂಬಲಿಗರ ನಡುವೆ ಕಿರಿಕ್ ಆಗಿದೆ. ನಂತ್ರ ಕಾಂಗ್ರೆಸ್‌ನ ಮೊಹಮ್ಮದ್ ವಾಸೀಮ್ ಮಚ್ಚು ತಂದರೆ ಇನ್ನೂ ಕೆಲವರು ದೊಡ್ಡ ದೊಣ್ಣೆಗಳನ್ನು ತಂದು ಬಿಜೆಪಿ ಬೆಂಬಲಿಗ ಗುತ್ತಿಗೆದಾರ ಅಹ್ಮದ್ ಬೇಗ್ ಕಡೆಯವರ ಮೇಲೆ ಹಲ್ಲೆ ನಡೆಸಿದ್ದಾರಂತೆ. ಆಗ ವಿರೋಧಿ ಬಣದ ಕೈಗೆ ಸಿಕ್ಕಿ ಅಹ್ಮದ್ ಬೇಗ್ ಸಹೋದರ ಆಸೀಫ್ ಮೇಲೆ ಮಚ್ಚು ಬೀಸಲಾಗಿತ್ತಂತೆ. ಆದರೆ ಆ ಮಚ್ಚನ್ನು ಆಸೀಫ್ ಕೈಯಿಂದ ಹಿಡಿದ ಕಾರಣದಿಂದ ಅವರ ಬಲಗೈನ ಮೂರು ಬೆರಳುಗಳು ಕಟ್ ಆಗಿವೆಯಂತೆ.
ಸದ್ಯ ಘಟನೆ ಸಂಬಂಧ ಸದರ್ ಬಜಾರ್ ಪೊಲೀಸರು ಕೇಸ್, ಕೌಂಟರ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : Inside Story: ಬರಗಾಲದಲ್ಲಿ ಎರಡು ಬೆಳೆ ತೆಗೆಯೋ ಎಂಟಿಬಿ ಐಡಿಯಾಕ್ಕೆ ಹೌಹಾರಿದ ಯಡಿಯೂರಪ್ಪ!: ರೋಲ್ಸ್ ರಾಯ್ಸ್ ಏರಿ ಹೊರಟ ನಾಗರಾಜು