ಬೆಂಗಳೂರು: ಕರ್ನಾಟಕ ಮಹಿಳಾ ಯಕ್ಷಗಾನ ತಂಡ 25ರ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ರಜತ ಮಹೋತ್ಸವದ ಲಾಂಛನ ಮತ್ತು ಬ್ಯಾನರ್ ಅನ್ನು ನಗರದ ನಯನ ಸಭಾಂಗಣದಲ್ಲಿ ಭಾನುವಾರ ಮುಖ್ಯಮಂತ್ರಿಗಳ ವಾರ್ತಾಧಿಕಾರಿ ಸಹನಾ. ಎಂ ಅವರು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಮುಖ್ಯಮಂತ್ರಿಗಳ ವಾರ್ತಾಧಿಕಾರಿ ಸಹನಾ. ಎಂ ಅವರು, ಮಹಿಳಾ ಯಕ್ಷಗಾನ ತಂಡವೊಂದನ್ನು 25 ವರ್ಷಗಳ ಕಾಲ ಮುನ್ನಡೆಸಿ, ಇನ್ನು ಮುಂದಕ್ಕೂ ಗಟ್ಟಿ ಹೆಜ್ಜೆ ಹಾಕುತ್ತಿರುವುದು ಅಭಿಮಾನದ ವಿಷಯ. ವಿದ್ಯಾರ್ಥಿಗಳು, ಐಟಿ ಉದ್ಯೋಗಿಗಳು, ಮತ್ತಿತರ ಕ್ಷೇತ್ರಗಳ ಮಹಿಳೆಯರನ್ನು ಒಂದೆಡೆ ಸೇರಿಸಿ ಯಕ್ಷಗಾನ ಕಳಿಸಿ ಕಲೆಯನ್ನು ಉಳಿಸುವುದು ಮಾತ್ರವಲ್ಲ, ಕನ್ನಡ ಕಂಪನ್ನು ಪಸರಿಸುತ್ತಿರುವುದು ಶ್ಲಾಘನೀಯ ಕಾರ್ಯ. ಅದರ ಹಿಂದಿನ ಧೀ ಶಕ್ತಿ ಗೌರಿ.ಕೆ ಮತ್ತು ಅವರ ಪತಿ, ಯಕ್ಷ ಗುರು ಶ್ರೀನಿವಾಸ ಸಾಸ್ತಾನ ದಂಪತಿಗಳ ಕಾರ್ಯ ಮೆಚ್ಚುವಂಥದ್ದು ಎಂದರು.
ಇದನ್ನೂ ಓದಿ | Book Release : ವಿಕ್ರಮ್, ಸಮನ್ವಿತ ಪ್ರಕಾಶನದ ನಾಲ್ಕು ಪುಸ್ತಕಗಳು ಲೋಕಾರ್ಪಣೆ
ಸಮಾರಂಭದಲ್ಲಿ ಶ್ರೀ ಲಕ್ಷ್ಮಿ ನರಸಿಂಹ ಟ್ರಸ್ಟ್ ಸ್ಥಾಪಕ ಪಿ.ಸಿ. ಮುಕುಂದ ರಾವ್ ಮಾತನಾಡಿ, ಯಕ್ಷಗಾನ ಕಲೆ ಶ್ರೇಷ್ಠ ಕಲೆ. ನಗರೀಕರಣದ ಸಂದರ್ಭದಲ್ಲೂ ಇಂತಹ ಕಲೆಯನ್ನು ಬೆಂಗಳೂರಿನಲ್ಲಿ ಉಳಿಸಲು ಪ್ರಯತ್ನಿಸುತ್ತಿರುವ ಸಾಸ್ತಾನ ದಂಪತಿಗಳಿಗೆ ಶುಭ ಹಾರೈಸುತ್ತಿರುವುದಾಗಿ ಹೇಳಿದರು.
ಯಕ್ಷಗಾನ ಪ್ರದರ್ಶನ
ಕಾರ್ಯಕ್ರಮದಲ್ಲಿ ಯಕ್ಷಗಾನ ಪೂರ್ವ ರಂಗವನ್ನು ತಂಡದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ತಂಡದ ಕಲಾವಿದೆಯರು ವೀರ ಅಭಿಮನ್ಯು ಮತ್ತು ಭಕ್ತ ಚಂದ್ರಹಾಸ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಪ್ರದರ್ಶಿಸಿದರು. ಕಲಾವಿದರಾಗಿ ಕೆ. ಗೌರಿ, ಆಶಾ ರಾಘವೇಂದ್ರ, ಸುಮಾ ಅನಿಲ್ ಕುಮಾರ್, ಶಶಿಕಲಾ, ಅನ್ನಪೂರ್ಣೇಶ್ವರಿ , ಚೈತ್ರ ಆರ್. ಆಚಾರ್, ಅನುಷಾ ಸುರೇಶ್ , ಕುಮಾರಿಯರಾದ ಚೈತ್ರಾ ಭಟ್, ಸೌಜನ್ಯಾ ನಾವುಡ, ದೀಕ್ಷಾ ಭಟ್, ಅಭಿಶ್ರೀ, ಸರಯೂ ವಿಠಲ್ , ಕ್ಷಮಾ ಪೈ, ಮಾನ್ಯ, ಪವಿತ್ರ, ಗಗನ, ಸಹನಾ, ಧೃತಿ ಅಮ್ಮೆಂಬಳ ಭಾಗವಹಿಸಿದ್ದರು.
ಇದನ್ನೂ ಓದಿ | Uttara Kannada News: ಆಗಸ್ಟ್ 5ರಂದು ಪಹರೆ ವೇದಿಕೆಯಿಂದ ಪರಿಸರ ಜಾಗೃತಿಗಾಗಿ ಹಸಿರು ನಡಿಗೆ
ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ನಾವುಡ, ವಿನಯ್ ರಾಜೀವ್ ಶೆಟ್ಟಿ, ಮೃದಂಗದಲ್ಲಿ ಸಂಪತ್ ಆಚಾರ್ಯ, ಚೆಂಡೆಯಲ್ಲಿ ಸುಬ್ರಹ್ಮಣ್ಯ ಎಂ ಮತ್ತು ನರಸಿಂಹ ಆಚಾರ್ ಇದ್ದರು. ಎರಡೂ ಪ್ರಸಂಗಗಳನ್ನು ಯಕ್ಷ ಗುರುಗಳಾದ ಶ್ರೀನಿವಾಸ ಸಾಸ್ತಾನ ಮತ್ತು ಕೆ. ಗೌರಿ ನಿರ್ದೇಶಿಸಿದರು.
ರೇವತಿ ಸುರೇಶ್ , ಮಟ್ಟಿ ರಾಮಚಂದ್ರ ರಾವ್, ಕರ್ನಾಟಕ ಮಹಿಳಾ ಯಕ್ಷಗಾನ ತಂಡದ ನಿರ್ದೇಶಕಿ ಗೌರಿ ಕೆ . ಉಪಸ್ಥಿತರಿದ್ದರು.