ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಗೆ (Bengaluru rains) ರಾಜಧಾನಿ ಬೆಂಗಳೂರಿನ ಕೆಲವು ಏರಿಯಾಗಳು ಅಕ್ಷರಶಃ ದ್ವೀಪದಂತಾಗಿದೆ. ಹಲವು ಕಡೆ ಮಳೆಯು (Bengaluru Rains Effect) ಅವಾಂತರವನ್ನೇ ಸೃಷ್ಟಿಸಿತ್ತು. ಹೊಸೂರು ರಸ್ತೆಯ ರೂಪೇನಾ ಅಗ್ರಹಾರ, ಹರಳೂರು ಜಂಕ್ಷನ್, ನಾಯಂಡಹಳ್ಳಿ, ಶೇಷಾದ್ರಿಪುರಂ ರೈಲ್ವೆ ಅಂಡರ್ ಪಾಸ್, ವಿಜಯನಗರ ಧನಂಜಯ ಪ್ಯಾಲೇಸ್ ಬಳಿ ಸೇರಿದಂತೆ ಬನ್ನೇರುಘಟ್ಟ ರಸ್ತೆ, ನಾಗಾರ್ಜುನ ಜಂಕ್ಷನ್, ಅನಿಲ್ ಕುಂಬ್ಳೆ ಸರ್ಕಲ್, ಕಲ್ಯಾಣ ನಗರ ಬ್ರಿಡ್ಜ್, ಹೆಸರಘಟ್ಟ ಬಳಿ ಮಳೆ ನೀರು (karnataka weather) ಸಂಗ್ರಹವಾಗಿತ್ತು. ಇದರಿಂದಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.
ನ್ಯೂ ಏರ್‌ಪೋರ್ಟ್ ರಸ್ತೆಯ ಹೆಣ್ಣೂರು ಬಂಡೆ ಬಳಿ ರಸ್ತೆಯು ಕೆರೆಯಂತಾಗಿತ್ತು. ರಸ್ತೆ ಮೇಲ್ಭಾಗ ಸಂಪೂರ್ಣ ನೀರು ನಿಂತಿರುವ ಕಾರಣದಿಂದಾಗಿ ವಾಹನ ಸಂಚಾರಕ್ಕೆ ತೊಡಕು ಉಂಟಾಗಿದೆ.
ಮಳೆಯಿಂದ ಲೀ ಮೆರಿಡಿಯನ್ ಅಂಡರ್ ಪಾಸ್ ಜಲಾವೃತಗೊಂಡಿತ್ತು. ಅಂಡರ್ ಪಾಸ್‌ನಲ್ಲಿ ನೀರು ತುಂಬಿರುವ ಕಾರಣ ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಲಾಗಿದೆ. ಇತ್ತೀಚೆಗಷ್ಟೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೂಫ್ ಟಾಪ್ ಹಾಕಿ ಅಂಡರ್ ಪಾಸ್ ನಿರ್ಮಾಣ ಮಾಡಲಾಗಿತ್ತು. ಇಷ್ಟಾದರೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಮತ್ತೊಮ್ಮೆ ಬಿಬಿಎಂಪಿ ಕಳಪೆ ಕಾಮಗಾರಿ ಬಟಾ ಬಯಲಾಗಿತ್ತು.
ಇದನ್ನೂ ಓದಿ: Karnataka Weather : ಬೆಂಗಳೂರಲ್ಲಿ ಸಂಜೆಗೆ ಮಳೆ ಕಾಟ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಟ್ರ್ಯಾಕ್ಟರ್ ಮೂಲಕ ರಕ್ಷಣೆ
ಬೆಳ್ಳಂದೂರು ಬಳಿಯ ಯಮಲೂರುನಿಂದ ಕರಿಯಮ್ಮನ ಅಗ್ರಹಾರ ಸಂಪರ್ಕ ಕಲ್ಪಿಸುವ ರಸ್ತೆಯು ಜಲಾವೃತಗೊಂಡಿದೆ. ಸುಮಾರು 1 ಕಿಲೋ ಮೀಟರ್‌ವರೆಗೂ ರಸ್ತೆ ಮೇಲ್ಭಾಗ ಮಳೆ ನೀರು ನಿಂತಿದೆ. ಈ ಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಮೂಲಕ ರೋಡ್ ಕ್ಲೋಸ್ ಮಾಡಿದ್ದಾರೆ.
ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕಾರು, ಬೈಕ್‌ಗಳು ನೀರಿನಲ್ಲಿ ಸಿಲುಕಿಕೊಂಡಿತ್ತು. ಇದರಿಂದಾಗಿ ವಾಹನ ಸವಾರರು ಪರದಾಡಿದರು. ನಿವಾಸಿಗಳು ರಸ್ತೆ ದಾಟಲು ಹರ ಸಾಹಸಪಟ್ಟಿದ್ದರು. ಟ್ರ್ಯಾಕ್ಟರ್ ಮೂಲಕ ನೀರಿನಲ್ಲಿ ಸಿಲುಕಿಕೊಂಡಿದ್ದವರನ್ನು ರಕ್ಷಿಸಲಾಗಿದೆ. ಕಾರುಗಳನ್ನು ಸ್ಥಳದಲ್ಲೇ ಬಿಟ್ಟು ಮನೆ ಸೇರಿದ್ದಾರೆ.
ಮಲ್ಲೇಶ್ವರಂ ಬಿಜೆಪಿ ಕಚೇರಿ ಎದುರು ಒಳ ಚರಂಡಿ ಕಾಲುವೆ ತುಂಬಿದ್ದರಿಂದ ಮ್ಯಾನ್ ಹೋಲ್‌ನಿಂದ ಕೊಳಚೆ ನೀರು ಭಾರಿ ಪ್ರಮಾಣದಲ್ಲಿ ರಸ್ತೆಯಲ್ಲಿ ಹರಿಯುತ್ತಿತ್ತು. ಇನ್ನು ಶೇಷಾದ್ರಿಪುರಂ ರೈಲ್ವೆ ಅಂಡರ್ ಪಾಸ್ ಜಲಾವೃತವಾಗಿದ್ದರಿಂದ ರಸ್ತೆ ಬಂದ್ ಆಗಿ ಸಂಚಾರಕ್ಕೆ ಅಡಚಣೆ ಉಂಟಾಯಿತು. ಹೀಗಾಗಿ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳಿಗೆ ಮಾರ್ಗ ಬದಲಾವಣೆ ಮಾಡುವಂತೆ ಸೂಚಿಸಿದರು.
ಬೆಂಗಳೂರಲ್ಲಿ ಎಲ್ಲೆಲ್ಲಿ ಎಷ್ಟು ಮಳೆ?
ನಗರದ ಚೌಡೇಶ್ವರಿನಗರದಲ್ಲಿ36 ಮಿ.ಮೀ, ಅಟ್ಟೂರು 27 ಮಿ.ಮೀ, ಯಲಹಂಕ 25 ಮಿ.ಮೀ, ಹೊರಮಾವು 40 ಮಿ.ಮೀ , ಬಾಗಲಗುಂಟೆ 43 ಮಿ.ಮೀ, ದೊಡ್ಡಬಿದರಕಲ್ಲು42 ಮಿ.ಮೀ, ಪೀಣ್ಯ ಕೈಗಾರಿಕಾ ಪ್ರದೇಶ 54 ಮಿ.ಮೀ, ಕೆಂಗೇರಿ 65 ಮಿ.ಮೀ, ನಾಗಪುರ 50 ಮಿ.ಮೀ, ಕೊಟ್ಟಿಗೆಪಾಳ್ಯ48 ಮಿ.ಮೀ, ರಾಜಮಹಲ್ ಗುಟ್ಟಹಳ್ಳಿ25 ಮಿ.ಮೀ, ವಿ.ವಿ.ಪುರಂ 20 ಮಿ.ಮೀ, ಆರ್.ಆರ್.ನಗರ 35 ಮಿ.ಮೀ, ಉತ್ತರಹಳ್ಳಿ 27 ಮಿ.ಮೀ, ಎಚ್.ಗೊಲ್ಲಹಳ್ಳಿ62 ಮಿ.ಮೀ, ಹೊರಮಾವು 38 ಮಿ.ಮೀ, ವಿದ್ಯಾಪೀಠ 27 ಮಿ.ಮೀ, ಬಿಟಿಎಂ ಲೇಔಟ್ 30 ಮಿ.ಮೀ, ಕೋಣನಕುಂಟೆ 27 ಮಿ.ಮೀ, ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ28 ಮಿ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ