ಬೆಂಗಳೂರು: ಸತ್ಸಂಗ ಫೌಂಡೇಶನ್ ವತಿಯಿಂದ ಫೆಬ್ರವರಿ 27ರಿಂದ 29ರವರೆಗೆ ʼನಚಿಕೇತ ಎಂಬ ಸತ್ಯಕಾಮನ ಕಥೆʼ ಕಠೋಪನಿಷತ್ತಿನ ಪ್ರವಚನವನ್ನು ನಗರದ ಮಲ್ಲೇಶ್ವರದ ಚೌಡಯ್ಯ ಸ್ಮಾರಕ ಭವನದಲ್ಲಿ ಆಯೋಜಿಸಲಾಗಿದೆ. ಸಮಾಜ ಸುಧಾರಕ, ಆಧ್ಯಾತ್ಮಿಕ ಮಾರ್ಗದರ್ಶಿ, ಶಿಕ್ಷಣ ತಜ್ಞ, ಲೇಖಕ ಹಾಗೂ ವೈಶ್ವಿಕ ಭಾಷಣಕಾರ ಶ್ರೀ ಎಂ (ಪದ್ಮಭೂಷಣ ಪುರಸ್ಕೃತ ಶ್ರೀ ಮಧುಕರ್ ನಾಥ್) ಅವರು ಇಂಗ್ಲಿಷ್‌ನಲ್ಲಿ ಪ್ರವಚನ ನೀಡಲಿದ್ದಾರೆ.
ಫೆಬ್ರವರಿ 27ರಿಂದ 29ರವರೆಗೆ ಪ್ರತಿದಿನ ಸಂಜೆ 6ರಿಂದ 7ಗಂಟೆವರೆಗೆ ಕಠೋಪನಿಷತ್ತಿನ ಪ್ರವಚನ ನಡೆಯಲಿದ್ದು, ಕಾರ್ಯಕ್ರಮಕ್ಕೆ ವಿಸ್ತಾರ ನ್ಯೂಸ್ ಮಾಧ್ಯಮ ಸಹಯೋಗ ನೀಡಿದೆ. ಮೊದಲ ದಿನವಾದ ಫೆ. 27ರಂದು ಸಂಜೆ 4.55ರಿಂದ 5.10ರವರೆಗೆ ವಿಸ್ತಾರ ನ್ಯೂಸ್‌ನಿಂದ ಪ್ರವಚನಕಾರ ಶ್ರೀ ಎಂ ಅವರ ಸಂದರ್ಶನ ನಡೆಯಲಿದೆ. ಸಂಜೆ 5.44ಕ್ಕೆ ಕಾರ್ಯಕ್ರಮ ಉದ್ಘಾಟನೆ ನೆರವೇರಲಿದ್ದು, ಈ ವೇಳೆ ಗಣ್ಯರು ಕನ್ನಡ ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ನಂತರ 6ರಿಂದ 7ಗಂಟೆವರೆಗೆ ಕಠೋಪನಿಷತ್ತಿನ ಪ್ರವಚನ (ಇಂಗ್ಲಿಷ್‌ನಲ್ಲಿ) ನಡೆಯಲಿದೆ.
ಇದನ್ನೂ ಓದಿ | ಫೆ.28ರಂದು ಕನ್ನಡದ ನಾಳೆಗಳಿಗಾಗಿ ಮಾತುಕತೆ: ಮಾಲಿಕೆ-೩ ಮತ್ತು ಪುಸ್ತಕ ಬಿಡುಗಡೆ
ಮುಖ್ಯ ಅತಿಥಿಗಳಾಗಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಫೋರ್ಟಿಸ್ ಆಸ್ಪತ್ರೆಯ ಚೀಫ್ ಕಾರ್ಡಿಯೋಥೊರಾಸಿಕ್ & ವಾಸ್ಕ್ಯುಲರ್ ಸರ್ಜನ್ ಡಾ. ವಿವೇಕ್ ಜವಳಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹಾಗೂ ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಮಾಜಿ ಡಿಜಿಪಿ ಅಜಯ್ ಕುಮಾರ್ ಸಿಂಗ್, ಇಸ್ರೋ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಭಾಗವಹಿಸಲಿದ್ದಾರೆ.